ಬಳಕೆಯಾಗದೇ ಸಮುದಾಯ ಭವನ ಪಾಳು

ಒಂದೂವರೆ ದಶಕದ ಹಿಂದೆ 40 ಲಕ್ಷದಲ್ಲಿ ನಿರ್ಮಾಣಈಗಲೂ ಪುರಸಭೆಗೆ ಹಸ್ತಾಂತರಗೊಂಡಿಲ್ಲ

Team Udayavani, Oct 5, 2019, 11:44 AM IST

„ಶಶಿಕಾಂತ ಕೆ.ಭಗೋಜಿ
ಹುಮನಾಬಾದ
: ಪಟ್ಟಣದ ಇಂದಿರಾ ನಗರದಲ್ಲಿ 2002-03ನೇ ಸಾಲಿನಲ್ಲಿ ಶಂಕುಸ್ಥಾಪನೆ ನೆರವೇರಿಸಿ, ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ ಮಾಜಿ ಸಂಸದ ದಿ. ರಾಮಚಂದ್ರ ಆರ್ಯ ಸಮುದಾಯ ಭವನ ಉದ್ದೇಶಿತ ಕೆಲಸಕ್ಕೆ ಬಳಕೆಯಾಗದೇ ದುರ್ವೆಸನಿಗಳ ತಾಣವಾಗಿ ಮಾರ್ಪಟ್ಟಿದೆ.

2002-03ನೆ ಸಾಲಿನಲ್ಲಿ ಸಂಸದರಾಗಿದ್ದ ರಾಮಚಂದ್ರ ಆರ್ಯ ಅವರ 40ಲಕ್ಷ ರೂ. ಅನುದಾನದಲ್ಲಿ ಕರ್ನಾಟಕ ಭೂಸೇನಾ ನಿಗಮ ಕಟ್ಟಡವನ್ನು ನಿರ್ಮಿಸಿದೆ. ಕಟ್ಟಡ ನಿರ್ಮಾಣಗೊಂಡು ಒಂದೂವರೆ ದಶಕ ಗತಿಸಿದರೂ ಕೂಡ ಪುರಸಭೆಗೆ ಹಸ್ತಾಂತರಗೊಂಡಿಲ್ಲ. ಅಲ್ಲದೇ ಉದ್ಘಾಟನೆ ಯೋಗ ಕೂಡಿ ಬರುವುದಕ್ಕೂ ಮುನ್ನವೇ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.

ಕಟ್ಟಡದಲ್ಲೇನಿದೆ?: ನೆಲ ಮಾಳಗೆಯಲ್ಲಿ ಸಭಾಂಗಣ, ವೇದಿಕೆ, ನಾಲ್ಕು ಕೊಠಡಿಗಳಿವೆ. ಮೊದಲ ಮಹಡಿಯಲ್ಲಿ ಒಂದು ಸಭಾಂಗಣ, ವೇದಿಕೆ, ಎರಡು ಕೊಠಡಿಗಳಿವೆ. ಕಟ್ಟಡದ ಬಲ ಬದಿಗೆ ವಿಶಾಲ ಮೈದಾನವಿದೆ. ಕಟ್ಟಡದ ಮುಂಭಾಗದಲ್ಲಿ ಜಾಗವಿದೆ. ನಿರ್ಮಾಣ ಸಂದರ್ಭದಲ್ಲಿ ವಿದ್ಯುತ್‌ ವೈರಿಂಗ್‌ ಕೆಲಸ ಮಾತ್ರ ಪೂರ್ಣಗೊಂಡಿದೆ. ಕಟ್ಟಡದಲ್ಲಿ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್‌ ಸಂಪರ್ಕ, ಅಡುಗೆ ಕೋಣೆ, ವಸ್ತು ಸಂಗ್ರಹ ಕೊಠಡಿ, ಶೌಚಾಲಯ, ನೀರು ಸಂಗ್ರಹಾಗಾರ ಅತ್ಯಂತ ಅವಶ್ಯವಿದ್ದು, ಮೂಲ ಸೌಲಭ್ಯ ಕೊರತೆ ಕಾರಣ ಸಮುದಾಯ ಭವನದಲ್ಲಿ ಯಾವುದೇ ಸಭೆ ಸಮಾರಂಭಗಳು ನಡೆಯುತ್ತಿಲ್ಲ. 40ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ನಿರ್ವಹಣೆ ಜವಬ್ದಾರಿಯನ್ನು ಯಾರೊಬ್ಬರಿಗೂ ವಹಿಸಿಕೊಡದ ಕಾರಣ ಬಳಕೆ ಇಲ್ಲದೇ ಪಾಳು ಬಿದ್ದಿದೆ. ಆದರೆ ಪುರಸಭೆ ವ್ಯಾಪ್ತಿಗೆ ಒಳಪಡುವ ಕಾರಣ ಈವರೆಗೆ ಎರಡು ಮೂರು ಬಾರಿ ಸಣ್ಣಪುಟ್ಟ ದುರಸ್ತಿ ಕೆಲಸಗಳಿಗಾಗಿ ಪುರಸಭೆ ಅನುದಾನ ನೀಡಿದೆ.

ದುರ್ವ್ಯಸನಿಗಳ ತಾಣ: ಯಾರೂ ನಿರ್ವಹಿಸದ ಈ ಕಟ್ಟಡವೀಗ ಅನಾಥವಾಗಿದೆ. ದುರ್ವ್ಯಸನಿಗಳು ಈ ಕಟ್ಟಡವನ್ನು ತಮ್ಮ ವ್ಯಸನಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಅಲ್ಲಿ ಬಿದ್ದಿರುವ ಮದ್ಯದ ಬಾಟಲ್‌, ಗೋಡೆಗಳ ಮೇಲೆ ಗುಟಕಾ ತಿಂದು ಉಗಿದಿರುವ ಕಲೆಗಳೇ ಸಾಕ್ಷಿ. ಕಿಟಗಿ ಗಾಜುಗಳು ಪುಡಿಪುಡಿಯಾಗಿವೆ. ಬಾಗಿಲು ಸಹ ಹಾಳಾಗಿವೆ. ಕಟ್ಟಡದ ಬಿಡಿ ಭಾಗವೆಲ್ಲ ಗಿಡಗಂಟೆಗಳ ತಾಣವಾಗಿದ್ದು, ಬೆಳಗ್ಗೆ ಅದೆಷ್ಟೋ ಜನರು ಈ ಕಟ್ಟಡದ ಬಿಡಿ ಭಾಗವನ್ನು ರಾತ್ರಿ ಶೌಚಕ್ಕೆ, ಹಗಲಲ್ಲಿ ಮೂತ್ರ ವಿಸರ್ಜನೆಗೆ ಬಳಸುತ್ತಿರುವ ಕಾರಣ ಸಮುದಾಯ ಭವನದ ಬಿಡಿ ಭಾಗ ಸದಾ ನಾರುತ್ತದೆ.

ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡಕ್ಕೆ ಕೊರತೆ ಇರುವ ಮೂಲ ಸೌಲಭ್ಯ ಕಲ್ಪಿಸಿ, ಪುರಸಭೆ ಅಥವಾ ನಿರ್ವಹಣೆಗೆ ಮುಂದಾಗುವವರಿಗೆ ಜವಾಬ್ದಾರಿ ವಹಿಸಿ ಕೊಡುವ ಮೂಲಕ, ದುಬಾರಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವ ಪಾಲಕರಿಗೆ ಅತ್ಯಲ್ಪ ದರದಲ್ಲಿ ನೀಡಿದರೆ ಬಡ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಈನ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತವರು ಸಾಧ್ಯವಾದಷ್ಟು ಶೀಘ್ರದಲ್ಲಿ ಮೂಲಸೌಲಭ್ಯ ಕಲ್ಪಿಸಿಕೊಡುವ ಮೂಲಕ ಉದ್ದೇಶಿತ ಕೆಲಸಕ್ಕೆ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ