ಬೈಕ್‌ ಸವಾರಗೆ ಹೆಲ್ಮೆಟ್ ಬೇಡ-ಮೀನುಗಾರನಿಗೆ ಜಾಕೆಟ್ ಬೇಡ

ನಿಜವಾದ ಭೀಕರ ಸಂಗತಿ ಸಾವಿನ ನಂತರ ಅವಲಂಬಿತರ ಕುಟುಂಬದ್ದು

Team Udayavani, Aug 22, 2019, 3:07 PM IST

ಹೊನ್ನಾವರ: ರಸ್ತೆಗಿಳಿಯುವ ಬೈಕ್‌ ಸವಾರರಿಗೆ ಹೆಲ್ಮೆಟ್, ಕಡಲಿಗಿಳಿಯುವ ಮೀನುಗಾರರಿಗೆ ಸರ್ಕಾರ ಲೈಫ್‌ ಜಾಕೆಟ್ ಕಡ್ಡಾಯ ಮಾಡಿದೆ. ಅಂದಾಜು ಸಾವಿರ ರೂ.ಗೆ ಸಿಗುವ ಇವುಗಳನ್ನು ಧರಿಸದೆ ಬೀದಿಗೆ, ಸಮುದ್ರಕ್ಕೆ ಇಳಿಯುವ ಈ ಶೂರರು ನಂಬಿದವರ ಬದುಕನ್ನು ನರಕಮಾಡಿ ಹೋಗುತ್ತಾರೆ.

ನೀರು, ಗಾಳಿ, ಬೆಂಕಿ ಇವುಗಳ ಶಕ್ತಿಯ ಎದುರು ಮನುಷ್ಯನ ಆಟ ನಡೆಯಲಾರದು ಎಂದು ಹಿರಿಯರು ಹೇಳುತ್ತಾರೆ. ಬೆಂಕಿಯನ್ನು ಆರಾಧಿಸುತ್ತ ದೂರ ಉಳಿದು ಬಳಕೆಯಾದ ಮೇಲೆ ಅದನ್ನು ವಿಸರ್ಜಿಸುವುದು ಒಂದು ನಿತ್ಯ ಕರ್ಮವಾಗಿತ್ತು. ಆಗ ಹೊಗೆ ಉಗುಳುವ ವಾಹನ ಇದ್ದರೂ ವೇಗ ಇರಲಿಲ್ಲ. ಈಗ ಬೆಂಕಿ ಉಗುಳುವ ವಾಹನಗಳು ಓಡುತ್ತವೆ, ನಿಲ್ಲಿಸುವುದು ಸಾಧ್ಯವಾಗುವುದಿಲ್ಲ. ಇದರಿಂದ ಆಗುತ್ತಿರುವ ಅನಾಹುತ, ಕೌಟುಂಬಿಕ ದುರಂತಕ್ಕೆ ಲೆಕ್ಕವಿಲ್ಲ. ಬೈಕ್‌ ಕಂಪನಿಗಳು ಪೆಟ್ರೋಲ್ ಉಳಿತಾಯದ ಆಸೆ ತೋರಿಸಿ ಹಗುರ ವಾಹನಗಳನ್ನು ತಯಾರು ಮಾಡುತ್ತವೆ. ಸವಾರರಿಗಿಂತ ಕಡಿಮೆ ತೂಕದ ವಾಹನಗಳು ಓಡುತ್ತವೆಯೇ ವಿನಃ ಪುನಃ ಸಹಜ ಸ್ಥಿತಿಗೆ ಬರಲು ನಿಯಂತ್ರಣದ ಸಮರ್ಪಕ ವ್ಯವಸ್ಥೆ ಇರುವುದಿಲ್ಲ. ದ್ವಿಚಕ್ರ ವಾಹನಗಳು ಸುರಕ್ಷತೆಯ ಸಂಪೂರ್ಣ ನಿಯಮಗಳನ್ನು ಪಾಲಿಸುವುದಿಲ್ಲ. ಆದ್ದರಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ಕಾಲದಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಓಡಿಸುವುದು ಅಪಾಯವನ್ನು ತಂದುಕೊಂಡಂತೆ.

ದೇಹದ ಇತರ ಭಾಗಕ್ಕೆ ಗಂಭೀರ ಪೆಟ್ಟಾದರೂ ಸರಿ ಮಾಡಬಹುದು, ತಲೆಗೆ ಸಣ್ಣ ಪೆಟ್ಟಾದರೂ ಕಷ್ಟ. ಆದ್ದರಿಂದಲೇ ಹೆಲ್ಮೆಟ್ ಧರಿಸಿ ಎಂಬ ಅಭಿಯಾನ ನಡೆಯುತ್ತದೆ. ಧರಿಸದಿದ್ದ ಬೈಕ್‌ ಸವಾರರಿಗೆ ದಂಡ ಹಾಕಲಾಗುತ್ತದೆ. ಆದರೆ ಲಕ್ಷ ರೂ. ಕೊಟ್ಟು ಬೈಕ್‌ ಖರೀದಿಸುವವವರಿಗೆ ಸಾವಿರ ರೂ. ಹೆಲ್ಮಟ್ ದುಬಾರಿಯಾಗುತ್ತದೆ. ಖರೀದಿಸಿದರೂ ಅದು ಹ್ಯಾಂಡಲ್ಗೆ ತೂಗಾಡುತ್ತಿರುತ್ತದೆ. ಬೈಕ್‌ ಅಪಘಾತಗಳಲ್ಲಿ ಹೆಚ್ಚು ಸವಾರರು ಹೆಲ್ಮೆಟ್ ಧರಿಸದ ಕಾರಣ ಸ್ಮಶಾನ ಸೇರುತ್ತಾರೆ ಅಥವಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರುತ್ತಾರೆ. ನಾಲ್ಕಾರು ಲಕ್ಷ ರೂ. ವೆಚ್ಚ ಮಾಡಿದರೂ ಪೂರ್ತಿ ಸರಿಯಾಗುವುದಿಲ್ಲ.

ಮೀನುಗಾರಿಕೆ ಕಷ್ಟದ ಕೆಲಸ. ಅದರಲ್ಲೂ ಸುರಕ್ಷಿತವಲ್ಲದ ಅಳವೆ, ಹಳೆಯ ಬೋಟ್‌ಗಳು, ಆಕಸ್ಮಾತ್‌ ಬೀಸುವ ಗಾಳಿ ಬೋಟ್‌ಗಳಿಗೂ, ಎಷ್ಟೇ ಪರಿಣಿತಣಿತರಿದ್ದರು ಮೀನುಗಾರನಿಗೂ ಅಪಾಯಕಾರಿ. ಶೇ.10ರಷ್ಟು ಮೀನುಗಾರರು ಜೀವ ಕಳೆದುಕೊಳ್ಳುತ್ತಾರೆ. ಮೀನುಗಾರರಿಗೆ ಇಲಾಖೆ ಉಚಿತವಾಗಿ ಲೈಫ್‌ ಜಾಕೆಟ್ ಒದಗಿಸುತ್ತದೆ. ಮೀನುಗಾರರು ಬೋಟ್‌ಗಳಿಗೆ ಕಟ್ಟಿಡುತ್ತಾರೆ. ಯಾಂತ್ರೀಕೃತ ನಾಡದೋಣಿಯವರು ಒಯ್ಯುವುದೇ ಇಲ್ಲ. ಜಾಕೆಟ್ ಕಟ್ಟಿಕೊಂಡರೆ ಸ್ವಲ್ಪ ಕಿರಿಕಿರಿಯಾಗಬಹುದು. ಆದರೆ ಯಾವುದೇ ಸಂದರ್ಭದಲ್ಲಿ ಜೀವ ಉಳಿಸುತ್ತದೆ. ನಿತ್ಯ ಲಕ್ಷಾಂತರ ರೂ.ಗಳಿಸುವ ಬೋಟ್‌ಗಳಿಗೆ ಸಾವಿರ ರೂ. ಜಾಕೆಟನ್ನು ತನ್ನ ಕೆಲಸಗಾರರಿಗೆ ಕೊಡಿಸುವುದು ಅಸಾಧ್ಯವೇನಲ್ಲ. ಕಡಲಿನಲ್ಲಿ ಮುಳುಗುವ ಮೀನುಗಾರರಲ್ಲಿ ಯಾರೂ ಜಾಕೆಟ್ ಧರಿಸಿರುವುದಿಲ್ಲ. ಎಲ್ಲ ದಿನವೂ ಇಂತಹ ಹುಂಬ ಧೈರ್ಯ ಕೆಲಸಕ್ಕೆ ಬರುವುದಿಲ್ಲ. ಹಿಂದಿನವರು ಸಿಪ್ಪೆ ಸಹಿತ ಒಣ ತೆಂಗಿನಕಾಯಿಗಳನ್ನು ಜೋಡಿಸಿ, ಸೊಂಟಕ್ಕೆ ಕಟ್ಟಿಕೊಂಡು ನೀರಿಗಿಳಿಯುತ್ತಿದ್ದರು. ಈಗ ನಾಲ್ಕು ಖಾಲಿ ಬಿಸಲರಿ ಬಾಟಲಗಳ ಮುಚ್ಚಳನ್ನು ಬಿಗಿಯಾಗಿ ಹಾಕಿ ಬಳ್ಳಿಯಲ್ಲಿ ಬಾಟಲ್ಗಳನ್ನು ಜೋಡಿಸಿಕೊಂಡು ಸೊಂಟಕ್ಕೆ ಕಟ್ಟಿಕೊಂಡು ನೀರಿಗಿಳಿದರೆ ವಾರಗಳ ಕಾಲ ಇದು ತೇಲಿಸುತ್ತದೆ. ಭಗವಂತನೂ ಎಲ್ಲ ದಿನ, ಎಲ್ಲರನ್ನೂ ಕಾಪಾಡುವುದಿಲ್ಲ.

ಪೊಲೀಸರಿಗಾಗಿ, ಮೀನುಗಾರಿಕಾ ಇಲಾಖೆ ಗಾಗಿ ಸುರಕ್ಷಾ ಸಾಮಗ್ರಿಗಳನ್ನು ತೊಡಬೇಕಾಗಿಲ್ಲ. ತಮ್ಮನ್ನು ಅವಲಂಬಿಸಿದ ತಂದೆ-ತಾಯಿ ಮತ್ತು ಹೆಂಡತಿ, ಮಕ್ಕಳಿಗಾಗಿ ತೊಡಬೇಕು. ಹೋದವರು ಹೋಗಿ ಬಿಡುತ್ತಾರೆ, ಅರ್ಧ ಜೀವವಾದವರು ಆಗಲೇ ಸಾಯಬೇಕಿತ್ತು ಅನ್ನುತ್ತಲೇ ಜೀವಿಸುತ್ತಾರೆ.

ನಿಜವಾದ ಭೀಕರ ಸಂಗತಿ ಸಾವಿನ ನಂತರ ಅವಲಂಬಿತರ ಕುಟುಂಬದ್ದು. ವೃದ್ಧ ತಂದೆ-ತಾಯಿಗಳಿದ್ದರೆ ಸಾವಿನ ನೋವು ಸಾಲಸೋಲಗಳ ತಾಪತ್ರಯ, ಹೆಂಡತಿ ಇದ್ದರೆ ಅವಳ ಅತಂತ್ರ ಬಾಳ್ವೆ, ಮಕ್ಕಳ ವಿದ್ಯಾಭ್ಯಾಸ, ಅನ್ನಕ್ಕೆ ಹುಡುಕಾಟ. ಇವು ನಿತ್ಯ ಚಿತ್ರಹಿಂಸೆ ಕೊಡುತ್ತದೆ. ಮಧ್ಯವಯಸ್ಸಿನಲ್ಲಿ ಗಂಡ ಸತ್ತರೆ ಹೆಂಡತಿಯೂ ಸತ್ತಂತೆ. ಇದು ಇಡೀ ಕುಟುಂಬವನ್ನು ಸರಿಪಡಿಸಲಾಗದ ಮಾನಸಿಕ, ವ್ಯಾವಹಾರಿಕ ಸಂಕಷ್ಟಕ್ಕೆ ತಳ್ಳುತ್ತದೆ. ಇದು ಬೇಕೇ? ಬೇಡವಾದರೆ ಹೆಲ್ಮೆಟ್, ಲೈಫ್‌ ಜಾಕೆಟ್ ನಿಮ್ಮ ಪಾಲಿನ ದೇವರು ಎಂದುಕೊಳ್ಳಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ