ಹೀಗೆ ಬಂದು ಹಾಗೆ ಹೋದ ಸಚಿವರು!

2 ತಿಂಗಳ ಬಳಿಕ ಬಂದರೂ ಪ್ರಗತಿ ಸಭೆ ನಡೆಸಲಿಲ್ಲ •ಆಡಳಿತಾರೂಢ ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲೂ ಅಸಮಾಧಾನ

Team Udayavani, Jul 2, 2019, 8:55 AM IST

ಹಾವೇರಿ: ಸಚಿವ ಜಮೀರ್‌ ಅಹ್ಮದಖಾನ್‌ ರೈತರೊಂದಿಗೆ ನಿಂತುಕೊಂಡೇ ಕೆಲ ನಿಮಿಷ ಮಾತನಾಡಿ ಮರಳಿದರು.

ಹಾವೇರಿ: ಬರೋಬರಿ ಎರಡು ತಿಂಗಳ ಬಳಿಕ ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದಖಾನ್‌, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಸಭೆ, ಚರ್ಚೆ ನಡೆಸದೆ ಮರಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲೆ ಭೇಟಿಯ ಪ್ರವಾಸ ಪಟ್ಟಿ ಪ್ರಕಟವಾದಾಗ ಜನರು, ಸಚಿವರು ಈಗಲಾದರೂ ಜಿಲ್ಲೆಯ ಅಭಿವೃದ್ಧಿ ಕಡೆ ಲಕ್ಷ್ಯ ವಹಿಸಬಹುದು, ಬರಪೀಡಿತ ಜಿಲ್ಲೆಯ ಪರಿಸ್ಥಿತಿ ಅವಲೋಕಿಸಬಹುದು, ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಬಹುದು, ಮಂದಗತಿಯಲ್ಲಿ ಸಾಗಿರುವ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಬಹುದು, ಜಿಲ್ಲೆಯ ಜನರ ಬೇಡಿಕೆ, ಸಮಸ್ಯೆಗಳನ್ನು ಆಲಿಸಬಹುದೆಂದೇ ಭಾವಿಸಿದ್ದರು.ಆದರೆ, ಸಚಿವರು ಇದಾವುದನ್ನೂ ಮಾಡದೆ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವಾಪಸ್‌ ಹೋಗಿರುವುದು ಸಾರ್ವಜನಿಕರನ್ನು ಕೆರಳಿಸಿದೆ.

ಒಂದು ಕಡೆ ಮುಖ್ಯ ಮಂತ್ರಿಯವರು ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಹತ್ತಿರದಿಂದ ಸ್ಪಂದಿಸುವ ಕೆಲಸ ಮಾಡುತ್ತಿದ್ದರೆ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಜಮೀರ್‌ ಅಹ್ಮದಖಾನ್‌ ಮಾತ್ರ ಜಿಲ್ಲೆಯ ಜನರ ಕೈಗೆ ಸಿಗದೇ ಇರುವುದು ಸಾರ್ವಜನಿಕರಷ್ಟೇ ಅಲ್ಲ ಆಡಳಿತಾರೂಢ ಮೈತ್ರಿ ಪಕ್ಷಗಳ ಕಾರ್ಯಕರ್ತರು, ಮುಖಂಡರಲ್ಲಿ ಅಸಮಾಧಾನ ಮೂಡಿಸಿದೆ.

ಸೋಮವಾರ ಬೆಳಿಗ್ಗೆ 10.30ರ ಹೊತ್ತಿಗೆ ನಗರಕ್ಕಾಗಮಿಸಿದ ಸಚಿವ ಜಮೀರ್‌ ಅಹ್ಮದಖಾನ್‌, ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಕೆಲ ನಿಮಿಷ ಇದ್ದು ಬಳಿಕ ಶಿಶುವಿನಹಾಳದಲ್ಲಿ ಏರ್ಪಡಿಸಿದ್ದ ‘ಬಂಗಾರದಹಬ್ಬ’ ಕಾರ್ಯಕ್ರಮದಲ್ಲಿ ಭಾಗಿ ಯಾಗಿಯಾದರು. ಅಧಿಕಾರಿಗಳ ಸಭೆ ಮಧ್ಯಾಹ್ನ 3ಗಂಟೆಗೆ ನಿಗದಿಪಡಿಸಲಾಗಿತ್ತು. ಬಳಿಕ ಆ ಸಭೆಯನ್ನು 2ಗಂಟೆಗೆ ನಿಗದಿಪಡಿಸಿದರು. ಆದರೆ, ಸಚಿವರು ಮಾತ್ರ ಸಭೆ ಏರ್ಪಡಿಸಿದ್ದ ಜಿಲ್ಲಾಧಿಕಾರಿ ಕಚೇರಿಗೆ 4.30ರ ಹೊತ್ತಿಗೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸದೆ ಸಮಯವಾಗಿದೆ ಎಂದು ಹೇಳಿ, ಅಲ್ಲೇ ಇದ್ದ ರೈತರೊಂದಿಗೆ ಕೆಲ ನಿಮಿಷ ಸಮಾಲೋಚಿಸಿ, ತರಾತುರಿಯಲ್ಲಿ ವಾಪಸ್ಸಾದರು.

ಪೊಲೀಸರಿಂದ ತಡೆ: ಬಹು ದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬರುವ ವಿಷಯ ತಿಳಿದು ಬೇಡಿಕೆಗಳ ಮನವಿ ಸಲ್ಲಿಸಲೆಂದು ನೂರಾರು ಜನರು ಜಿಲ್ಲಾಡಳಿತ ಭವನಕ್ಕೆ ಬಂದಿದ್ದರು. ಸಚಿವರು ಬರುವ ವೇಳೆಗೆ ಪೊಲೀಸರು ಅವರನ್ನು ಜಿಲ್ಲಾಡಳಿತ ಭವನದ ಕಟ್ಟಡದ ಹೊರಗೆ ಕಳುಹಿಸಿದರು. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರಾದರೂ ಅವಕಾಶ ಮಾಡಿಕೊಡಲಿಲ್ಲ.

ಒಟ್ಟಾರೆ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಜಮೀರ್‌ ಅಹ್ಮದ್‌ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.

ಎರಡು ತಿಂಗಳ ನಂತರ ಬಂದ ಸಚಿವರು ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯ ಪ್ರಗತಿ ಏನಾಗಿದೆ ಎಂಬುದರ ಬಗ್ಗೆ ಗಮನ ಹರಿಸಬೇಕಿತ್ತು. ವಿಳಂಬವಾಗಿ ಬಂದರೂ ಸಭೆ ನಡೆಸಿ ಪ್ರಗತಿ ಪರಿಶೀಲಿಸದಷ್ಟು ಸಂಯಮ ಸಚಿವರಿಗೆ ಇಲ್ಲದೇ ಇರುವುದು ಅವರಿಗೆ ಜಿಲ್ಲೆಯ ಮೇಲಿರುವ ನಿರಾಸಕ್ತಿ ತೋರಿಸುತ್ತದೆ. ಜಿಲ್ಲೆಯ ಉಸ್ತುವಾರಿ ನಿರ್ವಹಣೆ ಮಾಡಲು ಆಸಕ್ತಿ ಇಲ್ಲದಿದ್ದರೆ ಈ ಜವಾಬ್ದಾರಿಯನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು.•ಶಿವಾನಂದ ಗುರುಮಠ, ರೈತ ಮುಖಂಡರು.

 

•ಎಚ್.ಕೆ.ನಟರಾಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ