ಅಭ್ಯರ್ಥಿಗಳಿಗಿಂತ ಕಾರ್ಯಕರ್ತರದ್ದೇ ಭರಾಟೆ

Team Udayavani, Apr 17, 2019, 12:49 PM IST

ಶಿಗ್ಗಾವಿ: ಸಂತ ಶಿಶುನಾಳ ಶರೀಫರ ನೆಲವಾದ ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿ ಧಾರವಾಡ ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಪ್ರಚಾರ ಭರಾಟೆ ಭರಪೂರಾಗಿ ನಡೆದಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ-ಸವಣೂರು ವಿಧಾನ ಸಭಾ ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಬಿಜೆಪಿಯಿಂದ ಪ್ರಹ್ಲಾದ ಜೋಶಿ, ಕಾಂಗ್ರೆಸ್‌ ನಿಂದ ವಿನಯ ಕುಲಕರ್ಣಿ ಕಣದಲ್ಲಿದ್ದು, ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬೇಸಿಗೆಯ ಬಿರು ಬಿಸಿಲಲ್ಲೂ ಭರದ ಪ್ರಚಾರ ನಡೆಸಿದ್ದಾರೆ.

ಸ್ಥಳೀಯವಾಗಿ ಶಾಸಕ ಬಸವರಾಜ ಬೊಮ್ಮಾಯಿ ಇದ್ದಾರೆ. ಬಿಜೆಪಿಯಲ್ಲಿ ಹಿರಿಯ ಮುಖಂಡರೆನಿಸಿರುವ ಬೊಮ್ಮಾಯಿ
ತಮ್ಮ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಸೆಳೆದು ಪ್ರಹ್ಲಾದ ಜೋಶಿಯವರ ಪೆಟ್ಟಿಗೆಗೆ ಹಾಕಿಸಲು ಕ್ಷೇತ್ರ ಸಂಚಾರ ನಡೆಸಿದ್ದಾರೆ.

ಬಿಜೆಪಿಯಿಂದ ಸ್ಟಾರ್‌ ಪ್ರಚಾರಕಾಗಿ ನಟಿ ಶೃತಿ ಬಂದಿದ್ದು ಬಿಟ್ಟರೆ ಬೇರೆ ಯಾರೂ ಬಂದಿಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ಗೊಂದಲ ಏರ್ಪಟ್ಟು ತಡವಾಗಿ ವಿನಯ ಕುಲಕರ್ಣಿಯವರಿಗೆ ಟಿಕೆಟ್‌ ಘೋಷಣೆಯಾಗಿದ್ದರಿಂದ ಪ್ರಚಾರದಲ್ಲಿ ಕಾಂಗ್ರೆಸ್‌ ತುಸು ಹಿಂದೆ ಬೀಳುವಂತಾಯಿತು.

ಬಿಜೆಪಿಯವರು ಪ್ರಧಾನಿ ಮೋದಿಯವರ ಸಾಧನೆ, ಕೇಂದ್ರ ಸರ್ಕಾರದ ಯೋಜನೆ, ಪಕ್ಷದ ಪ್ರಣಾಳಿಕೆ, ಕ್ಷೇತ್ರದಲ್ಲಿ ಶಾಸಕ
ಬಸವರಾಜ ಬೊಮ್ಮಾಯಿಯವರಿಂದಾದ ಪ್ರಗತಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಆಗಿರುವ ಅಭಿವೃದ್ಧಿಯನ್ನು ಪ್ರಸ್ತಾಪಿಸಿ ಮತಬೇಟೆಯಲ್ಲಿ ತೊಡಗಿದ್ದಾರೆ. ಪ್ರಹ್ಲಾದ ಜೋಶಿಯವರು ಚುನಾವಣೆ ಬಂದಾಗ ಮಾತ್ರ ಕ್ಷೇತ್ರದ ಜನರಿಗೆ ಮುಖ ತೋರಿಸುತ್ತಾರೆ ಎಂಬ ಆರೋಪ ಚುನಾವಣೆ ಆರಂಭದ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಕೇಳಿಬಂದಿತ್ತು.

ಈ ಆರೋಪದ ಆಕ್ರೋಶವನ್ನು ಬೊಮ್ಮಾಯಿಯವರು ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದು, ಎಲ್ಲರೂ “ಈ ಬಾರಿ ಮತ್ತೂಮ್ಮೆ ಮೋದಿ’ ಎಂದು ಮತ ಪ್ರಚಾರದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ಶಾಸಕರಾಗಿ ಹಿಂದಿನ ಅವಧಿಯಲ್ಲಿ ರಾಜ್ಯ ಸರ್ಕಾರದ ಮಂತ್ರಿಮಂಡಲದಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿಯನ್ನು ಪ್ರಚುರ ಪಡಿಸಿ ಅವುಗಳನ್ನು ಮತಗಳನ್ನಾಗಿ ಪರಿವರ್ತಸುವ ಪ್ರಯತ್ನ ನಡೆಸಿದ್ದಾರೆ. ಮೈತ್ರಿ ಸರ್ಕಾರದ ಯೋಜನೆ, ಪಕ್ಷದ ಪ್ರಣಾಳಿಕೆ ಕ್ಷೇತ್ರದಲ್ಲಿ ಜತೆಗೆ ಶೇ. 40ರಷ್ಟಿರುವ ಲಿಂಗಾಯಿತ ಮತಗಳನ್ನು ಸೆಳೆಯಲು ತಂತ್ರಗಾರಿಕೆ ನಡೆಸಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಫಲ್ಯಗಳನ್ನೇ ಪ್ರಚಾರದ ವಸ್ತುವನ್ನಾಗಿ ಬಳಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಭ್ಯರ್ಥಿಗಿಂತ ಅಭ್ಯರ್ಥಿ ಬೆಂಬಲಿಗರು ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮನೆ ಮನೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಕ್ಷೇತ್ರದಲ್ಲಿ ಕೃಷಿಕರೇ ಹೆಚ್ಚಾಗಿದ್ದು, ಯಾವ ಪಕ್ಷ ಈ ವರೆಗೆ ರೈತರಿಗೆ ಅನುಕೂಲ ಕಲ್ಪಿಸಿದೆ, ಎರಡೂ ಪಕ್ಷಗಳು ರೈತರ ವಿಚಾರಗಳ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದು, ಯಾವ ಪಕ್ಷವನ್ನು ಬೆಂಬಲಿಸಿದರೆ ರೈತರಿಗೆ ಅನುಕೂಲ ಆಗಬಹುದು ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ. ಯಾವ ರಾಜಕೀಯ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿವೆ ಎಂಬುದರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ಬಂದಿದೆ. ರಸ್ತೆ, ಮನೆಯಂಥ ಸೌಲಭ್ಯಗಳು ಹೆಚ್ಚಾಗಿವೆ ಎಂದು ಬಿಜೆಪಿಯವರು ವಾದಿಸಿದರೆ, ಕಾಂಗ್ರೆಸ್‌ನವರು ಸಹ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕ್ಷೇತ್ರದ ಹೆಚ್ಚು ಜನರಿಗೆ ಅನುಕೂಲವಾಗುವ ಯೋಜನೆ ಸಿಕ್ಕಿದೆ ಎಂಬ ವಾದ ಮಂಡಿಸುತ್ತಿದ್ದಾರೆ. ಎರಡೂ ಪಕ್ಷಗಳ ವಾದಗಳನ್ನು ಆಲಿಸುತ್ತಿರುವ ಕ್ಷೇತ್ರದ ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎಂಬುದು ನಿಗೂಢ.

ಕಳೆದ ಲೋಕಸಭೆ ಚುನಾವಣೆಯಲ್ಲಿ 2014ಬಿಜೆಪಿಗೆ 544857 ಮತಗಳು, ಕಾಂಗ್ರೆಸ್‌ ಗೆ 431509 ಮತಗಳು ಬಿದ್ದಿದ್ದವು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 83868 ಮತಗಳು, ಕಾಂಗ್ರೆಸ್‌ಗೆ 74603 ಮತಗಳು ಬಿದ್ದಿದ್ದವು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹಾವೇರಿ: ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಅತಿವೃಷ್ಠಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ...

  • ಬ್ಯಾಡಗಿ: ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೇ ಕೂಲಿ ಕಾರ್ಮಿಕರ ವೇತನ ನೀಡಲು ವಿಳಂಬವಾದಲ್ಲಿ ಅದಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನೇ...

  • ಹಾವೇರಿ: ವಿದ್ಯಾರ್ಥಿಗಳು ಸಹೋದರತ್ವ ಭಾವನೆ, ಸ್ನೇಹ-ಪ್ರೀತಿ, ಸೇವಾ ಮನೋಭಾವ, ನಾವೆಲ್ಲ ಒಂದೇ ಎಂಬ ಭಾವ ಬೆಳಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ...

  • ಹಾವೇರಿ: ಉಕ್ಕಿ ಹರಿದ ಪ್ರವಾಹದಿಂದ ಜನರು ಮನೆ ಕಳೆದುಕೊಂಡು ಸಂಕಷ್ಟಪಡುತ್ತಿದ್ದರೆ, ಜಾನುವಾರುಗಳು ಸಹ ತಮ್ಮ ನೆಲೆ ಕಳೆದುಕೊಂಡು ವಾರಕ್ಕೂ ಹೆಚ್ಚು ಕಾಲ ಗಾಳಿ-ಮಳೆಗೆ...

  • ಹಿರೇಕೆರೂರ: ಜೂನ್‌ ವೇತನ ಬಟವಡೆಯಾಗಿಲ್ಲ, ಇದರಿಂದ ಶಿಕ್ಷಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಾಲೂಕು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ...

ಹೊಸ ಸೇರ್ಪಡೆ