ಮೋದಿ-ಸಂಘದಿಂದ ಖರ್ಗೆ ಸೋಲಿಸಲು ಷಡ್ಯಂತ್ರ: ಸಿದ್ದು

ಯಾವುದೇ ಜವಾಬ್ದಾರಿಯನ್ನು ಖರ್ಗೆ ನಿಭಾಯಿಸಬಲ್ಲರು

Team Udayavani, Apr 18, 2019, 10:38 AM IST

ಕಲಬುರಗಿ: ಕೇಂದ್ರೀಯ ಬಸ್‌ ನಿಲ್ದಾಣ ಸಮೀಪ ಕಣ್ಣಿ ಮಾರ್ಕೆಟ್‌ ಆವರಣದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮುಂತಾದವರಿದ್ದರು.

ಕಲಬುರಗಿ: ಒಂಭತ್ತು ಸಲ ಶಾಸಕರಾಗಿ, ರಾಜ್ಯ ಹಾಗೂ ಕೇಂದ್ರದ
ಮಂತ್ರಿಯಾಗಿ, ವಿಪಕ್ಷ ನಾಯಕನಾಗಿ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಸೇರಿದಂತೆ ನೀಡಲಾದ ಎಲ್ಲ ಸ್ಥಾನಗಳನ್ನು ಸಮರ್ಥವಾಗಿ ನಿಭಾಯಿಸಿರುವ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಎಂಎಸ್‌ಕೆ ಮಿಲ್‌ ಪ್ರದೇಶದ ಕಣ್ಣಿ ಮಾರ್ಕೆಟ್‌
ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಖರ್ಗೆ ಅವರು ಮೋದಿ ಆಡಳಿತ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ದೇಶದ ಜನತೆ
ಮುಂದಿಟ್ಟಿದ್ದರಿಂದ ಹಾಗೂ ಉತ್ತರ ನೀಡದ ಹಾಗೆ ವಾಗ್ಧಾಳಿ ನಡೆಸಿದ್ದರಿಂದ ಮೋದಿ ಹಲವು ಸಲ ಘಡ್‌-ಘಡ್‌ ಎಂದು ನಡುಗಿದ್ದಾರೆ. ಇದೇ ಕಾರಣಕ್ಕೆ ಖರ್ಗೆ ಅವರನ್ನು ಸೋಲಿಸಲು ಮೋದಿ ಹಾಗೂ ಬಿಜೆಪಿ, ಸಂಘದವರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಖರ್ಗೆ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ
ನಿಭಾಯಿಸುವ ನಾಯಕರಾಗಿದ್ದಾರೆ. ಕೆಲಸ ಮಾಡಿದ ಸ್ಥಾನಗಳಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟಿರುವ ಅವರು ಗೆಲ್ಲಲೇಬೇಕಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಅವರನ್ನು ಗೆಲ್ಲಿಸಿ, ಬರೀ
ಮರಳು ಮಾತನಾಡುವ ಬಿಜೆಪಿಗೆ ಸೋಲಿಸಿ ಎಂದು ಕರೆ ನೀಡಿದರು. ರಾಜ್ಯದ 27 ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ ಒಂದೂ ಸ್ಥಾನಕ್ಕೂ ಹಿಂದುಳಿದ ವರ್ಗದವರಿಗೆ ಟಿಕೆಟ್‌
ನೀಡಿಲ್ಲ. ಹೀಗಾಗಿ ಯಾವುದೇ ಒಂದು ಹಿಂದುಳಿದ ವರ್ಗಗಳ ಮತಗಳು ಬಿಜೆಪಿಗೆ ಬೀಳಬಾರದು. ಈ ಮೂಲಕ
ತಕ್ಕ ಉತ್ತರ ನೀಡಿ ಎಂದು ಮನವಿ ಮಾಡಿದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಭಿವೃದ್ಧಿ ಮಾಡಿ ತಮ್ಮ ಮುಂದೆ ಬಂದು ಮತ ಕೇಳುತ್ತಿದ್ದೇನೆ. ಆದರೆ ಬಿಜೆಪಿಯವರು ಖಾಲಿ ಕೈಯಿಂದ ಬಂದು ಮತ ಕೇಳುತ್ತಿದ್ದಾರೆ. ಹೀಗಾಗಿ ಅವಲೋಕಿಸಿ ಮತ ಚಲಾಯಿಸಿ
ಎಂದು ಕೋರಿದರು. ಮುಖಂಡ ಸಿ.ಎಂ. ಇಬ್ರಾಹಿಂ, ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಅಜಯಸಿಂಗ್‌, ಶಾಸಕಿ ಖನೀಜಾ ಫಾತೀಮಾ, ಮಾಜಿ ಸಚಿವ ಕೆ.ಬಿ.ಶಾಣಪ್ಪ, ಮಾಜಿ ಶಾಸಕ
ಅಲ್ಲಮಪ್ರಭು ಪಾಟೀಲ ನೆಲೋಗಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ
ಗುತ್ತೇದಾರ, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್‌, ಜಿಪಂ ಸದಸ್ಯ ದಿಲೀಪ ಪಾಟೀಲ, ಮುಖಂಡರಾದ ದೇವಿಂದ್ರಪ್ಪ ಮರತೂರ, ಸೈಯದ್‌ ಮಜಹರ್‌ ಹುಸೇನ್‌, ನೀಲಕಂಠರಾವ
ಮೂಲಗೆ, ದಶರಥ ಬಾಬು ಒಂಟಿ, ಸಂತೋಷ ಪಾಟೀಲ ದುಧನಿ,
ಪ್ರವೀಣ ಪಾಟೀಲ ಹರವಾಳ ಮುಂತಾದವರಿದ್ದರು.

ಜಾಧವ್‌ಗೆ ಕಾಂಗ್ರೆಸ್‌ ಪಕ್ಷ ಎಲ್ಲವನ್ನು ಕೊಟ್ಟಿತ್ತು. ಸಂಸದೀಯ ಕಾರ್ಯದರ್ಶಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಲಾಗಿತ್ತು. ಅಷ್ಟೇ ಏಕೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ರಾತೋ ರಾತ್ರಿ ಮುಂಬೈಗೆ ಓಡಿ ಹೋಗಿ ಬೆನ್ನಿಗೆ ಚೂರಿ ಹಾಕಿದ. ಇವರಿಗೆ ಮಾನ ಮರ್ಯಾದೆ ಇದೆಯಾ?
ಸಿದ್ದರಾಮಯ್ಯ, ಮಾಜಿ ಸಿಎಂ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ