ಮತದಾನ ಹೆಚ್ಚಿಸಿದ ಸ್ವೀಪ್‌ ಜಾಗೃತಿ

Team Udayavani, Apr 25, 2019, 4:07 PM IST

ಹಾವೇರಿ: ಈ ಬಾರಿ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಯತ್ನ ಮಾಡಿದ್ದರ ಪರಿಣಾಮ ಮತದಾನದಲ್ಲಿ ತುಸು ಹೆಚ್ಚಳವಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಶೇಕಡಾ ಮೂರಷ್ಟು ಮತದಾನ ಹೆಚ್ಚಳವಾದಂತಾಗಿದೆ.

ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಪ್ರಚಾರಕ್ಕಿಂತ ಮತದಾನ ಜಾಗೃತಿ ಕಾರ್ಯಕ್ರಮಗಳೇ ಜೋರು ಎನಿಸುವಷ್ಟರ ಮಟ್ಟಿಗೆ ಸ್ವೀಪ್‌ ಚಟುವಟಿಕೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯಿತು. ಚುನಾವಣೆ ಘೋಷಣೆಯಾಗುವ ಮುನ್ನವೇ ಎರಡ್ಮೂರು ತಿಂಗಳುಗಳಿಂದ ಮತದಾನ ಜಾಗೃತಿ ಕಾರ್ಯ ಶುರು ಮಾಡಲಾಗಿತ್ತು. ಜಿಲ್ಲಾ ಸ್ವೀಪ್‌ ಸಮಿತಿಯಿಂದ ಮತದಾನ ಜಾಗೃತಿಗಾಗಿ ಹಲವು ವೈವಿಧ್ಯಮಯ ಆಕರ್ಷಕ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಮತದಾನ ಪ್ರಮಾಣ ಕನಿಷ್ಠ ಶೇ. 80ರಷ್ಟು ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಶೇ. 74ರಷ್ಟು ಮತದಾನಕ್ಕೆ ತೃಪ್ತಿ ಪಡಬೇಕಾಯಿತು.

ಈ ಬಾರಿ ಒಟ್ಟು ಮತದಾನ ಪ್ರಮಾಣ ಶೇ. 74.01ರಷ್ಟಾಗಿದೆ. ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ. 80.80ರಷ್ಟು ಮತದಾನವಾಗಿದೆ. ರೋಣ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ. 69.59ರಷ್ಟು ಮತದಾನವಾಗಿದೆ. ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ ಶೇ. 69.87, ಗದಗ ವಿಧಾನಸಭೆ ಕ್ಷೇತ್ರದಲ್ಲಿ ಶೇ. 72.41, ರೋಣ ವಿಧಾನಸಭೆ ಕ್ಷೇತ್ರದಲ್ಲಿ 69.59, ಹಾನಗಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಶೇ. 80.80, ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ ಶೇ. 73.63, ಬ್ಯಾಡಗಿ ವಿಧಾನಸಭೆ ಕ್ಷೇತ್ರದಲ್ಲಿ 77.97, ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ 78.06, ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ 71.63ರಷ್ಟು ಮತದಾನವಾಗಿದೆ.

ಕಳೆದ ಬಾರಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಮತದಾನ ಶೇ. 71.59ರಷ್ಟಾಗಿತ್ತು. ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ ಶೇ. 68, ಬ್ಯಾಡಗಿ ವಿಧಾನಸಭೆ ಕ್ಷೇತ್ರದಲ್ಲಿ ಶೇ. 70, ಹಿರೇಕೆರೂರ ಶೇ. 70, ರಾಣಿಬೆನ್ನೂರ ಶೇ. 66, ಶಿರಹಟ್ಟಿ ಶೇ. 55, ಗದಗ ಶೇ. 67, ರೋಣ ಶೇ. 67, ಹಾನಗಲ್ಲ ಶೇ. 78ರಷ್ಟು ಮತದಾನವಾಗಿತ್ತು.

ವೈವಿಧ್ಯಮಯ ಕಾರ್ಯಕ್ರಮ: ಜಿಲ್ಲಾ ಸ್ವೀಪ್‌ ಸಮಿತಿ ಮತದಾನ ಜಾಗೃತಿಗಾಗಿ ಹತ್ತು ಹಲವು ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಜಾಥಾ, ವಿವಿಧ ಸ್ಪರ್ಧೆ, ಬರಹ, ಶಾಲಾ ಕಾಲೇಜು, ಬಸ್‌ ನಿಲ್ದಾಣ, ಸಂತೆ, ರೇಲ್ವೆ ನಿಲ್ದಾಣ ಭೇಟಿ, ಶಾಲಾ ಮಕ್ಕಳಿಂದ ಪಾಲಕರಿಗೆ ಪತ್ರ, ಕಾರಾಗೃಹದಲ್ಲಿ ಜಾಗೃತಿ, ಕ್ಯಾಂಡಲ್ ಮಾರ್ಚ್‌, ಮತಗೋಷ್ಠಿ, ಮತಗಾನ, ಮಾನವ ಸರಪಳಿ, ಬೀದಿನಾಟಕ, ರಂಗೋಲಿ ಸ್ಪರ್ಧೆ, ಪೋಸ್ಟರ್‌ ಪ್ರಚಾರ, ಅರಿಶಿಣ-ಕುಂಕುಮ ಹೀಗೆ ವಿವಿಧ ಬಗೆಯ ಚಟುವಟಿಕೆಯನ್ನು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಮತದಾನ ಜಾಗೃತಿ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳು ತಕ್ಕಮಟ್ಟಿಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿವೆ.

ವಿಶೇಷ ರಾಯಭಾರಿ: ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಸರಿಗಮಪ ಖ್ಯಾತಿಯ ಗಾಯಕ ಹನುಮಂತಪ್ಪ ಚಿಲ್ಲೂರಬಡ್ನಿ, ವಿಶೇಷಚೇತನರ ಮತದಾರರ ರಾಯಭಾರಿಯಾಗಿ ಹಸೀನಾ ಹೆಡಿಯಾಳ ಅವರನ್ನು ನೇಮಕ ಮಾಡಲಾಗಿತ್ತು. ಗಾಯಕ ಹನುಮಂತ ಅವರು ತಮ್ಮ ಹಾಡಿನ ಮೂಲಕ ಮತದಾನ ಜಾಗೃತಿ ಮಾಡಿ ಜನರ ಮನಸೆಳೆದಿದ್ದರು. ಈ ಎಲ್ಲ ಕಾರ್ಯಗಳು ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು ಸಖೀ ಮತಗಟ್ಟೆ, ಮಾದರಿ ಮತಗಟ್ಟೆ, ವಿಶೇಷಚೇತನ ಮತಗಟ್ಟೆ ಹೀಗೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಇವೆಲ್ಲದರ ಪರಿಣಾಮ ಮತದಾನದ ಮೇಲೆ ಬೀರಿದ್ದು ಮತದಾನ ಪ್ರಮಾಣ ಹೆಚ್ಚಾದಂತಾಗಿದೆ.

ಮತದಾನ ಹಿನ್ನೋಟ: ಕ್ಷೇತ್ರದಲ್ಲಿ 1989ರ ಚುನಾವಣೆಯಲ್ಲಿ ಅತ್ಯಧಿಕ ಅಂದರೆ ಶೇ. 74ರಷ್ಟು ಮತದಾನವಾಗಿತ್ತು. 1991ರಲ್ಲಿ ಅತಿ ಕಡಿಮೆ ಅಂದರೆ ಶೇ. 54ರಷ್ಟು ಮತದಾನವಾಗಿತ್ತು. 1957ರಲ್ಲಿ ಶೇ. 59.47, 1962ರಲ್ಲಿ ಶೇ. 67.11, 1967ರಲ್ಲಿ ಶೇ. 65.29, 1971ರಲ್ಲಿ ಶೇ. 62.04, 1977ರಲ್ಲಿ ಶೇ. 70.80, 1980ರಲ್ಲಿ ಶೇ. 56.87, 1984ರಲ್ಲಿ ಶೇ. 71.38, 1989ರಲ್ಲಿ ಶೇ. 74.01, 1991ರಲ್ಲಿ ಶೇ. 54.21, 1996ರಲ್ಲಿ 59.80, 1998ರಲ್ಲಿ ಶೇ. 67.65, 1999ರಲ್ಲಿ ಶೇ. 73.80, 2004ರಲ್ಲಿ ಶೇ. 71.98ರಷ್ಟು ಮತದಾನವಾಗಿತ್ತು. ಹಾವೇರಿ ಲೋಕಸಭೆ ಹೊಸ ಕ್ಷೇತ್ರವಾಗಿ ರೂಪುಗೊಂಡ ಬಳಿಕ 2009ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಶೇ. 63.59ರಷ್ಟು ಮತದಾನವಾಗಿತ್ತು. 2014ರಲ್ಲಿ ಶೇ. 71.59ರಷ್ಟು ಮತದಾನವಾಗಿತ್ತು.

•ಅಭ್ಯರ್ಥಿಗಳ ಪ್ರಚಾರಕ್ಕಿಂತ ಸದ್ದು ಮಾಡಿದ್ದು ಮತ ಜಾಗೃತಿ
•ಕರುನಾಡ ಮನಗೆದ್ದ ಸರಿಗಮಪ ಹನುಮನಿಂದ ಮತಗಾನ
•ಮದುವೆ ಮಂಟಪ-ಜಾನುವಾರು ಸಂತೆಯಲ್ಲೂ ಮತ ಮಹತ್ವ
•ಮಹಿಳೆಯರಿಗೆ ಅರಿಶಿಣ-ಕುಂಕುಮ ನೀಡಿ ಆಹ್ವಾನಿಸಿ ಗಮನ ಸೆಳೆದಿದ್ದ ಇಲಾಖೆ
ಎಚ್.ಕೆ. ನಟರಾಜ

ಈ ವಿಭಾಗದಿಂದ ಇನ್ನಷ್ಟು

  • ರಾಣಿಬೆನ್ನೂರ: ಮನುಷ್ಯನ ವಿಕಾಸತೆಗೆ ಮತ್ತು ನಿತ್ಯದ ಕ್ರೀಯಾ ಚಟುವಟಿಕೆಗೆ ಯೋಗ, ಧ್ಯಾನ, ಪ್ರಾಣಾಯಾಮ ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು...

  • ಅಕ್ಕಿಆಲೂರು: ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಮಾರಂಭ ಗಳನ್ನು ಆಯೋಜಿಸುತ್ತ ನಾಡಿನ ಮೂಲೆ -ಮೂಲೆಯಲ್ಲೂ ಪ್ರಚಲಿತದಲ್ಲಿರುವ ಅಕ್ಕಿಆಲೂರಿನಲ್ಲೀಗ...

  • ರಾಣಿಬೆನ್ನೂರ: ಸಂಸ್ಕಾರವು ಭಾರತದಜೀವಾಳವಾಗಿದ್ದು, ಅದರಲ್ಲಿ ಕರಿಬಸವೇಶ್ವರ ಕ್ಷೇತ್ರ ಒಂದಾಗಿದೆ. ಸ್ವಾಮಿಯು ನೊಂದು-ಬೆಂದು ಬಂದವರ ಬಾಳಿಗೆ ಅಭಯ ನೀಡುತ್ತಿದ್ದು,...

  • ಎಚ್‌.ಕೆ. ನಟರಾಜ ಹಾವೇರಿ: ಮಳೆ ಹಾಗೂ ನೆರೆ ಕಾರಣದಿಂದ ಈ ಬಾರಿ ಮಳೆಗಾಲದಲ್ಲಿ ಗ್ರಾಮೀಣ ರಸ್ತೆಗಳಿಗೆ ಹೆಚ್ಚು ಧಕ್ಕೆಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಂದಾಜು...

  • ಹಾವೇರಿ: ಹಿರೇಕೆರೂರು ಹಾಗೂ ರಾಣಿಬೆನ್ನೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದು ತಿಂಗಳಿಂದ ಸುತ್ತಾಡಿದ ಅಭ್ಯರ್ಥಿಗಳು ಮತದಾನದ...

ಹೊಸ ಸೇರ್ಪಡೆ