ಬೋಧನೆಗೆ ಹೊಸ ತಂತ್ರಜ್ಞಾನ ಬಳಸಿ

•ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ•ಮಕ್ಕಳಲ್ಲಿ ವಿಜ್ಞಾನ-ತಂತ್ರಜ್ಞಾನದ ಆಸಕ್ತಿ ಹೆಚ್ಚಿಸಿ

Team Udayavani, Jul 23, 2019, 10:34 AM IST

ಹಾವೇರಿ: ಪುನಃಶ್ಚೇತನ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಉದ್ಘಾಟಿಸಿದರು.

ಹಾವೇರಿ: ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿದ್ದು ಉಪನ್ಯಾಸಕರು ಅವುಗಳ ಬಳಕೆ ಮೂಲಕ ಮಕ್ಕಳಿಗೆ ಶಿಕ್ಷಣನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ವಿಜ್ಞಾನ ಉಪನ್ಯಾಸಕರ ಸಂಘ ವತಿಯಿಂದ ವಿಜ್ಞಾನ ಉಪನ್ಯಾಸಕರಿಗೆ ಏರ್ಪಡಿಸಿದ್ದ ಪುನಃಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಆಸಕ್ತಿ ಹುಟ್ಟುವುದಕ್ಕಾಗಿ ಕಾಲೇಜು ಮುಂದಾಗಬೇಕು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕು ಎಂದರು.

ಕಾಲೇಜಿನಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕ್ಲಾಸ್‌, ತ್ರಿಡಿ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಶೇಷ ತರಬೇತಿ ನೀಡುವ ಮೂಲಕ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಬೇಕು.

ಮಕ್ಕಳಲ್ಲಿಯ ಸಣ್ಣಪುಟ್ಟ ನ್ಯೂನತೆಗಳನ್ನು ಹೋಗಲಾಡಿಸಿ ಅವರಲ್ಲಿ ಧೈರ್ಯ ತುಂಬಿ, ಅವರಿಗೆ ಅವಮಾನವಾಗದಂತೆ ಮಾಡಿದಲ್ಲಿ ಮಾತ್ರ ಶಿಕ್ಷಣದಲ್ಲಿ ಒಳ್ಳೆಯ ಬದಲಾವಣೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಉಪನ್ಯಾಸಕರು ಶ್ರಮ ವಹಿಸಿ ದುಡಿಯಬೇಕು ಎಂದರು.

ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಮತ್ತು ಅದಕ್ಕೆ ಕಾರಣ ಏನು ಎಂದು ತಿಳಿದು ಬೋಧಿಸಬೇಕು. ಸಮಸ್ಯೆಯ ಬೇರು ಮಟ್ಟಕ್ಕೆ ಇಳಿದು ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ವಿಜ್ಞಾನ ವಿದ್ಯಾರ್ಥಿಗಳಿಗೋಸ್ಕರ ಇರುವ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಆಗುತ್ತಿಲ್ಲ. ಪ್ರಯೋಗಾಲಯದ ಪರಿಕರಗಳನ್ನು ಅವರ ಕೈಯಲ್ಲಿ ನೀಡಿ ಬಳಕೆಗೆ ಪ್ರೋತ್ಸಾಹಿಸಿದಾಗ ಮಾತ್ರ ಉತ್ತಮ ಫಲಿತಾಂಶ ಬರುತ್ತದೆ. ಆ ಪ್ರಯತ್ನದಲ್ಲಿ ಉಪನ್ಯಾಸಕರು ಮುಂದಾದಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಸಿ. ಪೀರಜಾದೆ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಶೇ.7ರಷ್ಟು ಹೆಚ್ಚಳವಾಗಿದ್ದು, ಪಿಯುಸಿ ಉಪನ್ಯಾಸಕರ ಶ್ರಮದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಉಪನ್ಯಾಸಕರು ಶ್ರಮವಹಿಸಿ ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ಫಲಿತಾಂಶ ಬರಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಸಿಇಟಿ ಪರಿಶೀಲನಾ ಘಟಕ ಸ್ಥಾಪನೆ ಮಾಡಲಾಗಿದ್ದು, ಈ ಘಟಕದಲ್ಲಿ 2800 ವಿದ್ಯಾರ್ಥಿಗಳು ಸಿಇಟಿ ಘಟಕವನ್ನು ಬಳಕೆ ಮಾಡಿಕೊಂಡಿದ್ದಾರೆ. ಈ ಸಿಇಟಿ ಘಟಕ ಪ್ರಾರಂಭವಾಗಿದ್ದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಸಿಇಟಿ ಘಟಕದಿಂದಲ್ಲೆ ಜಿಲ್ಲೆಯ 34 ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜ್‌ಗೆ ಆಯ್ಕೆಯಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಹೆಚ್ಚಿನ ಫಲಿತಾಂಶ ಬರಲು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಡಮಕ್ಕಳಿಗೆ ಅನುನೂಲವಾಗಲೆಂದು ತಾಲೂಕುವಾರು ಕೇಂದ್ರಗಳಲ್ಲಿ ನುರಿತ ಉಪನ್ಯಾಸಕರಿಂದ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷ ಎಸ್‌.ಎಚ್. ಕಬ್ಬಿಣಕಂತಿಮಠ, ಪ್ರಾಚಾರ್ಯ ನೌಕರರ ಸಂಘದ ಕಾರ್ಯಾಧ್ಯಕ್ಷ ಎಚ್.ಬಿ. ಲಿಂಗಯ್ಯ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ನಿಸ್ಸೀಗೌಡ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಭು ಹಿಟ್ನಳ್ಳಿ, ಕಾಲೇಜಿನ ಪ್ರಾಚಾರ್ಯ ಜಿ.ಪಿ. ಪೂಜಾರ, ನಿವೃತ್ತ ಪ್ರಾಚಾರ್ಯ ಎಚ್.ಎಸ್‌. ಚಿನ್ನಿಕಟ್ಟಿ, ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪ್ರಕಾಶ ಬಾರಕೇರ ಸೇರಿದಂತೆ ಇನ್ನಿತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ