ಶಿಕ್ಷಣ ಇಲಾಖೆ ಕೈಪಿಡಿಗೆ ಹೊತ್ತಿದೆ ಕಿಡಿ

Team Udayavani, Nov 15, 2019, 10:55 AM IST

ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಹೊರಡಿಸಿದ ಸುತ್ತೋಲೆಯ ಕೈಪಿಡಿಯಲ್ಲಿ ಸಂವಿಧಾನವನ್ನು ಅಂಬೇಡ್ಕರ್‌ ಅವರೊಬ್ಬರೇ ರಚಿಸಿಲ್ಲ ಎಂದು ನಮೂದಿಸಿ ಅವಮಾನ ಮಾಡಿದ್ದನ್ನು ಖಂಡಿಸಿ ರಿಪಬ್ಲಿಕನ್‌ ಯುಥ್‌ ಫೆಡರೇಷನ್‌ ಸಂಘಟನೆ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಹೊತ್ತು ರಸ್ತೆ ತಡೆ ನಡೆಸಿದ ನೂರಾರು ಜನರು, ಶಿಕ್ಷಣ ಸಚಿವ ಸುರೇಶಕುಮಾರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಮತ್ತು ಆಯುಕ್ತ ಜಗದೀಶ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್‌ ಅವರನ್ನು ಅವಮಾನಿಸಲಾಗಿದೆ. ಸಂವಿಧಾನವನ್ನು ಅಂಬೇಡ್ಕರ್‌ ಅವರೊಬ್ಬರೇ ರಚಿಸಿಲ್ಲ ಎಂದು ಹೇಳುವ ಮೂಲಕ ಮಕ್ಕಳ ತಲೆಗೆ ಇಲ್ಲದ್ದನ್ನು ತುಂಬಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರವೇ ಅಸಹಿಷ್ಣುತೆ ಅನುಸರಿಸುವ ಹುನ್ನಾರ ನಡೆಸಿದೆ ಎಂದು ಪ್ರತಿಭಟನಾಕಾರರು ಘೋಷಣೆಗೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಮಾದಕ್ಕೆ ಶಿಕ್ಷಣ ಸಚಿವ ಸುರೇಶಕುಮಾರ ಅವರೇ ಹೊಣೆಯಾಗಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.

ಅಧ್ಯಕ್ಷ ಹನುಮಂತ ಇಟಗಿ, ಮುಖಂಡರಾದ ಸಂತೋಷ ಮೇಲಮನಿ, ವಿನೋದ ದೊಡ್ಡಮನಿ, ನಾಗೇಂದ್ರ ಜವಳಿ, ರಾಜು ಮುದ್ದನಕರ್‌, ಸಿದ್ಧಾರ್ಥ್ ಚಿಂಚನಸೂರ, ರುಕ್ಮೇಶ ಭಂಡಾರಿ, ರವಿ ಡೋಣಿ, ರತನ ಕನ್ನಡಗಿ, ಶ್ರವಣಕುಮಾರ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ