ಸಹಾಯಕ ಆಯುಕ್ತರಿಂದ ಮಳೆ ನೀರು ಕೊಯ್ಲು

ಸರ್ಕಾರಿ ನಿವಾಸದಿಂದಲೇ ನೀರು ಉಳಿಕೆ •ನಾಗರಿಕರಿಗೆ ಮಾದರಿಯಾದ ರಾಹುಲ್ ಪಾಂಡ್ವೆ

Team Udayavani, Jul 14, 2019, 9:44 AM IST

ಕಲಬುರಗಿ: ಸಹಾಯಕ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ನಿವಾಸದಲ್ಲಿ ಅಳವಡಿಸಿರುವ ಸಿಂಟೆಕ್ಸ್‌ನಲ್ಲಿ ಮಳೆ ನೀರು ಸಂಗ್ರಹವಾಗಿರುವುದು.

ರಂಗಪ್ಪ ಗಧಾರ
ಕಲಬುರಗಿ:
ಐಎಎಸ್‌ ಅಧಿಕಾರಿ, ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ತಮ್ಮ ಸರ್ಕಾರಿ ನಿವಾಸದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ.

ನಗರದ ನೂತನ ಜಿಪಂ ಕಚೇರಿ ಪಕ್ಕದಲ್ಲೇ ರಾಹುಲ್ ಪಾಂಡ್ವೆ ಅವರ ನಿವಾಸವಿದ್ದು, ಯಾವುದೇ ಕೊಳವೆ ಬಾವಿ ಇಲ್ಲ. ಮಹಾನಗರ ಪಾಲಿಕೆ ನಳದ ನೀರೇ ಇವರ ನಿವಾಸಕ್ಕೂ ಸರಬರಾಜು ಆಗುತ್ತದೆ. ಜಿಲ್ಲೆಯಲ್ಲಿನ ನೀರಿನ ಬವಣೆ ಅರಿತ ರಾಹುಲ್ ಪಾಂಡ್ವೆ ಪ್ರಸ್ತಕ ಮಳೆಗಾಲ ಆರಂಭದಲ್ಲೇ ತಮ್ಮ ನಿವಾಸದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೊಂಡಿದ್ದಾರೆ.

ಸರಳ ವಿಧಾನ, ಖರ್ಚು ಕಡಿಮೆ: ರಾಹುಲ್ ಪಾಂಡ್ವೆ ಸರಳ ಹಾಗೂ ಕಡಿಮೆ ಖರ್ಚಿನಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ತಮ್ಮ ನಿವಾಸದಲ್ಲಿ ಮಾಡಿಕೊಂಡಿದ್ದಾರೆ. ಮನೆ ಛಾವಣಿ ಮೇಲೆ ಬೀಳುವ ನೀರು ಚರಂಡಿಗೆ ಹರಿದು ಹೋಗದಂತೆ ತಡೆದು ಸಂಗ್ರಹಿಸುತ್ತಿದ್ದಾರೆ.

ಮನೆ ಆವರಣದಲ್ಲಿ ಗುಂಡಿ ತೋಡಿಸಿ 1,500 ಲೀಟರ್‌ ಸಾಮರ್ಥ್ಯದ ಸಿಂಟೆಕ್ಸ್‌ನ್ನು ನೆಲದಲ್ಲಿ ಅಳವಡಿಸಿದ್ದಾರೆ. ಛಾವಣಿ ಮೇಲೆ ಬಿದ್ದ ನೀರು ಹರಿಯಲು ಇದ್ದ ಪೈಪ್‌ಗ್ಳಿಗೆ ಗೋಡೆ ಮುಖಾಂತರ ಹೊಸ ಪೈಪ್‌ ಜೋಡಿಸಿ ಸಿಂಟೆಕ್ಸ್‌ಗೆ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ಛಾವಣಿ ಮೇಲೆ ಬಿದ್ದ ಪ್ರತಿ ಹನಿ ನೀರು ನೇರವಾಗಿ ಸಿಂಟೆಕ್ಸ್‌ನಲ್ಲಿ ಸಂಗ್ರಹವಾಗುತ್ತದೆ. ಇದಕ್ಕೆ ರಾಹುಲ್ ಪಾಂಡ್ವೆ ಖರ್ಚು ಮಾಡಿದ್ದು ಕೇವಲ ಹತ್ತು ಸಾವಿರ ರೂಪಾಯಿ ಮಾತ್ರ.

1,500 ಲೀಟರ್‌ ಸಾಮರ್ಥ್ಯದ ಸಿಂಟೆಕ್ಸ್‌ಗೆ ಐದು ಸಾವಿರ ರೂ., ಛಾವಣಿಯಿಂದ ಸಿಂಟೆಕ್ಸ್‌ಗೆ ಸಂಪರ್ಕ ಕಲ್ಪಿಸಲು ಕೇವಲ 20 ಅಡಿ ಉದ್ದದ ಪೈಪ್‌ ಖರೀದಿಸಿದ್ದು, ಇದಕ್ಕೆ ಎರಡು ಸಾವಿರ ರೂ. ವ್ಯಯಿಸಿದ್ದಾರೆ. ಸಿಂಟೆಕ್ಸ್‌ ಅನ್ನು ಭೂಮಿಯಲ್ಲಿ ಅಳಡಿಸುವುದಕ್ಕಾಗಿ ಗುಂಡಿ ತೋಡುವ ಕಾರ್ಮಿಕರಿಗೆ ಮೂರು ಸಾವಿರ ರೂ. ಕೂಲಿ ನೀಡಿದ್ದಾರೆ.

ಒಂದೇ ಮಳೆಗೆ ಸಿಂಟೆಕ್ಸ್‌ ಭರ್ತಿ: ಮಳೆ ನೀರು ಕೊಯ್ಲು ಪದ್ಧತಿ ಆವಳಡಿಸಿದ ನಂತರ ಬಿದ್ದ ಮೊದಲ ಮಳೆಗೆ ಸಿಂಟೆಕ್ಸ್‌ ತುಂಬಿದೆ. ಅಂದರೆ, ಚರಂಡಿಗೆ ಹರಿದು ಹೋಗುತ್ತಿದ್ದ 1,500 ಲೀಟರ್‌ ನೀರು ಮನೆಯಲ್ಲೇ ಸಂಗ್ರಹಗೊಂಡಿದೆ. ದಿನ ಬಳಕೆಗಾಗಿ ಈ ನೀರನ್ನು ಉಪಯೋಗಿಸಲಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನು ಕಠಿಣ ದಿನಗಳು ಬಂದರೂ ಆಶ್ಚರ್ಯ ಪಡಬೇಕಿಲ್ಲ. ನಮ್ಮ ಮನೆಯಲ್ಲಿ ಅಳವಡಿಸುವ ಮಳೆ ನೀರು ಸಂಗ್ರಹ ಪದ್ಧತಿ ಸರಳ ಹಾಗೂ ಕಡಿಮೆ ವೆಚ್ಚದ್ದಾಗಿದೆ. ಇದೇ ಪದ್ಧತಿಯಲ್ಲಿ ಸಿಂಟೆಕ್ಸ್‌ಗೆ ಸುತ್ತಲೂ ನಾಲ್ಕು ರಂಧ್ರ ಕೊರೆದು ಜಲಪೂರಣ ವ್ಯವಸ್ಥೆ ಮಾಡಬಹುದು. ಇದರಿಂದ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಕೊಳವಿ ಬಾವಿಗಳಿಗೆ ನೀರು ಸುಲಭವಾಗಿ ಲಭ್ಯವಾಗುತ್ತದೆ. ಇದು ಭವಿಷ್ಯದಲ್ಲಿ ನೀರಿನ ಅಭಾವವನ್ನು ತಗ್ಗಿಸಲಿದೆ ಎನ್ನುತ್ತಾರೆ ಅಧಿಕಾರಿ ರಾಹುಲ್ ಪಾಂಡ್ವೆ.

ನೀರು ಬಳಕೆ ಮಿತ: ‘ರಾಹುಲ್ ಪಾಂಡ್ವೆ ಸರ್‌ ಮನೆಯಲ್ಲಿ ನೀರು ಬಳಕೆ ಮಿತವಾಗಿದೆ. ನಗರದ ಪ್ರತಿ ಮನೆಯಂತೆ ಇವರ ಮನೆಗೂ ಕನಿಷ್ಠ ಎರಡ್ಮೂರು ದಿನಕ್ಕೊಮ್ಮೆ ಪಾಲಿಕೆ ನೀರು ಪೂರೈಕೆ ಆಗುತ್ತದೆ. ನಳದ ನೀರು ಬಂದಾಗ ಹತ್ತು ಸಾವಿರ ಲೀಟರ್‌ ಸಿಂಟೆಕ್ಸ್‌ನಲ್ಲಿ ಸಂಗ್ರಹಿಸಿ ಅದನ್ನೇ ಬಳಕೆ ಮಾಡುತ್ತಾರೆ. ಮಳೆ ನೀರು ಕೊಯ್ಲು ಪದ್ಧತಿಯಲ್ಲಿ ಸಂಗ್ರಹಗೊಂಡ ನೀರನ್ನು ಕಾರು ತೊಳೆಯಲು, ಮನೆಯ ಆವರಣ ಸ್ವಚ್ಛಗೊಳಿಸಲು, ಗಿಡ, ಮರಗಳಿಗೆ ಉಣಿಸಲಾಗುತ್ತಿದೆ ಎಂದು ಮನೆಯ ಸಹಾಯಕರೊಬ್ಬರು ತಿಳಿಸಿದರು.

ಭರಪೂರ ಮಳೆಗೆ ಕೋಟಿ ಲೀಟರ್‌ ನೀರು ಸಂಗ್ರಹ
ಮುಂಗಾರಿನ ಆರಂಭದಲ್ಲಿ ಮಳೆ ಉತ್ತಮವಾಗಿ ಸುರಿದಿತ್ತು. ಜುಲೈನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಬೇಕಿತ್ತು. ಆದರೆ, ದಿನ ಕಳೆದಂತೆ ಮಳೆ ಕಡಿಮೆಯಾಗುತ್ತಿದೆ. ಮಳೆ ಸುರಿದಾಗಲೇ ನೀರು ಸಂಗ್ರಹಿಸುವುದು ಅಗತ್ಯವಾಗಿದೆ. ಒಂದು ಅಂದಾಜಿನ ಪ್ರಕಾರ ಕಲಬುರಗಿ ನಗರದಲ್ಲಿ ಒಂದು ಭರಪೂರ ಮಳೆಗೆ ಮನೆ, ಹೋಟೆಲ್ಗಳಲ್ಲಿ ಒಂದು ಕೋಟಿ ಲೀಟರ್‌ ಸಂಗ್ರಹಿಸಬಹುದಾಗಿದೆ. ಕೊಯ್ಲು ಪದ್ಧತಿ ಅಳವಡಿಸಿಕೊಂಡು ನೀರು ಶೇಖರಿಸಿದ್ದೇ ಆದಲ್ಲಿ ಬೇರೆ ಜಲ ಮೂಲ ಅವಲಂಬಿಸುವುದು ಕಡಿಮೆಯಾಗುತ್ತದೆ. ಜಲಾಶಯಗಳಲ್ಲಿ ನೀರು ಉಳಿಯುತ್ತದೆ. ಸರ್ಕಾರದ ಮೇಲಿನ ಭಾರ ಇಳಿಯುತ್ತದೆ. ಅಗತ್ಯವಿದ್ದಾಗ ಜಲಾಶಯ, ಇತರ ಮೂಲಗಳ ನೀರು ಬಳಕೆಗೆ ಬರುತ್ತದೆ.
ರಾಹುಲ್ ತುಕಾರಾಂ ಪಾಂಡ್ವೆ
ಸಹಾಯಕ ಆಯುಕ್ತರು, ಕಲಬುರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ