ಕಲ್ಯಾಣದಲ್ಲಿ ಅಕ್ಷರ ಕ್ರಾಂತಿ ನಿರೀಕ್ಷೆ

•ಏಕೀಕರಣಕ್ಕೂ ಮುನ್ನ ಶೇ.8.49 ಸಾಕ್ಷರತಾ ಪ್ರಮಾಣ•2011ರಲ್ಲಿ ಶೇ.64.44 ಸಾಕ್ಷರತೆ

Team Udayavani, Sep 19, 2019, 11:07 AM IST

ರಂಗಪ್ಪ ಗಧಾರ
ಕಲಬುರಗಿ:
‘ಕಲ್ಯಾಣ ಕರ್ನಾಟಕ’ ಪ್ರದೇಶದಲ್ಲಿ ಕಳೆದ ಆರು ದಶಕಗಳಲ್ಲಿ ಸಾಕ್ಷರತಾ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದೆ. 1956ರ ಕರ್ನಾಟಕ ಏಕೀಕರಣಕ್ಕೂ ಮುನ್ನ ಕಲ್ಯಾಣ ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣ ಕೇವಲ ಶೇ.8.49 ಮಾತ್ರವೇ ಇತ್ತು. 2011ರ ಹೊತ್ತಿಗೆ ಶೇ.64.44ರಷ್ಟು ಸಾಕ್ಷರತಾ ಪ್ರಮಾಣ ಹೆಚ್ಚಳಗೊಂಡಿದ್ದು, 2011ರ ನಂತರದ ಈ ಎಂಟು ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಿರುವ ಆಶಾಭಾವನೆ ಇದೆ.

ಕರ್ನಾಟಕ ಏಕೀಕರಣದ ಮೊದಲೇ ಆಗಿನ ಮೈಸೂರು ಪ್ರಾಂತ್ಯದಲ್ಲಿ ಶೇ.20.6ರಷ್ಟು ಸಾಕ್ಷರತೆ ಇತ್ತು. ಹೈದ್ರಾಬಾದ್‌ ಪ್ರಾಂತ್ಯದ ಬೀದರ ಶೇ.7.43, ಕಲಬುರಗಿ ಶೇ.8.20 ಹಾಗೂ ರಾಯಚೂರು ಶೇ. 9.07ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದ್ದವು. ಒಟ್ಟಾರೆ ಹೈದ್ರಾಬಾದ್‌ ಪ್ರಾಂತ್ಯದಲ್ಲಿ ಸಾಕ್ಷರತಾ ಪ್ರಮಾಣ ಶೇ.8.49ರಷ್ಟಿತ್ತು ಎಂದು 1954ರಲ್ಲಿ ಶೇಷಾದ್ರಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ಹೇಳುತ್ತದೆ. ಆಗಿನ್ನು ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಉದಯವಾಗಿರಲಿಲ್ಲ. ಬಳ್ಳಾರಿ ಜಿಲ್ಲೆ ಮದ್ರಾಸ್‌ ಪ್ರಾಂತ್ಯದಿಂದ ಆದಾಗಲೇ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿತ್ತು. ಹೈದ್ರಾಬಾದ್‌ ಪ್ರಾಂತ್ಯದಲ್ಲಿ ಮೈಸೂರು ಪ್ರಾಂತ್ಯದ ಸರಿ ಸಮಾನವಾದ ಸಾಕ್ಷರತೆ ಬೆಳೆಯಬೇಕಾದರೆ ಇಲ್ಲಿನ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಬೇಕು ಎಂಬ ಅಂಶವನ್ನು ಅಂದೇ ವರದಿ ಉಲ್ಲೇಖೀಸಿತ್ತು ಎನ್ನುತ್ತಾರೆ ತಜ್ಞರು.

1971ರ ಜನಗಣತಿ ವೇಳೆಗೆ ಕಲಬುರಗಿ ವಿಭಾಗ ಅರ್ಥಾತ್‌ ಹೈದ್ರಾಬಾದ್‌-ಕರ್ನಾಟಕದ ಸಾಕ್ಷರತೆ ಪ್ರಮಾಣ ಶೇ.21.13ಕ್ಕೆ ಹೆಚ್ಚಾಗಿತ್ತು. ಅಲ್ಲಿಂದ ದಶಕದಿಂದ ದಶಕಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಬಂದಿದೆ. 1981ಕ್ಕೆ ಶೇ.26.45ರಷ್ಟು, 1991ಕ್ಕೆ ಶೇ.40.49ರಷ್ಟು, 2001ಕ್ಕೆ ಶೇ.54.24ರಷ್ಟು ಹಾಗೂ 2011ರ ಜನಗಣತಿ ಪ್ರಕಾರ ಈ ಭಾಗದ ಶೇ.64.44ರಷ್ಟು ಸಾಕ್ಷರತಾ ಪ್ರಮಾಣ ಇದೆ. ಆದರೆ, ಇದು ರಾಜ್ಯದ ಇತರ ವಿಭಾಗಗಳಿಗಿಂತ ಕಡಿಮೆಯೇ ಆಗಿದೆ.

2011ರ ಜನಗಣತಿ ಪ್ರಕಾರವೇ ರಾಜ್ಯದ ಒಟ್ಟು ಸಾಕ್ಷರತಾ ಪ್ರಮಾಣ ಶೇ.75.36ರಷ್ಟು ಇದೆ. ಅಂದರೆ, ರಾಜ್ಯದ ಒಟ್ಟು ಸಾಕ್ಷರತೆಗಿಂತ ಕಲಬುರಗಿ ವಿಭಾಗದಲ್ಲಿ ಶೇ.9ರಷ್ಟು ಕಡಿಮೆ. ಇತರ ವಿಭಾಗಗಳಿಗೆ ಹೋಲಿಸಿದರೆ ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗಗಳಿಗಿಂತ ಕ್ರಮವಾಗಿ ಶೇ.16, ಶೇ.12, ಶೇ.10ರಷ್ಟು ಕಡಿಮೆ ಇದೆ.

ಗ್ರಾಮೀಣ ಭಾಗದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಸಾಕ್ಷರತಾ ಪ್ರಮಾಣ ಇದೆ. ರಾಯಚೂರು ಜಿಲ್ಲೆಯ ನಿಂಬಾಳದೊಡ್ಡಿ ಮತ್ತು ಯಾದಗಿರಿ ಜಿಲ್ಲೆಯ ಮಾವಿನಮಟ್ಟಿ ಗ್ರಾಮಗಳಲ್ಲಿ ಶೇ.5ರಷ್ಟು ಸಾಕ್ಷರತಾ ಪ್ರಮಾಣ ಇದೆ. ಮಾತೃಭಾಷೆಯಲ್ಲಿ ಓದಲು ಮತ್ತು ಬರೆಯಲು ಬಂದವರನ್ನು ಸಾಕ್ಷರರು ಎಂಬ ಸರಳ ವ್ಯಾಖ್ಯಾನ ಇದೆ. ಆದರೆ, ಸಾಕ್ಷರತಾ ಮತ್ತು ಶೈಕ್ಷಣಿಕ ದರ ಬೇರೆ-ಬೇರೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಭಾಷಾ ‘ಗಡಿ’ ಅಡ್ಡಿ: ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳು ಗಡಿ ಭಾಗಗಳಾಗಿವೆ. ಬೀದರ, ಕಲಬುರಗಿ ಜಿಲ್ಲೆಗಳು ತೆಲಂಗಾಣ-ಮಹಾರಾಷ್ಟ್ರ, ರಾಯಚೂರು ಜಿಲ್ಲೆ ಆಂಧ್ರಪ್ರದೇಶ-ತೆಲಂಗಾಣ, ಬಳ್ಳಾರಿ ಜಿಲ್ಲೆ ಆಂಧ್ರಪ್ರದೇಶ ಹಾಗೂ ಯಾದಗಿರಿ ಜಿಲ್ಲೆ ತೆಲಂಗಾಣ ಗಡಿಗೆ ಹೊಂದಿಕೊಂಡಿವೆ. ಕೊಪ್ಪಳಕ್ಕೆ ಯಾವುದೇ ‘ಗಡಿ’ ಇಲ್ಲದೇ ಇದ್ದರೂ ತೆಲುಗು ಪ್ರಭಾವ ಇದ್ದೇ ಇದೆ.

ಕಲಬುರಗಿ, ಬೀದರ ಜಿಲ್ಲೆಗಳಲ್ಲಿ ಉರ್ದು, ಮರಾಠಿ ಮತ್ತು ತೆಲುಗು ಪ್ರಭಾವ ಇದ್ದರೆ, ರಾಯಚೂರು, ಯಾದಗಿರಿ ಹಾಗೂ ಬಳ್ಳಾರಿಯಲ್ಲಿ ತೆಲುಗು ಪ್ರಭಾವ ಇದೆ. ಪರಿಣಾಮ ಎಂಬಂತೆ ಶೇ.69ರಷ್ಟು ಜನರು ಮಾತ್ರ ತಮ್ಮದು ಕನ್ನಡ ಮಾತೃಭಾಷೆ ಎನ್ನುವರಿದ್ದಾರೆ ಎಂದು ಹೇಳಲಾಗುತ್ತಿದೆ.

1ರಿಂದ 7ನೇ ತರಗತಿಯವರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಶೇ.100ಕ್ಕಿಂತ ಹೆಚ್ಚಿರುತ್ತದೆ. ಇದಕ್ಕೆ ಸರ್ವಶಿಕ್ಷಣ ಅಭಿಯಾನ, ಬಿಸಿಯೂಟ, ಉಚಿತ ಪಠ್ಯ, ಸಮವಸ್ತ್ರ, ಸೈಕಲ್ ವಿತರಣೆ ಕಾರಣ. ಆದರೆ, ತದನಂತರ 8ನೇ ತರಗತಿಯಿಂದ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತ ಹೋಗುತ್ತದೆ. ಶಾಲೆಯಿಂದ ಹೊರಗುಳಿದವರ ಸಂಖ್ಯೆ ಅಧಿಕವಾಗುತ್ತಿದೆ. ಏಕೆಂದರೆ ಅಲ್ಲಿಂದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮತ್ತು ಬಾಲ ಕಾರ್ಮಿಕ ತಡೆ ಕಾಯ್ದೆಗಳು ಕೂಡ ಅನ್ವಯವಾಗುವುದಿಲ್ಲ. ಅಲ್ಲದೇ, ಪ್ರಾಥಮಿಕ ಮಟ್ಟದಲ್ಲಿ ಅವರನ್ನು ಯಾವುದೇ ಅಡೆತಡೆ ಇಲ್ಲದೇ ಉತ್ತೀರ್ಣಗೊಳಿಸುವುದು. ಒಂದು ವೇಳೆ ಪ್ರೌಢ ಶಿಕ್ಷಣಕ್ಕೆ ಬಂದರೂ ಕನ್ನಡ ಭಾಷೆ ಮೇಲೆ ಹಿಡಿತ ಸಾಧಿಸದ ಪರಿಣಾಮ ಅವರಿಗೆ ತಳಮಟ್ಟದಿಂದ ಶಿಕ್ಷಣ ಕೊಡಬೇಕಾಗುತ್ತದೆ. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.75ರಿಂದ 80ರಷ್ಟು ಅಂಕ ಪಡೆದರೂ ಪಿಯುಸಿಯಲ್ಲಿ ಶೇ.55ಕ್ಕೆ ಕುಸಿಯುತ್ತದೆ. ಇದರ ಮಧ್ಯೆ ಕೂಡ ಉನ್ನತ ಹಂತಕ್ಕೆ ಬಂದರೂ ನಾನಾ ಕಾರಣಗಳಿಂದ ಶಿಕ್ಷಣದಿಂದಲೇ ದೂರವಾಗುತ್ತಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ