ಹಳ್ಳಿ ಸೊಗಡಿನ ಹಟ್ಟಿಹಬ್ಬ ಸಂಭ್ರಮ

Team Udayavani, Oct 30, 2019, 1:59 PM IST

ಹಾವೇರಿ: ದೀಪಾವಳಿ ಹಬ್ಬದ ಮೂರನೇ ದಿನವಾದ ಮಂಗಳವಾರ ಬಲಿಪಾಡ್ಯ (ಬಲಿಪ್ರತಿಪದೆ)ವನ್ನು ಜಿಲ್ಲೆಯಲ್ಲಿ “ಹಟ್ಟಿ ಹಬ್ಬ’ ಎಂಬ ಹೆಸರಿನಿಂದ ಅಪ್ಪಟ ಗ್ರಾಮೀಣ  ಸಂಪ್ರದಾಯಗಳೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಹಟ್ಟಿ ಲಕ್ಕವ್ವ ಪ್ರತಿಷ್ಠಾಪನೆ: ಕಳೆದೆರಡು ದಿನಗಳಿಂದ ಮಳೆ ಕಡಿಮೆಯಾಗಿ ಪ್ರಖರ ಬಿಸಿಲಿನ ವಾತಾವರಣವಿರುವುದರಿಂದ ಹಬ್ಬದ ಸಡಗರ ಹೆಚ್ಚಲು ಕಾರಣವಾಯಿತು. ಜಿಲ್ಲೆಯಾದ್ಯಂತ ದೇವಿ ಹಟ್ಟಿ ಲಕ್ಕವ್ವ ಪೂಜೆ, ಗೋಪೂಜೆ, ಲಕ್ಷ್ಮೀ ಪೂಜೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಬಲಿಪಾಡ್ಯದಂದು ಜಿಲ್ಲೆಯಲ್ಲಿ ಹಟ್ಟಿ ಲಕ್ಕಮ್ಮನ ಪೂಜೆ ವಿಶೇಷವಾಗಿ ಆಚರಿಸಲಾಯಿತು. ರೈತರು ಮನೆಯಲ್ಲಿರುವ ಕೃಷಿ ಬಳಕೆ ಸಾಮಗ್ರಿ ತೊಳೆದು ಅರಿಶಿಣ-ಕುಂಕುಮ, ಹೂಗಳಿಂದ ಸಿಂಗರಿಸಿ, ಹಟ್ಟಿ ಲಕ್ಕವ್ವನ ಪ್ರತಿಷ್ಠಾಪಿಸಿ ಪೂಜಿಸಿದರು.

ಸಡಗರ-ಸಂಭ್ರಮ: ಗ್ರಾಮೀಣ ರೈತರ ಮನೆಗಳಲ್ಲಿ ಹಟ್ಟಿ ಹಬ್ಬ ಅದ್ದೂರಿಯಾಗಿ, ವೈವಿಧ್ಯಪೂರ್ಣವಾಗಿ ಆಚರಿಸಲಾಯಿತು. ದೀಪಾವಳಿ ಮೊದಲ ಎರಡು ದಿನಗಳಿಗಿಂತ ಮೂರನೇ ದಿನವಾದ ಬಲಿಪಾಡ್ಯಕ್ಕೆ ಜನರು ಹೆಚ್ಚಿನ ಪ್ರಾಧಾನ್ಯತೆ ನೀಡುವುದರಿಂದ ಮಂಗಳವಾರ ಮನೆ ಮನೆಗಳಲ್ಲಿ ಸಂಭ್ರಮ, ಸಡಗರ ತುಂಬಿತ್ತು. ಸೆಗಣಿಯಲ್ಲಿ ಪಾಂಡವರನ್ನು ಮಾಡಿ ಚಂಡು ಹೂವಿನ ಐದು ಗಿಡಗಳ ನಡುವೆ ಪ್ರತಿಷ್ಠಾಪಿಸಿದರು.

ಇದರ ನಡುವೆ ಸೆಗಣಿಯಲ್ಲಿಯೇ ಲಕ್ಷ್ಮೀಯನ್ನೂ ಮಾಡಿದರು. ಈ ಲಕ್ಷ್ಮೀಯೇ ಗ್ರಾಮೀಣ ಭಾಷೆಯಲ್ಲಿ “ಹಟ್ಟಿ ಲಕ್ಕವ್ವ’ ಎಂದು ಕರೆಸಿಕೊಳ್ಳುತ್ತಾಳೆ. ಹಟ್ಟಿ ಲಕ್ಕವ್ವಗೆ ಚಿನ್ನಾಭರಣ, ವಸ್ತ್ರ, ಉತ್ರಾಣಿ ಕಡ್ಡಿ, ಹೂ ಹಾರಗಳಿಂದ ಸಿಂಗರಿಸಿ, ಹೋಳಿಗೆ, ಕಡಬು ಇತರ ಸಿಹಿ ಖಾದ್ಯಗಳ ನೈವೇದ್ಯ ಮಾಡಿ ಪೂಜಿಸಿದರು. ಹಣತೆ ದೀಪಗಳ ಬೆಳಕಲ್ಲಿ ಲಕ್ಕವ್ವ ಫಳಫಳ ಹೊಳೆದಳು.

ಮನೆ, ಕೊಟ್ಟಿಗೆ, ವ್ಯಾಪಾರ, ಉದ್ಯೋಗಕ್ಕೆ ಹೀಗೆ ನಿತ್ಯ ಉಪಯೋಗಿ ಕಸಬರಿಗೆಯಿಂದ ಹಿಡಿದು ಎಲ್ಲ ವಸ್ತುಗಳನ್ನೂ ತೊಳೆದು ಸುಣ್ಣ- ಬಣ್ಣ ಬಳಿದು ಅವುಗಳ ಸಮೀಪವೂ ಅರಿಶಿಣ-ಕುಂಕುಮ, ಉತ್ರಾಣಿ ಕಡ್ಡಿ, ಹೂಗಳಿಂದ ಸಿಂಗರಿಸಿದ ಸೆಗಣಿಯ ಪಾಂಡವರನ್ನು ಇಟ್ಟು ಪೂಜಿಸಿದರು. ತನ್ಮೂಲಕ ಪಾಂಡವರು ಪಟ್ಟ ಕಷ್ಟ ಯಾರಿಗೂ ಬಾರದಿರಲಿ ಎಂಬ ಪ್ರಾರ್ಥನೆ ಮಾಡಿದರು. ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಹಟ್ಟಿ ಲಕ್ಕವ್ವಳನ್ನು ಪ್ರತಿಷ್ಠಾಪಿಸಿದ ಸ್ಥಳದಿಂದ ಹೊರ ಅಂಗಳದವರೆಗೆ ಕೆಮ್ಮಣ್ಣು ಹಾಗೂ ಸುಣ್ಣದಿಂದ ಆಕಳ ಹೆಜ್ಜೆಗಳನ್ನು ಬಿಡಿಸಿ, ಹೆಜ್ಜೆಗಳ ಮೇಲೆಯೇ ಆಕಳನ್ನು ಮನೆಯೊಳಗೆ ತಂದು ಮತ್ತೂಮ್ಮೆ  ಪೂಜಿಸುವ ಮೂಲಕ ಹಟ್ಟಿ ಹಬ್ಬ ಸಂಪ್ರದಾಯಬದ್ಧವಾಗಿ ಸಂಪನ್ನಗೊಂಡಿತು.

ಕೆಲ ಅಂಗಡಿಕಾರರು ಪಾಡ್ಯದ ದಿನವೂ ಅಂಗಡಿಗಳಲ್ಲಿ ಕುಟುಂಬದ ಸದಸ್ಯರು, ಬಂಧು-ಬಾಂಧವರು, ಗೆಳೆಯರೊಂದಿಗೆ ಲಕ್ಷ್ಮೀ ಪೂಜೆ ಮಾಡಿದರು. ವಾಹನಗಳನ್ನು ತೊಳೆದು, ಹೂಗಳಿಂದ ಸಿಂಗರಿಸಿ ಪೂಜಿಸಿದರು. ಮನೆ ಮನೆಗಳಲ್ಲಿ ಪಟಾಕಿ ಸದ್ದು: ಕಿವಿಗಡಚ್ಚಿಕ್ಕುವ ರೀತಿಯ ಪಟಾಕಿ ಸದ್ದು ಎಲ್ಲೆಡೆ ಕೇಳಬೇಕು ಎಂದರೆ ಈ

ಭಾಗದಲ್ಲಿ ದೀಪಾವಳಿಯೇ ಬರಬೇಕು. ಗ್ರಾಮೀಣ ಪ್ರದೇಶದ ಮನೆ ಮನೆಗಳಲ್ಲಿ ಪಟಾಕಿ ಸದ್ದು ಕೇಳಿತು. ನಗರದಲ್ಲಂತೂ ಪಟಾಕಿ ಆರ್ಭಟ ಮುಗಿಲು ಮುಟ್ಟಿತ್ತು. ಆಧುನಿಕತೆ ಪ್ರವಾಹದಲ್ಲಿಯೂ ಜನಪದ ಸೊಗಡಿನ ದೀಪಾವಳಿ ಆಚರಣೆ ಇನ್ನೂ ಜೀವಂತವಾಗಿರುವುದು ಜಿಲ್ಲೆಯ ವಿಶೇಷ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ