ಆತ್ಮಹತ್ಯೆಗೆ ಕಾರ್ಖಾನೆ ಚಿಮಣಿ ಏರಿದ ಯುವಕ
Team Udayavani, Apr 17, 2021, 7:38 PM IST
ಹಾವೇರಿ: ತಾಲೂಕಿನ ಸಂಗೂರ ಬಳಿಯಿರುವ ಸಹಕಾರಿ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ತನ್ನನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಮನನೊಂದ ಕಾರ್ಮಿಕನೋರ್ವ ಕಾರ್ಖಾನೆಯ ಚಿಮಣಿ(ಹೊಗೆ ಹೋಗುವ ಟಾವರ್) ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಶುಕ್ರವಾರ ನಡೆದಿದೆ.
ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದ ಬೋರೇಗೌಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ಆತನನ್ನು 100 ಅಡಿ ಎತ್ತರದ ಕಾರ್ಖಾನೆಯ ಚಿಮಣಿಯಿಂದ ಇಳಿಸಲು ಹರಸಾಹಸಪಟ್ಟರು. ಕೊನೆಗೆ ಮರಳಿ ಕೆಲಸ ಕೊಡಿಸುವ ಭರವಸೆ ನೀಡಿ ಕೆಳಗಡೆ ಇಳಿಸಿದ್ದಾರೆ.
ಯಾವುದೇ ಕಾರಣವಿಲ್ಲದೇ ನನ್ನನ್ನು ಕೆಲಸದಿಂದ ತೆಗೆದಿದ್ದಾರೆ. ಸರಿಯಾಗಿ ವೇತನ ನೀಡುತ್ತಿಲ್ಲ. ಕಾರ್ಖಾನೆಯ ವ್ಯವಸ್ಥಾಪಕರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಸ್ಥಳಕ್ಕೆ ಕಾರ್ಖಾನೆಯ ಗುತ್ತಿಗೆದಾರರು ಬಂದು ನನ್ನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಇಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೋರೇಗೌಡ ತಿಳಿಸಿದ್ದ. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯಗೊಂಡಿದೆ.