ಕೃಷಿಯಲ್ಲಿ ಅವೈಜ್ಞಾನಿಕ ವಿಧಾನ ಸಲ್ಲ

Team Udayavani, Nov 22, 2019, 6:24 PM IST

ಹೊಳಲ್ಕೆರೆ: ಮಣ್ಣು ಸ್ವಾಭಾವಿಕ ವಸ್ತು. ಇದು ಖನಿಜಯುಕ್ತವಾಗಿರುವುದರಿಂದ ಸಸ್ಯದ ಬೇರುಗಳು ಬೆಳೆಯಲು ಅಗತ್ಯವಿರುವ ಪೋಷಕಾಂಶಗಳಿವೆ ಎಂದು ಮಣ್ಣು ಮತ್ತು ಭೂಮಿ ಸರ್ವೆ ಇಲಾಖೆಯ ಕ್ಷೇತ್ರಾಧಿಕಾರಿ ಮಹೇಂದ್ರ ಹೇಳಿದರು.

ಮಣ್ಣು ಪರೀಕ್ಷಾ ಮಾದರಿ ಗ್ರಾಮ ಬಾಣಗೆರೆಗೆ ಭೇಟಿ ರೈತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಮಣ್ಣಿನಲ್ಲಿ ಖನಿಜದ ಅಂಶಗಳಿವೆ. ಆಹಾರಗಳ ಉತ್ಪಾದನೆಗೆ ಬೇಕಾದ ಸಸ್ಯಗಳನ್ನು ಬೆಳೆಯಲು ಪೂರಕವಾಗಿರುವ ಆಂಶಗಳು ಹೆಚ್ಚಾಗಿದೆ. ಆದರೂ ರೈತರು ಮಣ್ಣಿನಲ್ಲಿರುವ ಅಂಶಗಳನ್ನು ಕಡೆಗಣಿಸಿ ಅವೈಜ್ಞಾನಿಕ ವಿಧಾನಗಳಿಂದ ಯಶಸ್ಸು ಸಿಗುತ್ತಿಲ್ಲ ಎಂದರು.

ಕೃಷಿಯಲ್ಲಿ ಮಣ್ಣು ಬಳಕೆಯಾಗುತ್ತಿದ್ದು ಸಸ್ಯಗಳಿಗೆ ಪ್ರಾಥಮಿಕ ಪೌಷ್ಟಿಕಾಂಶವನ್ನು ಪ್ರತ್ಯಾಮ್ಲವಾಗಿ ಉಪಯೋಗಿಸಲಾಗುತ್ತದೆ. ಜಲ ಕೃಷಿಯಲ್ಲಿ ಹೇಳಿರುವಂತೆ ಪೌಷ್ಟಿಕಾಂಶಗಳನ್ನು ಕರಗಿಸಿ ಮಾಡಿದಂತಹ ಮಿತ್ರಣ ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮಣ್ಣಿನ ವಿಧಕ್ಕೆ ಅನುಗುಣವಾಗಿ ವಿವಿಧ ಸಸ್ಯಗಳನ್ನು ಬೆಳೆಯಬಹುದು. ಅದರೆ ಮಣ್ಣುಗಳಲ್ಲಿ ವಿವಿಧ ರೀತಿಗಳಿದ್ದು ಅವುಗಳಲ್ಲಿರುವ ಪೌಷ್ಟಿಕಾಂಶಗಳನ್ನು ರೈತರು ಅರಿತುಕೊಂಡು ಕೃಷಿ ಕಾರ್ಯ ಕೈಗೊಳ್ಳಬೇಕು. ಆಗ ಇಳುವರಿ ಹೆಚ್ಚಾಗಿ ಆರ್ಥಿಕವಾಗಿ ಲಾಭ ಪಡೆಯಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸುಲು ಮಾತನಾಡಿ, ಮಣ್ಣಿನಲ್ಲಿರುವ ಬಹಳಷ್ಟು ಸಜೀವಿ ಸಸ್ಯಗಳು, ಕ್ರೀಟಗಳು, ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳು, ಪೋಷಕಾಂಶ ಹಾಗೂ ಶಕ್ತಿಗಾಗಿ ಸಾವಯವ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತವೆ. ಮಣ್ಣಿನಲ್ಲಿ ಅನೇಕ ವಿಧಿಗಳಿದ್ದು, ಮಣ್ಣಿನಲ್ಲಿರುವ ಅಂಶಗಳು ಕರಗುವ ವಸ್ತುಗಳ ಮೇಲೆ ಸಾವಯವ ಅಂಶಗಳನ್ನು ಕಂಡುಕೊಳ್ಳಬೇಕು. ಕಲ್ಲಿನಿಂದ ಬರುವ ಮಣ್ಣಿನಲ್ಲಿ ಯಾವುದೇ ಸಾವಯವ ಅಂಶಗಳಿರುವುದಿಲ್ಲ. ಮಣ್ಣಿನಲ್ಲಿ ಕೊಳೆಯುವ ವಸ್ತುಗಳಿಂದ ಮಾತ್ರ ಫಲವತ್ತತೆಯನ್ನು ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.

ಸಾವಯವ ಪದಾರ್ಥಗಳು ಮತ್ತು ಹ್ಯೂಮಸ್‌ಗಳು ಮಣ್ಣಿನಲ್ಲಿ ವೃದ್ಧಿಸಲು, ಸೇರಲು, ಕರಗಲು ಹವಾಮಾನದ ಪಾತ್ರ ಮುಖ್ಯವಾಗಲಿದೆ. ಮಣ್ಣಿನಲ್ಲಿ ಉಂಟಾಗುವ ಸಾವಯವ ಪದಾರ್ಥಗಳ ವೃದ್ಧಿಗೆ ಉಷ್ಣತೆ ಮತ್ತು ತೇವಾಂಶ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದರು.

ಕೃಷಿ ಅಧಿಕಾರಿ ಧನರಾಜ್‌ ಮಾತನಾಡಿ, ರೈತರು ಮಣ್ಣಿನ ಮಹತ್ವವನ್ನು ಅರಿತುಕೊಳ್ಳಬೇಕು. ಪೂರಕ ಬೆಳೆ ತೆಗೆದುಕೊಳ್ಳಲು ಮಣ್ಣಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಮಣ್ಣಿನ ಪರೀಕ್ಷೆಯಿಂದ ಮಣ್ಣಿನಲ್ಲಿರುವ ಆರೋಗ್ಯವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಮಣ್ಣು ಮಾದರಿ ಪರೀಕ್ಷಾಧಿಕಾರಿ ಮಲ್ಲನಗೌಡ ಮಾತನಾಡಿ, ತಾಲೂಕಿನಲ್ಲಿ ಆಯ್ಕೆಗೊಂಡಿರುವ ಬಾಣಗೆರೆ ಗ್ರಾಮದಲ್ಲಿ 228 ರೈತರ ಭೂಮಿಯನ್ನು ಆಯ್ಕೆ ಮಾಡಿಕೊಂಡು ಮಣ್ಣು ಪರೀಕ್ಷೆ ಮಾಡಲಾಗಿದೆ. ರೈತರಿಗೆ ಮಣ್ಣು ಮಾದರಿ ಚೀಟಿಯನ್ನು ನೀಡಲಾಗಿದೆ ಎಂದರು. ಬಿ.ಟಿ.ಸಿ ಕುಮಾರ್‌, ತಾಂತ್ರಿಕ ಅಧಿಕಾರಿ ಗೋಪಿಕೃಷ್ಣ, ಕೃಷಿಕ ಬಾಣಗೆರೆ ಬಸಣ್ಣ ಮತ್ತಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ