ಬನಶಂಕರಿ ದೇವಸ್ಥಾನ ಲೋಕಾರ್ಪಣೆ

Team Udayavani, Nov 13, 2019, 4:03 PM IST

ಹೊಸದುರ್ಗ: ತಾಲೂಕಿನ ಇತಿಹಾಸ ಪ್ರಸಿದ್ಧ ನೀರಗುಂದ ಗ್ರಾಮದ ಬನಶಂಕರಿದೇವಿ ನೂತನ ದೇವಸ್ಥಾನದ ಲೋಕಾರ್ಪಣೆ ಸಮಾರಂಭ ನ. 14 ಮತ್ತು 15ರಂದು ನಡೆಯಲಿದೆ.

ನ. 14 ರಂದು ಸಂಜೆ 5 ಗಂಟೆಗೆ ಗ್ರಾಮದ ಯಳಗಂಧೇಶ್ವರಿ, ಕಾಲಬೈರವೇಶ್ವರಸ್ವಾಮಿ, ಚೌಳಹಿರಿಯೂರು, ಹೊನ್ನೇನಹಳ್ಳಿ ಬನಶಂಕರಿದೇವಿ, ಆದ್ರಿಕಟ್ಟೆ ಹುಲಿಯಮ್ಮ, ಮಳಲಿ ಕರಿಯಮ್ಮದೇವಿ ಕೂಡು ಭೇಟಿ ನಡೆಯಲಿದೆ. ಹಾಲುರಾಮೇಶ್ವರ ಪುಣ್ಯಕ್ಷೇತ್ರದಿಂದ ಗಂಗೆ ತರಲಾಗುವುದು. ನಂತರ ಹಂಪಿ ಹೇಮಕೂಟ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಶಿಲ್ಪಿಗಳಿಂದ ಆಲಯ ಪರಿಗ್ರಹಣ ಜರುಗಲಿದೆ.

ನ. 15 ರಂದು ಬೆಳಿಗ್ಗೆ 5 ಗಂಟೆಯಿಂದ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ನಾಂದಿ, ಏಕಾದಶ, ಪಂಚ, ಸಪ್ತದೇವತೆ ಹಾಗೂ ಅಷ್ಟದಿಕ್ಪಾಲಕರ ಕಳಶ ಸ್ಥಾಪನೆ, ಹೋಮ ಹವನ, ದೇವಿಗೆ ಪ್ರಾಣ ಪ್ರತಿಷ್ಠಾಪನೆ, ಕಳಶಾರೋಹಣ, ಕುಂಭಾಭಿಷೇಕ ಹಾಗೂ ಪೂರ್ಣಾಹುತಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12:30 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಬೆಲಗೂರು ಮಾರುತಿ ಪೀಠದ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಡಾ| ಶಾಂತವೀರ ಸ್ವಾಮೀಜಿ, ಕೆಲ್ಲೋಡು ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ನೀರಗುಂದ ದೇವಾಂಗ ಸಮಾಜದ ಅಧ್ಯಕ್ಷ ಎನ್‌.ವಿ. ಶೇಖರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶಾಸಕ ಗೂಳಿಹಟ್ಟಿ ಶೇಖರ್‌ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಸದ ಎ. ನಾರಾಯಣಸ್ವಾಮಿ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಡಾ| ಜಿ. ರಮೇಶ್‌, ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ತಾಲೂಕು ಸಂಘದ ಅಧ್ಯಕ್ಷ ಗೋ.ತಿಪ್ಪೇಶ್‌, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಭಾಗವಹಿಸುವರು.

ಹೆಂಚಿನ ಮನೆಯಲ್ಲಿದ್ದ ದೇವಸ್ಥಾನ ಶಿಥಿಲವಾಗಿತ್ತು. ಬನಶಂಕರಿ ಕುಲ ಬಾಂಧವರಾದ ದೇವಾಂಗ ಸಮಾಜದವರು ಹಳೇ ದೇವಸ್ಥಾನದ ಎದುರಿಗೆ ಭಕ್ತರ ಆರ್ಥಿಕ ನೆರವಿನೊಂದಿಗೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಕರ್ಷಕವಾದ ನೂತನ ದೇವಸ್ಥಾನವನ್ನು ನಿರ್ಮಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ