ಒತ್ತುವರಿ ಜಾಗ ವಶಪಡಿಸಿಕೊಳ್ಳಲು ಸನ್ನದ್ಧರಾಗಿ

ವಕ್ಫ್ ಮಂಡಳಿ ಅಧಿಕಾರಿಗಳ ಕಾರ್ಯವೈಖರಿಗೆ ಸಿಡಿಮಿಡಿ ನೋಟಿಸ್‌ಗೆ ಉತ್ತರ ನೀಡದವರ ವಿರುದ್ಧ ಕ್ರಮ ಕೈಗೊಳ್ಳಿ

Team Udayavani, Nov 13, 2019, 10:55 AM IST

ಕಲಬುರಗಿ: ಮಹಾನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನವನ (ಗುಲ್ಶನ್‌ ಭಾಗ್‌) ಪ್ರದೇಶದಲ್ಲಿ ವಿವಿಧ 16 ಸಂಸ್ಥೆಗಳು ಅಕ್ರಮವಾಗಿ ಸರ್ವೇ ನಂ-2ರಲ್ಲಿ ಒತ್ತುವರಿ ಮಾಡಿಕೊಂಡಿರುವ 46 ಎಕರೆ 19ಗುಂಟೆ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆಯಲು ಸನ್ನದ್ಧರಾಗುವಂತೆ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಅವರಿಗೆ ಖಡಕ್‌ ಸೂಚನೆ ನೀಡಿದರು.

ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಗುಲಶನ್‌ ಭಾಗ್‌ ಮತ್ತು ಬಡೇಪುರ್‌ ಪ್ರದೇಶದಲ್ಲಿ ಅಕ್ರಮ ಒತ್ತುವರಿ ತೆರವು ಕುರಿತಂತೆ ಪಾಲಿಕೆ ಹಾಗೂ ಜಮೀನು ಒತ್ತುವರಿ ಮಾಡಿಕೊಂಡಿರುವ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ಇದರಲ್ಲಿ ಕೆಲವು ಸರ್ಕಾರಿ ಸಂಸ್ಥೆಗಳು ಇದ್ದು, ಅವು ನಿಯಮಾನುಸಾರ ಲೀಜ್‌ ಅಥವಾ ಸರ್ಕಾರದ ಸೂಕ್ತ ಆದೇಶದೊಂದಿಗೆ ಜಮೀನು ಪಡೆದಿದ್ದಲ್ಲಿ ಕೂಡಲೇ ಪಾಲಿಕೆಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಗುಲ್ಶನ್‌ ಭಾಗ್‌ ಪ್ರದೇಶದಲ್ಲಿರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ 16 ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮಾಲೀಕರಿಗೆ ತೆರವುಗೊಳಿಸುವಂತೆ ಪಾಲಿಕೆ ನೀಡಿರುವ ನೋಟಿಸ್‌ಗಳಿಗೆ ಕೆಲವರು ಇದುವರೆಗೂ ಉತ್ತರ ನೀಡದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಅಲ್ಲದೇ ಉತ್ತರ ನೀಡದ ಒತ್ತುವರಿದಾರರ ಮೇಲೆ ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಂತಹ ಕಾರ್ಯನಿರ್ವಹಣೆ ಶೈಲಿ ಒಳ್ಳೆಯದಲ್ಲ. ಪಾಲಿಕೆಯಲ್ಲಿ ಬೇಜವಾಬ್ದಾರಿತನದಿಂದ ಕಾರ್ಯನಿರ್ವಹಿಸುವ ಅಧಿಕಾರಿ-ಸಿಬ್ಬಂದಿ ವಿರುದ್ಧ ಮೇಜರ್‌ ಸರ್ಜರಿ ಕೈಗೊಳ್ಳಿ ಎಂದು ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಅವರಿಗೆ ಆದೇಶಿಸಿದರು.

ವೀರಶೈವ ಕಲ್ಯಾಣ ಮಂಟಪ, ಜನತಾದಳ ಕಚೇರಿ, ದೋಬಿ ಘಾಟ್‌, ಯಲ್ಲಮ್ಮ ದೇವಸ್ಥಾನ, ಐಡಿಯಲ್‌ ಫೈನ್‌ ಆರ್ಟ್‌ ಸಂಸ್ಥೆ, ಗುಲಬರ್ಗಾ ಕ್ಲಬ್‌, ಹೋಟೆಲ್‌ ಬಹಮನಿ, ರೋಟರಿ ಕ್ಲಬ್‌, ಬಾಲ ಭವನ, ಡಾ| ಎಸ್‌.ಎಂ. ಪಂಡಿತ ರಂಗಮಂದಿರ ಕಟ್ಟಡಗಳಿಗೆ ಸಂಬಂಧಿಸಿದಂತೆ ಮಾಲೀಕತ್ವದ ಹಕ್ಕುಗಳಿದ್ದಲ್ಲಿ ಕೂಡಲೇ ಪಾಲಿಕೆ ಕಚೇರಿಗೆ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.

ಬುಧವಾರದೊಳಗೆ ಮಾಹಿತಿ ನೀಡಿ: ಬಡೇಪುರ ಗ್ರಾಮದ ಸರ್ವೇ ನಂಬರ್‌ 10, 13, 14, 15, 16, 17 ಮತ್ತು 40ರಲ್ಲಿನ ಜಮೀನು ಉತ್ತುವರಿ ಕುರಿತಂತೆ ವರದಿ ಸಲ್ಲಿಸುವಂತೆ ಹಲವಾರು ಬಾರಿ ಪತ್ರ ಬರೆದರೂ ಉತ್ತರ ನೀಡದಿರುವುದಕ್ಕೆ ವಕ್ಫ್  ಮಂಡಳಿ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡ ಸುಬೋಧ ಯಾದವ, ಬುಧವಾರ ಸಂಜೆಯೊಳಗೆ ಎಲ್ಲ ಒತ್ತುವರಿ ಜಮೀನುಗಳ ಸಮಗ್ರ ಮಾಹಿತಿ ಸಲ್ಲಿಸುವಂತೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಶರತ್‌.ಬಿ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ತುಕಾರಾಂ ಪಾಂಡ್ವೆ, ಉಪ ಅರಣ್ಯ ಸಂರಕ್ಷಣಾ ಧಿಕಾರಿ ವನತಿ, ಕಲಬುರಗಿ ನಗರಾಭಿವೃದ್ಧಿ ಪ್ರಾ ಧಿಕಾರದ ಆಯುಕ್ತ ರಾಚಪ್ಪಾ, ಪಾಲಿಕೆ ವಲಯ ಆಯುಕ್ತರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಟ್ಟಡಗಳ ಮಾಲೀಕರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ