ಎಪಿಎಂಸಿ ಅಧ್ಯಕ್ಷರಾಗಿ ಅಪ್ಪು ಅಧಿಕಾರ ಸ್ವೀಕಾರ

•ರೈತರ ಶೋಷಣೆಯಾಗದಂತೆ ನಿಗಾ•ವಹಿವಾಟು ಹೆಚ್ಚಳ-ಪಾರದರ್ಶಕತೆಗೆ ಒತ್ತು•ತೆರಿಗೆ ಕಡಿತಕ್ಕೆ ಸಿಎಂಗೆ ಮನವಿ

Team Udayavani, Sep 4, 2019, 2:58 PM IST

ಕಲಬುರಗಿ: ಎಪಿಎಂಸಿ ಅಧ್ಯಕ್ಷರಾಗಿ ಗುರುಬಸಪ್ಪ ಕಣಕಿ ಹಾಗೂ ಉಪಾಧ್ಯಕ್ಷರಾಗಿ ರಾಜಕುಮಾರ ಕೋಟೆ ಮಂಗಳವಾರ ಕಾರ್ಯಭಾರ ವಹಿಸಿಕೊಂಡರು. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು ಇದ್ದರು.

ಕಲಬುರಗಿ: ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿಯ ವ್ಯಾಪಾರ ವಹಿವಾಟು ಹೆಚ್ಚಳ ಹಾಗೂ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲು ಹೆಚ್ಚಿನ ಆದ್ಯತೆ ನೀಡುವುದಾಗಿ ಸಮಿತಿ ನೂತನ ಅಧ್ಯಕ್ಷ ಗುರುಬಸಪ್ಪ (ಅಪ್ಪು) ಕಣಕಿ ಹೇಳಿದರು.

ಮಂಗಳವಾರ ನೆಹರು ಗಂಜ್‌ನ ಎಪಿಎಂಸಿ ಆಡಳಿತ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯವಾಗಿ ಮಾರುಕಟ್ಟೆಯಲ್ಲಿ ರೈತರ ಶೋಷಣೆಯಾಗದಂತೆ ನಿಗಾವಹಿಸಲು ಹಾಗೂ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರಥಮ ಸಭೆಯಲ್ಲೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವರಣೆ ನೀಡಿದರು.

ಕಣ್ಣಿ ಮಾರುಕಟ್ಟೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಅದೇ ರೀತಿ ಮಹಾರಾಷ್ಟ್ರದ ಮಾರುಕಟ್ಟೆ ತೆರಿಗೆ ಹಾಗೂ ನಮ್ಮಲ್ಲಿನ ತೆರಿಗೆಗೆ ವ್ಯತ್ಯಾಸವಿದೆ. ಹೀಗಾಗಿ ತೆರಿಗೆ ಕಡಿತಗೊಳಿಸುವ ನಿಟ್ಟಿನಲ್ಲೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಥಮವಾಗಿ ಕಲಬುರಗಿ ಎಪಿಎಂಸಿಗೆ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುವ ಮುಖಾಂತರ ರೈತಪರ ಕಾಳಜಿ ನಿರೂಪಿಸಲಾಗಿದೆ. ಕಣ್ಣಿ ಮಾರುಕಟ್ಟೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ಈ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ನೂತನ ಆಡಳಿತ ಮಂಡಳಿ ಅವಧಿಯಲ್ಲಿ ಎಪಿಎಂಸಿ ಅಭಿವೃದ್ಧಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪಾಧ್ಯಕ್ಷರಾಗಿ ರಾಜಕುಮಾರ ಕೋಟೆ ಹಾಗೂ ಸದಸ್ಯರಾಗಿ ಶ್ರೀಮಂತರಾವ್‌ ಪಾಟೀಲ ಉದನೂರ, ಸುಬಾಷಚಂದ್ರ ತಾಜಸುಲ್ತಾನಪುರ, ಪ್ರಭುಲಿಂಗ ಪಟ್ಟಣ, ಚೆನ್ನಪ್ಪ ಸುರಪುರಕರ್‌, ಕೇದಾರನಾಥ ತಡಕಲ್, ಲಕ್ಷ್ಮೀ ಜಗನ್ನಾಥ, ದೇವೇಂದ್ರಕುಮಾರ ಸೂಗುರು, ಶಾಂತಕುಮಾರ ನಂದೂರ, ಮಲ್ಲಮ್ಮ ಸೊಂತ, ಶಿವಪ್ಪ ಕುಮ್ಮಣ್ಣ, ಮಹಮ್ಮದ ಕಮಲಾಪುರ, ಷಣ್ಮುಖಪ್ಪನ ತಿಬಲಬಂಡಿ ಕಾರ್ಯಭಾರ ವಹಿಸಿಕೊಂಡರು. ಬಿಜೆಪಿ ನಗರಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಮಾಜಿ ಶಾಸಕ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಕಮಲಾಪುರ, ಮುಖಂಡರಾದ ಶರಣಬಸಪ್ಪ ಪಾಟೀಲ ಅಷ್ಠಗಿ, ಸಂಗಮೇಶ ನಾಗನಹಳ್ಳಿ, ಅಂಬಾರಾಯ ಅಷ್ಠಗಿ, ಕಲಬುರಗಿ ದಕ್ಷಿಣ ಬಿಜೆಪಿ ಮಂಡಲ ಅಧ್ಯಕ್ಷ ಸಂಗಮೇಶ ರಾಜೋಳೆ, ಪಾಲಿಕೆ ಸದಸ್ಯರಾದ ವೀರಣ್ಣ ಹೊನ್ನಳ್ಳಿ, ಶಿವಾನಂದ ಪಾಟೀಲ ಅಷ್ಠಗಿ, ಆರ್‌.ಎಸ್‌. ಪಾಟೀಲ, ಶಿವು ಸ್ವಾಮಿ, ಪರಶುರಾಮ ನಸಲವಾಯಿ, ವಿಶಾಲ ದರ್ಗಿ, ಸೂರಜ್‌ ತಿವಾರಿ, ದಸ್ತಯ್ಯ ಗುತ್ತೇದಾರ, ಹಣಮಂತ ಪಾಟೀಲ, ಶ್ರೀನಿವಾಸ ದೇಸಾಯಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅನೀಲ ಹಾದಿಮನಿ ಮುಂತಾದವರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ