ಸೋಲಿಗೆ ಎದೆಗುಂದದಿರಿ: ಚನ್ನಣ್ಣವರ

ದೃಢ ಸಂಕಲ್ಪ-ಮನೋಸ್ಥೈರ್ಯ ಇರಲಿ ಸಾಧನೆಗೆ ಸಮಯ ಬಳಸಿ

Team Udayavani, Oct 23, 2019, 11:23 AM IST

ಕಲಬುರಗಿ: ಜೀವನದಲ್ಲಿ ಕೆಲವು ಸನ್ನಿವೇಶಗಳಿಂದ ಸೋಲು ಉಂಟಾದರೂ ಎದೆಗುಂದಬಾರದು. ಸೋಲನ್ನೇ ಸವಾಲಾಗಿ ಸ್ವೀಕರಿಸಿ, ಕಂಡ ಕನಸು ನನಸಾಗಿಸುವ ನಿಟ್ಟಿನಲ್ಲಿ ಹೋರಾಡಬೇಕೆಂದು ಬೆಂಗಳೂರು ಗ್ರಾಮಾಂತರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ್‌ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕದಂಬ ಕೋಚಿಂಗ್‌ ಸೆಂಟರ್‌ ವತಿಯಿಂದ ಮಂಗಳವಾರ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಶಸ್ಸು ಸಾಧಿ ಸುವುದು ಸುಲಭವಲ್ಲ. ಸಿಕ್ಕ ಸಮಯ ಹಾಳು ಮಾಡಿಕೊಳ್ಳದೇ ಸಾಧನೆಗೆ ಬಳಸಿಕೊಳ್ಳಬೇಕು. ಸತತ ಅಧ್ಯಯನ, ಶ್ರದ್ಧೆ, ಛಲದ ಮನೋಭಾವ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಸಮಯ ಪಾಲನೆ, ದೃಢ ಸಂಕಲ್ಪ, ಮನೋಸ್ಥೈರ್ಯ ಹೊಂದಿದರೆ ಯಶಸ್ಸು ಸುಲಭವಾಗುತ್ತದೆ. ಇಂದಿನ ಸ್ಪರ್ಧಾತ್ಮಕತೆ ದಿನದಲ್ಲಿ ಕೇವಲ ಓದಿಕೊಂಡರೆ ಸಾಲದು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸಾರ್ಥಕ ಜೀವನಕ್ಕೆ ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ಓದುವ ವಿಧಾನ ಬದಲಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎನ್ನುತ್ತೇವೆ. ಆದರೆ, ಈ ಭಾಗ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಇತಿಹಾಸ ಹೊಂದಿದೆ. ಅದರಂತೆ ಇಲ್ಲಿಯ ಸಾಕಷ್ಟು ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದಾರೆ. ಆದರೆ, ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶ ದೊರೆಯದೇ ಬಳಲುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳು ಮತ್ತು ಸಾಧಕರನ್ನು ಸ್ಫೂರ್ತಿಯಾಗಿ ಇಟ್ಟುಕೊಳ್ಳಬೇಕು. ಕಠಿಣ ಪರಿಶ್ರಮ ವಹಿಸಿ ಅಧ್ಯಯನ ಮಾಡಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ಸತೀಶ ಮಾತನಾಡಿ, ಯಾವುದೇ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಬೆಲೆ ಸಿಗುತ್ತದೆ. ಅಧ್ಯಯನ ಸಮಯವನ್ನು ವಿದ್ಯಾರ್ಥಿಗಳು ವ್ಯರ್ಥ ಮಾಡದೆ ಸತತವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ಕರೆ ಕೊಟ್ಟರು. ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ| ನಂದಗಿ ರಾಚಪ್ಪ ಮಾತನಾಡಿ, ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಮಾತ್ರ ವಿದ್ಯೆ ತಲೆಗೆ ಹತ್ತಲು ಸಾಧ್ಯ. ಇಂದಿನ ವಿದ್ಯಾರ್ಥಿಗಳನ್ನು ಮೊಬೈಲ್‌ಗ‌ಳು ಹಾಳು ಮಾಡುತ್ತಿವೆ. ಮೊಬೈಲ್‌ ಬದಿಗಿಟ್ಟು ಓದಿನ ಕಡೆ ಲಕ್ಷ್ಯ ಕೊಡುವುದನ್ನು ಕಲಿಯಬೇಕೆಂದು ಹೇಳಿದರು.

ಕದಂಬ ಕೋಚಿಂಗ್‌ ಸೆಂಟರ್‌ನ ನಿರ್ದೇಶಕಿ ಸಾವಿತ್ರಿ ಗುಂಗಣ್ಣನವರ್‌, ಸಹ ಸಂಸ್ಥಾಪಕ ಸುರೇಶ ಗುಂಗಣ್ಣನವರ್‌, ಕರುಣೇಶ್‌ ಹಿರೇಮಠ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ