ಮನಸ್ಸಿನ ಹತೋಟಿಯಿಂದ ಅದ್ಭುತ ಪ್ರಗತಿ

Team Udayavani, Nov 4, 2019, 4:06 PM IST

ಹೊಸದುರ್ಗ: ಮನಸ್ಸು ಸಕಾರಾತ್ಮಕವಾಗಿದ್ದರೆ ವ್ಯಕ್ತಿತ್ವದ ವಿಕಾಸ, ನಕಾರಾತ್ಮಕವಾಗಿದ್ದರೆ ವ್ಯಕ್ತಿತ್ವದ ಅವನತಿಯಾಗುತ್ತದೆ. ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳುವವರು ಅದ್ಭುತ ಪ್ರಗತಿ ಸಾಧಿಸಲು ಸಾಧ್ಯ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಭಾನುವಾರ ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಬೆಳಗಿನ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಸ್ಸನ್ನು ಹತೋಟಿಯಲ್ಲಿಡುವುದು ಕಷ್ಟಕರವಾದರೂ ಅಸಾಧ್ಯವೇನಲ್ಲ. ಮನಸ್ಸಿನ ನಿಯಂತ್ರಣವೇ ಮನುಷ್ಯನ ಸಾಧನೆ. ಹೊರಗಿನ ಪಂಚೇಂದ್ರಿಯಗಳ ಜೊತೆಗೆ ಅಂತರ್‌ ಇಂದ್ರಿಯಗಳಾದ ಮನಸ್ಸು, ಬುದ್ಧಿ, ಭಾವಗಳ ಹದಬರಿತ ಸಮ್ಮಿಲನದಿಂದ ಸಾಮಾನ್ಯನೂ ಅಸಾಮಾನ್ಯ ಪ್ರಗತಿ ಸಾಧಿಸಬಹುದು.

ಮನಸ್ಸು ಹತೋಟಿಯಲ್ಲಿದ್ದರೆ ಮಾತ್ರ ಹೊರಗಿನ ಇಂದ್ರಿಯಗಳೂ ಹತೋಟಿಗೆ ಬರಲು ಸಾಧ್ಯ. ಇಂದ್ರಿಯಗಳಿಗೆ ಶಕ್ತಿ ಕೊಡುವಂಥದ್ದು ಮನಸ್ಸು. ಮನಸ್ಸು ತುಂಬ ಚಂಚಲವಾದದ್ದು. ಅದು ಕ್ಷಣ-ಕ್ಷಣಕ್ಕೂ ಗೋಸುಂಬೆಯಂತೆ ಬಣ್ಣ ಬದಲಾಯಿಸುವುದು. ಕಪಿಯಂತೆ ಅತ್ತಿಂದಿತ್ತ ಹರಿದಡುವುದು ಎಂದರು.

ಆತ್ಮಹತ್ಯೆಗೆ ಮೂಲ ಕಾರಣ ಮನೋದೌರ್ಬಲ್ಯ. ಸಂಸ್ಕಾರವಿಲ್ಲದ ಮನಸ್ಸನ್ನು ಹತೋಟಿಯಲ್ಲಿ ತರಲು ಸಾಧ್ಯವಿಲ್ಲ. ಒಳ್ಳೆಯ ಸಂಸ್ಕಾರ ಮನೆ, ಶಾಲೆ ಮತ್ತು ಸಮಾಜದಿಂದ ಮಕ್ಕಳಿಗೆ ದೊರೆಯಬೇಕು. ಅಧ್ಯಾಪಕರ ಮನೋಸ್ಥಿತಿ ಸದಾ ಸಕಾರಾತ್ಮಕವಾಗಿರಬೇಕು. ಇನ್ನೊಬ್ಬರ ದೌರ್ಬಲ್ಯಗಳನ್ನು ಎತ್ತಿ ಹೇಳುವುದಕ್ಕಿಂತ; ತನ್ನ ದೌರ್ಬಲ್ಯಗಳನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಕಟ್ಟಡಗಳನ್ನು ಕಟ್ಟುವ ಮುನ್ನ ಮನಸ್ಸು ಕಟ್ಟುವ ಕೆಲಸವಾಗಬೇಕು ಎಂದರು.

ಚಿಂತನ ಗೋಷ್ಠಿ ವಿಷಯವಾದ “ಮಾನಸಿಕ ಸಾಮರ್ಥ್ಯ’ ಕುರಿತು ಹೊಸದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌ ಜಯಪ್ಪ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸು-ಅಪಯಶಸ್ಸು ಅವನು ಹೊಂದಿರುವ ಮಾನಸಿಕ ಸಾಮರ್ಥ್ಯ ಅವಲಂಬಿಸಿರುತ್ತದೆ. ಗಳಿಸಿದ ಜ್ಞಾನವನ್ನು ಸಮಯೋಚಿತವಾಗಿ, ಸಮರ್ಪಕವಾಗಿ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾನೆನ್ನುವುದೇ ಆತ ಹೊಂದಿರುವ ಮಾನಸಿಕ ಸಾಮರ್ಥ್ಯ. ತಾನು ವಹಿಸಿಕೊಂಡಿರುವ ಕೆಲಸವನ್ನು ಪರಿಪೂರ್ಣಗೊಳಿಸುವ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿಯೇ ಮಾನಸಿಕ ಸಾಮರ್ಥ್ಯ ಶಕ್ತಿ ಅಡಗಿದೆ. ಸರ್‌ ಎಂ ವಿಶ್ವೇಶ್ವರಯ್ಯನವರ ಮಾನಸಿಕ ಸಾಮರ್ಥ್ಯ ಅದ್ಭುತವಾದುದಾಗಿತ್ತು. ಈ ಕಾರಣಕ್ಕಾಗಿಯೇ ಅವರು ಮಾಡಿದ ಎಲ್ಲ ಕೆಲಸಗಳು ಇಂದಿಗೂ ಪ್ರಾತಃಸ್ಮರಣೀಯವಾಗಿವೆ ಎಂದರು.

ಸಂಗೀತ ಶಿಕ್ಷಕ ಎಚ್‌.ಎಸ್‌. ನಾಗರಾಜ್‌ ಪ್ರಾರ್ಥನೆ ನಡೆಸಿಕೊಟ್ಟರು. ಶಿವಮಂತ್ರ ಲೇಖನವನ್ನು ವಿದ್ಯಾರ್ಥಿಗಳು ಬರೆದರು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ನೌಕರರು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ