ಬಾಲಕಿಯರ ಹಾಸ್ಟೆಲ್ ಗೆ ಅರ್ಜಿಗಳ ಮಹಾಪೂರ

•59 ಸ್ಥಾನಕ್ಕೆ 167 ಅರ್ಜಿ ಸಲ್ಲಿಕೆ•ಸಂದಿಗ್ದತೆಯಲ್ಲಿ ಅಧಿಕಾರಿಗಳು•ಪೋಷಕರಲ್ಲಿ ಹೆಚ್ಚಿಸಿದ ಆತಂಕ

Team Udayavani, Jul 15, 2019, 10:17 AM IST

ಹೊನ್ನಾಳಿ: ಪಟ್ಟಣದಲ್ಲಿರುವ ದಿ| ದೇವರಾಜ್‌ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್.

ಹೊನ್ನಾಳಿ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್ಗೆ ಅರ್ಜಿಗಳ ಮಹಾಪೂರವೇ ಹರಿದು ಬರುತ್ತಿದ್ದು, ಯಾರಿಗೆ ಸೌಲಭ್ಯ ಒದಗಿಸುವುದು ಎಂಬ ಸಂದಿಗ್ದತೆಯಲ್ಲಿ ಅಧಿಕಾರಿಗಳು ಇದ್ದಾರೆ.

ಪಟ್ಟಣದ ಕೋರ್ಟ್‌ ಸಮೀಪ ದಿ| ದೇವರಾಜ್‌ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್ ಇದ್ದು, ವಾರ್ಷಿಕ 125 ವಿದ್ಯಾರ್ಥಿನಿಯರಿಗೆ ಅವಕಾಶ ಇದೆ. ಪ್ರಸ್ತುತ ಸಾಲಿನಲ್ಲಿ 66 ಹಳೆಯ ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿದ್ದು, 59 ವಿದ್ಯಾರ್ಥಿನಿಯರಿಗೆ ಮಾತ್ರ ಸ್ಥಳಾವಕಾಶ ಇದೆ. ಆದರೆ, ಹಾಸ್ಟೆಲ್ಗೆ ಪ್ರವೇಶ ಬಯಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜು.12ರ ಸಂಜೆ 5ರವರೆಗೆ ಕೊನೆ ದಿನವಾಗಿತ್ತು. ಇಲ್ಲಿಯವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 167.

ಕಳೆದ ವಾರವಷ್ಟೇ ದ್ವಿತೀಯ ಪಿಯು ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪದವಿ ತರಗತಿಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಹಾಸ್ಟೆಲ್ಗೂ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಪ್ರಥಮ ಪಿಯು ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿನಿಯರು ಹಾಸ್ಟೆಲ್ಗೂ ಅರ್ಜಿ ಸಲ್ಲಿಸಬಹುದು. ಆದರೆ, ಇರುವ ಒಂದೇ ಹಾಸ್ಟೆಲ್ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಇಲ್ಲದಿರುವುದು ಪೋಷಕರಿಗೆ ದೊಡ್ಡ ತಲೆನೋವಾಗಿದೆ.

ಹೊನ್ನಾಳಿ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿರುವುದರಿಂದ ಮತ್ತು ಉತ್ತಮ ಕಾಲೇಜುಗಳು ಇಲ್ಲಿರುವುದರಿಂದ ರಟ್ಟೆಹಳ್ಳಿ ತಾಲೂಕಿನ ವಿವಿಧ ಗ್ರಾಮಗಳು, ಶಿಕಾರಿಪುರ ಮತ್ತು ನ್ಯಾಮತಿ ತಾಲೂಕಿನ ಕೆಲ ಗ್ರಾಮಗಳು ಸೇರಿದಂತೆ ನೂರಾರು ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಲು ಆಗಮಿಸುತ್ತಿದ್ದಾರೆ. ಈ ಎಲ್ಲಾ ಕಡೆಗಳಿಂದ ಆಗಮಿಸುವ ವಿದ್ಯಾರ್ಥಿನಿಯರಿಗೆ ಪ್ರತಿದಿನ ತಮ್ಮ ಊರುಗಳಿಂದ ಆಗಮಿಸಿ ಅಧ್ಯಯನ ಮಾಡಲು ಆಗುವುದಿಲ್ಲ. ಮತ್ತೆ ಕೆಲವು ಗ್ರಾಮಗಳಿಗೆ ಬಸ್‌ಗಳ ಸಂಪರ್ಕವೇ ಇಲ್ಲ. ಹಾಗಾಗಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೇರಿಕೆ ಅನಿವಾರ್ಯತೆ ಇದೆ. ಹೊನ್ನಾಳಿಯಲ್ಲಿ ಹೆಚ್ಚುವರಿಯಾಗಿ ಒಂದು ಇಲ್ಲವೇ ಎರಡು ದಿ| ದೇವರಾಜ್‌ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್ಗಳನ್ನು ಮಂಜೂರು ಮಾಡಬೇಕು ಎಂಬುದು ಪೋಷಕರು ಹಾಗೂ ವಿದ್ಯಾರ್ಥಿನಿಯರ ಒತ್ತಾಯವಾಗಿದೆ.

ಹೊನ್ನಾಳಿ, ನ್ಯಾಮತಿ ಮತ್ತು ಸಾಸ್ವೆಹಳ್ಳಿ ಪಟ್ಟಣಕ್ಕೆ ಸಂಬಂಧಿಸಿದಂತೆ ತಲಾ ಒಂದೊಂದು ವಿದ್ಯಾರ್ಥಿ ನಿಲಯಕ್ಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರೊಂದಿಗೆ ಇರುವ ಹಾಸ್ಟೆಲ್ನಲ್ಲಿ ಹೆಚ್ಚುವರಿ 50 ವಿದ್ಯಾರ್ಥಿನಿಯರು ತೆಗೆದುಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ಶಾಸಕ

ಹೊನ್ನಾಳಿ ಪಟ್ಟಣದಲ್ಲಿ ಸರ್ಕಾರಿ ಮತ್ತು ಖಾಸಗಿ 5 ಪದವಿ ಪೂರ್ವ ಕಾಲೇಜುಗಳು, ಎರಡು ಪದವಿ ಕಾಲೇಜುಗಳು ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಇದ್ದು, ಸಹಜವಾಗಿ ವಿದ್ಯಾರ್ಥಿನಿಯರು ತಾಲೂಕು ಕೇಂದ್ರಕ್ಕೆ ಅಭ್ಯಾಸ ಮಾಡಲು ತೆರಳುತ್ತಾರೆ. ತಕ್ಷಣ ಸರ್ಕಾರ ಇನ್ನೊಂದು ದಿ| ದೇವರಾಜ್‌ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್ನ್ನು ಮಂಜೂರು ಮಾಡಬೇಕು.
ಬಸವರಾಜಪ್ಪ,
ಬೆನಕಹಳ್ಳಿ,ವಿದ್ಯಾರ್ಥಿಗಳ ಪೋಷಕ

ದಿ| ದೇವರಾಜ್‌ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್ಗೆ ಒಟ್ಟು 167 ಅರ್ಜಿಗಳು ಬಂದಿದ್ದು, ಈಗಾಗಲೇ ನವೀಕರಣಗೊಂಡ 59 ವಿದ್ಯಾರ್ಥಿನಿಯರಿದ್ದು, 167ರಲ್ಲಿ 59 ವಿದ್ಯಾರ್ಥಿಗಳನ್ನು ಮೆರಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಇದರಲ್ಲಿ ಉಳಿದ 108 ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ ತಿಂಗಳಿಗೆ 1500 ರೂ. ವಿದ್ಯಾರ್ಥಿ ವೇತನ ನೀಡಲಾಗವುದು.
ಸದಾಶಿವಪ್ಪ,
ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಹೊನ್ನಾಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ