ವಾಲ್ಮಿಗೆ ಜಲಾಮೃತ ಆಂದೋಲನ ಹೊಣೆ

ಗ್ರಾಮೀಣದಲ್ಲಿ ಜಲ ಸಂರಕ್ಷಣೆ-ಸಂವರ್ಧನೆ ಜಾಗೃತಿ•ಪಂಚಾಯತ್‌ ಪ್ರತಿನಿಧಿಗಳಿಗೆ ಜಲಸಾಕ್ಷರತೆ ಪಾಠ

Team Udayavani, Jun 13, 2019, 9:49 AM IST

ಬದಾಮಿಯ ಬನಶಂಕರಿ ದೇವಸ್ಥಾನದ ಹರಿದ್ರತೀರ್ಥ ಕಲ್ಯಾಣಿ ಮಳೆಯಿಲ್ಲದೇ ಬರದಿಂದ ಸಂಪೂರ್ಣ ಬತ್ತಿ ಹೋಗಿದೆ.

ಅಮರೇಗೌಡ ಗೋನವಾರ
ಹುಬ್ಬಳ್ಳಿ:
ಜಲಸಂರಕ್ಷಣೆ-ಸಂವರ್ಧನೆ, ಜಲ ಸಾಕ್ಷರತೆ ಹಾಗೂ ಹಸಿರೀಕರಣ ಉದ್ದೇಶದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಜಲಾಮೃತ’ಕ್ಕೆ ಆಂದೋಲನ ರೂಪ ನೀಡಲು, ಸಂಪನ್ಮೂಲ ವ್ಯಕ್ತಿಗಳನ್ನು ತಯಾರುಗೊಳಿಸುವ ಹೊಣೆಯನ್ನು ಮೈಸೂರಿನ ಅಬ್ದುಲ್ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡದ ವಾಲ್ಮಿಗೆ ವಹಿಸಲಾಗಿದೆ.

ಜಲಾಮೃತ ಯೋಜನೆ ಯಶಸ್ವಿ ನಿರ್ವಹಣೆಗೆ ರಾಜ್ಯ ಸರ್ಕಾರ ನಿವೃತ್ತ ಐಎಫ್ಎಸ್‌ ಅಧಿಕಾರಿಯೊಬ್ಬರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದು, ಜಿಲ್ಲೆಯಿಂದ ಗ್ರಾಮಮಟ್ಟದವರೆಗೂ ಜಲ ಸಾಕ್ಷರತೆ, ಜಲ ಸಂರಕ್ಷಣೆ-ಸಂವರ್ಧನೆ ಜಾಗೃತಿ ಮೂಡಿಸಲು ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಡಿಯಲ್ಲಿ ಜಲಾಮೃತ ಯೋಜನೆ ನಿರ್ವಹಣೆಗೊಳ್ಳುತ್ತಿದ್ದು, ವಿವಿಧ ಇಲಾಖೆಗಳು, ವಿಶ್ವವಿದ್ಯಾಲಯಗಳು, ಸರ್ಕಾರೇತರ ಸಂಸ್ಥೆಗಳು ಸಾಥ್‌ ನೀಡುತ್ತಿವೆ.

ಪರಿಣಾಮಕಾರಿ ಆಂದೋಲನಕ್ಕೆ ಯೋಜನೆ: ಭವಿಷ್ಯದಲ್ಲಿ ಜಲಗಂಡಾಂತರ ತಪ್ಪಿಸುವ ನಿಟ್ಟಿನಲ್ಲಿ ಜಲಾಮೃತ ಯೋಜನೆ ಅತ್ಯಂತ ಪರಿಣಾಮಕಾರಿಯಾಗಲಿದ್ದು, ಜನರಿಗೆ ಇದನ್ನು ಮನವರಿಕೆ ಮಾಡಿಕೊಡುವ ಹಲವು ರೀತಿಯ ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ನೀರಿನ ಸದ್ಬಳಕೆ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದ ಜನರಲ್ಲಿ ಜಲಸಾಕ್ಷರತೆ ಮೂಡಿಸುವ, ಗ್ರಾಪಂ ಮಟ್ಟದಲ್ಲಿ ಜಲ ಆಯವ್ಯಯ ಮಂಡನೆ ಮಾಡುವ ನಿಟ್ಟಿನಲ್ಲಿ ಪಂಚಾಯತ್‌ ಪ್ರತಿನಿಧಿಗಳಿಗೆ ಜಲಸಾಕ್ಷರತೆ ತರಬೇತಿ ನೀಡಲಾಗುತ್ತದೆ. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳನ್ನು ತಯಾರುಗೊಳಿಸುವ ಜವಾಬ್ದಾರಿಯನ್ನು ಧಾರವಾಡದ ವಾಲ್ಮಿ ಹಾಗೂ ಮೈಸೂರಿನ ಅಬ್ದುಲ್ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ನೀಡಲಾಗಿದೆ.

ಜಲಸಾಕ್ಷರತೆ ಹಾಗೂ ಜಲಾಮೃತ ಯೋಜನೆಯ ಪರಿಣಾಮಕಾರಿ ಪ್ರಚಾರ, ತರಬೇತಿ ನಿಟ್ಟಿನಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ಈ ಎರಡು ಸಂಸ್ಥೆಗಳಲ್ಲಿ ತರಬೇತಿಗೊಳಿಸಲಾಗುತ್ತದೆ. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ತಯಾರು ಮಾಡಲಿದ್ದಾರೆ. ಕಾರ್ಯಾಗಾರಗಳ ಮೂಲಕ ತರಬೇತಿ ನೀಡಲಾಗುತ್ತದೆ.

ತಾಲೂಕು ಮತ್ತು ಗ್ರಾಮಮಟ್ಟದಲ್ಲಿ ವಿಡಿಯೋ ಕಾನ್ಫ್ರೆನ್ಸ್‌ ಮೂಲಕವೂ ತರಬೇತಿ ನೀಡಲು ಯೋಜಿಸಲಾಗಿದೆ. ಯೋಜನೆ ಪ್ರಕಾರ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಸದಸ್ಯರಿಗೆ ಜಲಸಾಕ್ಷರತೆ ತರಬೇತಿ ಮೂಲಕ ಜಲಸಂರಕ್ಷಣೆ ಹಾಗೂ ಸಂವರ್ಧನೆ ಮಹತ್ವ ಮನದಟ್ಟು ಮಾಡಲಾಗುತ್ತದೆ. ಆ ಮೂಲಕ ಜನರಿಗೂ ಇದರ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತದೆ.

ಸಮಿತಿ ರಚನೆ: ಜಲಾಮೃತ ಯೋಜನೆಯಡಿ ಜಲಸಾಕ್ಷರತೆ ಹಾಗೂ ಯೋಜನೆ ಅನುಷ್ಠಾನ ತರಬೇತಿಗೆ ಪೂರಕವಾಗಿ ಪಠ್ಯ ಹಾಗೂ ತರಬೇತಿ ಸಾಮಗ್ರಿ ರಚನೆಗಾಗಿ ರಾಜ್ಯಮಟ್ಟದ ಎಸ್‌ಎಂಎಸ್‌ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿಗೊಳಿಸುವ ಪಠ್ಯವನ್ನು ಸಿದ್ಧಪಡಿಸಲಿದೆ.

ಯೋಜನೆಯ ಪ್ರಚಾರಾಂದೋಲನಕ್ಕೆ ಬೇಕಾಗುವ ಭಿತ್ತಿಪತ್ರ, ಕರಪತ್ರ, ಗೋಡೆಬರಹ ಕೈಪಿಡಿ ಇನ್ನಿತರ ಮಾಹಿತಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಧಾರವಾಡದ ವಾಲ್ಮಿ ಸಂಸ್ಥೆಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜಲ ಸಾಕ್ಷರತೆ ಅರಿವು ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಜಲಸಾಕ್ಷರತೆ ಮಾದರಿಗಳ ಪರಿಚಯಕ್ಕೆ ಮನವಿ ಮಾಡಲಾಗುತ್ತದೆ. ಜಲಮೂಲಗಳ ಸಂರಕ್ಷಣೆ ಹಾಗೂ ಸಂವರ್ಧನೆ ಕಾಮಗಾರಿಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ) ಅಡಿಯಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ.

ಸಮುದಾಯಾಧಾರಿತ ಯೋಜನೆ ಬೇಡಿಕೆ
ಜಲಾಮೃತ ಯೋಜನೆ ಮತ್ತೂಂದು ಸರ್ಕಾರಿ ಯೋಜನೆ ರೂಪ ಪಡೆಯದೆ, ಸಂಪೂರ್ಣವಾಗಿ ಅಧಿಕಾರಿಗಳ ಹಿಡಿತದಲ್ಲೇ ಸಾಗದೆ, ಇದೊಂದು ಸಮುದಾಯಾಧಾರಿತ, ಜನ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಯೋಜನೆಯಾದಾಗ ಮಾತ್ರ ನಿರೀಕ್ಷಿತ ಯಶಸ್ಸು ಕಾಣಲಿದೆ. ಜನರ ಭಾವನೆ, ಚಿಂತನೆಗಳ ಅಭಿವ್ಯಕ್ತಕ್ಕೆ ಅವಕಾಶ ದೊರೆಯುವಂತಾಗಬೇಕು. ಸ್ಥಳೀಯ ಸಮಸ್ಯೆಗಳು ಭಿನ್ನವಾಗಿರುತ್ತವೆ. ಎಲ್ಲವುದಕ್ಕೂ ಒಂದೇ ಪರಿಹಾರ ಮಾದರಿ ಅಳವಡಿಸಿ ಜಾರಿಗೆ ಮುಂದಾದರೆ ಸಮಂಜಸವಾಗದ್ದರಿಂದ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಭಾವನೆ, ಅನಿಸಿಕೆಗಳಿಗೆ ಆದ್ಯತೆ ದೊರೆತರೆ ಚೆನ್ನ ಎಂಬುದು ಅನೇಕರ ಅನಿಸಿಕೆಯಾಗಿದ್ದು, ಸರ್ಕಾರ ಇದನ್ನು ಗಮನಿಸಬೇಕಾಗಿದೆ. ಜನಸಮುದಾಯದ ಸಹಭಾಗಿತ್ವದೊಂದಿಗೆ ಯೋಜನೆ ಯಶಸ್ವಿಗೆ ಮುಂದಡಿ ಇರಿಸಬೇಕಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ