ಸಾಹಿತ್ಯಕ್ಕೆ ಕಲ್ಯಾಣ ಕೊಡುಗೆ ಅಪಾರ

ತಂದೆ-ತಾಯಿ, ಸಮಾಜ ಖುಷಿ ಪಡುವಂತಾಗಲಿಬಸವರಾಜಪ್ಪ ಜೀವನ ಆದರ್ಶಮಯ

Team Udayavani, Sep 23, 2019, 11:03 AM IST

ಕಲಬುರಗಿ: ಹುಟ್ಟಿದಾಗ ತಾಯಿ ಖುಷಿಪಟ್ಟರೆ, ಉತ್ತಮ ವ್ಯಕ್ತಿತ್ವದೊಂದಿಗೆ ಬೆಳೆದು ಮುನ್ನಡೆದಾಗ ತಂದೆ ಖುಷಿಪಟ್ಟರೆ, ನಾವು ಮಾಡುವ ಕಾರ್ಯ ನೋಡಿ ಸಮಾಜ ಖುಷಿ ಪಟ್ಟರೆ, ಸತ್ತ ನಂತರ ಸ್ಮಶಾನ ಭೂಮಿ ದುಃಖೀಸಿದರೆ ಅದುವೇ ಆದರ್ಶ ಬದುಕು ಎಂದು ಮುಗುಳನಾಗಾಂವ ಕಟ್ಟಿಮನಿ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನುಡಿದರು.

ಕರ್ನಾಟಕ ಅರ್ಥೋಪೆಡಿಕ್ಸ್‌ ಅಸೋಷಿಯೆಷನ್‌ ಅಧ್ಯಕ್ಷರು ಹಾಗೂ ಅರ್ಥೋಪೆಡಿಕ್‌ ತಜ್ಞರಾದ ಡಾ| ಎಸ್‌.ಬಿ. ಕಾಮರಡ್ಡಿ ಅವರ ತಂದೆಯವರಾದ ಬಸವರಾಜಪ್ಪ ಕಾಮರಡ್ಡಿ ಅವರ ನನ್ನ ನಿಲುವು ಭಾಗ-1 ಮತ್ತು ಭಾಗ-2ರ ಪುಸ್ತಕಗಳ ಬಿಡುಗಡೆ, ನನ್ನ ನಿಲುವು ವಚನಗಳ ಧ್ವನಿಮುದ್ರಿಕೆ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಆಧುನಿಕ ಜೀವನದಲ್ಲಿ ಒತ್ತಡಕ್ಕೆ ಒಳಗಾಗಿ ನಾವು ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಆದರೆ ಶಿಕ್ಷಕರಾಗಿ ಸತ್ಪ್ರಜೆಗಳನ್ನು ನಿರ್ಮಿಸಿ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಆಸರೆಯಾಗಿ ತಮ್ಮದೇ ಕೊಡುಗೆ ನೀಡಿರುವ ಬಸವರಾಜಪ್ಪ ಕಾಮರಡ್ಡಿ ಅವರ ಜೀವನ ಆದರ್ಶಮಯ ಆಗಿದೆ ಎಂದರು.

ಸಾಹಿತ್ಯ ಹಾಗೂ ವಚನ ಸಾಹಿತ್ಯ ಕ್ಷೇತ್ರಕ್ಕೆ ‘ಕಲ್ಯಾಣ ಕರ್ನಾಟಕ’ ಕೊಡುಗೆ ಅಪಾರವಾಗಿದೆ. ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗ ಈ ಭಾಗದಿಂದಲೇ ರಚನೆಯಾಗಿರುವುದು ಹಾಗೂ 12ನೇ ಶತಮಾನದ ಬಸವಾದಿ ಶರಣರ ವಚನಗಳೇ ಇದಕ್ಕೆ ಸಾಕ್ಷಿ. ಅದೇ ರೀತಿ ಅನುಭಾವಿಗಳು ಅದರಲ್ಲೂ 92 ಇಳಿ ವಯಸ್ಸಿನಲ್ಲಿ ತಮ್ಮ ಅನುಭಾವವನ್ನು ವಚನಗಳ ಮೂಲಕ ‘ನನ್ನ ನಿಲುವು ಪುಸ್ತಕ’ ನೀಡಿದ್ದರಿಂದ ಬಸವರಾಜಪ್ಪ ಅವರ ಕಾಣಿಕೆಯೂ ಇದರಲ್ಲಿ ಸೇರಿದೆ ಎಂದು ಹೇಳಿದರು.

ಹೆಡಗಿಮದ್ರಿ ಶಾಂತವೀರ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳು ಜೀವನ ಪರಿಪೂರ್ಣ ಮಾಡುವ ಕ್ಷೇತ್ರಗಳಾಗಿವೆ ಎಂದರು.

ಸಂಸದ ಡಾ| ಉಮೇಶ ಜಾಧವ ಮಾತನಾಡಿದರು. ಮಾಜಿ ಸಚಿವ ಡಾ| ಎ.ಬಿ. ಮಾಲಕರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಎಂ.ವೈ. ಪಾಟೀಲ, ಸುಭಾಷ ಆರ್‌. ಗುತ್ತೇದಾರ, ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಶೀಲ್‌ ನಮೋಶಿ, ಅಲ್ಲಮಪ್ರಭು ಪಾಟೀಲ ನೆಲೋಗಿ, ನಾಗರೆಡ್ಡಿ ಪಾಟೀಲ, ಎಚ್‌ಕೆಇ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಮುಖಂಡರಾದ ಭಾಗಣ್ಣಗೌಡ ಸಂಕನೂರ ಮುಂತಾದವರಿದ್ದರು.

ವೀರಮ್ಮ ಗಂಗಸಿರಿ ಮಹಿಳಾ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ| ಈಶ್ವರಯ್ಯ ಮಠ ಪುಸ್ತಕಗಳ ಕುರಿತು ಮಾತನಾಡಿದರು. ಡಾ| ಎಸ್‌.ಬಿ. ಕಾಮರಡ್ಡಿ ಸ್ವಾಗತಿಸಿದರು. ಇದೇ ವೇಳೆ ಬಸವರಾಜ ಇಷ್ಟಲಿಂಗಪ್ಪ ಬರೆದ ಪುಸ್ತಕ ಬಿಡುಗಡೆ ಮಾಡಲಾಯಿತು.

ಪ್ರೊ| ಶಶಿಶೇಖರರೆಡ್ಡಿ ನಿರೂಪಿಸಿದರು. ಬೀದರ್‌ನ ಶಿವಕುಮಾರ ಪಂಚಾರ ನಿರೂಪಿಸಿದ ವಚನ ಗಾಯನ ಹಾಗೂ ವಿನ್ಯಾಸ ಧರ್ಮಗಿರಿ ನೇತೃತ್ವದಲ್ಲಿ ನಡೆದ ನೃತ್ಯ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ