ಶರಣರ ವಿರುದ್ಧ ನಡೆಯುತ್ತಿದೆ ಕುತಂತ್ರ

•ಕಾಯಕ ಶರಣರ ಸಂಶೋಧನೆ ಅಗತ್ಯ•ಶರಣರ ಹತ್ಯೆ ಬ್ರಿಟಿಷರ ಗೆಜೆಟಿಯರ್‌ನಲ್ಲೂ ದಾಖಲು

Team Udayavani, Sep 11, 2019, 3:01 PM IST

ಕಲಬುರಗಿ: ನಗರದ ಅನುಭವ ಮಂಟಪದಲ್ಲಿ ಮಂಗಳವಾರ ಡಾ| ವೀರಣ್ಣ ದಂಡೆ ಮತ್ತು ಡಾ| ಜಯಶ್ರೀ ದಂಡೆ ಅವರಿಗೆ ಡಾ| ಬಿ.ಡಿ. ಜತ್ತಿ ಸಂಶೋಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರಗಿ: ಬಸವಣ್ಣ ಮತ್ತು ಬಸವಾದಿ ಶರಣ ವಿರುದ್ಧ 800 ವರ್ಷಗಳಿಂದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ಕಾಯಕದ ಎರಡನೇ ಸ್ಥಳವಾದ ಮೈಸೂರು ಪ್ರಾಂತ್ಯದಲ್ಲಿ ಜಲಿಯನ್‌ ವಾಲಾಬಾಗ್‌ ಮಾದರಿಯಲ್ಲೇ ಶರಣರ ಹತ್ಯೆ ನಡೆದಿದೆ ಎಂದು ಬೆಂಗಳೂರಿನ ಬೇಲಿಮಠ ಮಹಾ ಸಂಸ್ಥಾನದ ಡಾ| ಶಿವರುದ್ರ ಸ್ವಾಮೀಜಿ ನುಡಿದರು.

ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ ಸಂಸ್ಥಾಪಕ ಡಾ| ಬಸಪ್ಪ ದಾನಪ್ಪ ಜತ್ತಿ (ಬಿ.ಡಿ. ಜತ್ತಿ) ಅವರ 107ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾಯಕ ಶರಣರ ಬಗ್ಗೆ ಸಂಶೋಧನೆ ಅಗತ್ಯ ಇದೆ. ಕಲ್ಯಾಣದಿಂದ ಹರಳಯ್ಯ ಸೇರಿದಂತೆ ಹಲವು ಶರಣರು ಅನೇಕ ಕಡೆಗಳಿಗೆ ಹೋದರು. ಇಂತಹ ಸಂದರ್ಭದಲ್ಲಿ ಮೈಸೂರು ಪ್ರಾಂತ್ಯ ಎರಡನೇ ಕಲ್ಯಾಣವಾಗಿ ಬೆಳೆಯುತ್ತಿದೆ. ಆದರೆ, ಅಲ್ಲೂ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಕೆಂಪಾಯಿತು. ಇದನ್ನು ಹಾಳು ಮಾಡುವ ಸಮಯಕ್ಕಾಗಿ ಕಾಯುತ್ತಿದ್ದರು ಎಂದರು.

ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಬರಗಾಲ ಬರುತ್ತದೆ. ಒಡೆಯರಲ್ಲಿ ಜನತೆ ಕಂದಾಯ ವಿನಾಯಿತಿ ಕೇಳುತ್ತಾರೆ. ಇದೇ ಸಮಯ ಸಾಧಿಸಿದ ಪಟ್ಟಭದ್ರ ಹಿತಾಸಕ್ತಿಗಳು ಜನರಿಗೆ ದಂಗೆ ಏಳುವಂತೆ ಶರಣರು ಮಾಡುತ್ತಿದ್ದಾರೆ ಎಂದು ಒಡೆಯರಿಗೆ ಚಾಡಿ ಹೇಳುತ್ತಾರೆ. ನಂತರ ಸಂಧಾನಕ್ಕೆಂದು ಸುಮಾರು 700 ಜನ ಶರಣರನ್ನು ಶ್ರೀರಂಗಪಟ್ಟಣದಿಂದ ನಂಜನಗೂಡಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಧರ್ಮಗ್ರಂಥಗಳನ್ನು ತೆಗೆದುಕೊಂಡು 486 ಶರಣರನ್ನು ಹತ್ಯೆ ಮಾಡುತ್ತಾರೆ. ಉಳಿದವರು ಪಾರಾಗುತ್ತಾರೆ. ಶರಣರು ಹತ್ಯೆಯಾದ ಪ್ರದೇಶವನ್ನು ಶಿರೋಬಾವಿ ಪ್ರದೇಶ ಎಂದು ಕರೆಯುತ್ತಾರೆ. ಶರಣರ ಹತ್ಯೆಗೆ ಕಾರಣವಾದ ವಿಶಾಲಾಕ್ಷ ಪಂಡಿತರನ್ನು ಜನರು ಗುರುತಿಸಿ ದಾಳಿ ಮಾಡುತ್ತಾರೆ. ಆಗ ಇತರರು ಅವರು ಜೈನ ಪಂಡಿತರೆಂದು ರಕ್ಷಿಸುತ್ತಾರೆ. ಶರಣರ ಹತ್ಯೆ ಕುರಿತು ಬ್ರಿಟಿಷರ ಗೆಜೆಟಿಯರ್‌ನಲ್ಲೂ ದಾಖಲಾಗಿದೆ ಎಂದರು.

ಪಂಡಿತರ ಮಾತು ನಂಬಿ ಶರಣರು ಬಂದಿದ್ದರು. ಹೀಗಾಗಿ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವ ಜಿಜ್ಞಾಸೆ ಇನ್ನೂ ಕಾಡುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಇತಿಹಾಸ ಓದಬೇಕು. ಇತಿಹಾಸ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ವೀರಣ್ಣ ದಂಡೆ ಮಾತನಾಡಿ, ಬಸವಾದಿ ಶರಣ ಸ್ಮಾರಕಗಳು ಹಣ್ಣು-ಕಾಯಿ ಇಟ್ಟು ಪೂಜೆ ಮಾಡುವುದಕ್ಕಷೇr ಸೀಮಿತವಾಗಬಾರದು. ಅವು ವೈಚಾರಿಕ ಚಿಂತನೆಯನ್ನು ಜಗತ್ತಿಗೆ ತೋರಿಸಿದ ಸಾಕ್ಷಿಪ್ರಜ್ಞೆಯಾಗಿ ಬೆಳಗಬೇಕಾದವು. ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ಹಳ್ಳಿಗಳಲ್ಲೂ ಶರಣರ ಹೆಜ್ಜೆಗುರುತುಗಳು ಇವೆ. ಒಂದೊಂದು ಊರೂ ಒಂದೊಂದು ಇತಿಹಾಸವನ್ನು ಒಡಲಲ್ಲಿ ಹುದುಗಿಸಿಕೊಂಡಿದೆ. ಅವುಗಳನ್ನು ಹೆಕ್ಕಿ ತೆಗೆಯುವ ತಾಳ್ಮೆ ಹಾಗೂ ಜಾಣ್ಮೆ ಬಹಳ ಮುಖ್ಯಎಂದರು.

ಡಾ| ವೀರಣ್ಣ ದಂಡೆ, ಡಾ| ಜಯಶ್ರೀ ದಂಡೆ ಅವರಿಗೆ ಡಾ| ಬಿ.ಡಿ. ಜತ್ತಿ ಸಂಶೋಧನಾ ಪ್ರಶಸ್ತಿ ಹಾಗೂ ಶಿವಮೊಗ್ಗದ ಜಯದೇವಪ್ಪ ಜೈನಕೇರಿ ಅವರಿಗೆ ಬಸವಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

’12ನೇ ಶತಮಾನದ ಶರಣ ಸ್ಮಾರಕಗಳು’ ಕುರಿತ ಮೂರು ಸಂಪುಟಗಳ ಲೋಕಾರ್ಪಣೆಯನ್ನು ಸಂಸದ ಡಾ| ಉಮೇಶ ಜಾಧವ ಮಾಡಿದರು. ಬಸವ ಸಮಿತಿ ಜಾಲತಾಣವನ್ನು ಮಾಜಿ ಸಚಿವ ಬಸವರಾಜ ಪಾಟೀಲ ಸೇಡಂ ಲೋಕಾರ್ಪಣೆ ಮಾಡಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠದ ಸಂಚಾಲಕ ಡಾ| ಸಿ.ಎಂ. ಕುಂದಗೋಳ ವಿಶೇಷ ಉಪನ್ಯಾಸ ನೀಡಿದರು.

ತಮಿಳುನಾಡಿನ ತೆಂಕನಕೋಟೆಯ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾಗೂ ಜಿಲ್ಲಾ ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ, ಎಚ್.ಕೆ. ಉದ್ದಂಡಯ್ಯ, ಎಸ್‌.ಐ. ಭಾವಿಕಟ್ಟಿ ಹಾಗೂ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ