ಗರಿಗೆದರಿದ ಸ್ಮಾರ್ಟ್‌ ಸಿಟಿ ಕನಸು

ಬಿಎಸ್‌ವೈ ನೀಡಿದ ಭರವಸೆ ಈಡೇರುತ್ತಾ?•2ನೇ ಹಂತದ ಪಟ್ಟಿಯಲ್ಲಿ ಸೇರಿಸಲು ಚಿಂತನೆ

Team Udayavani, Sep 9, 2019, 10:57 AM IST

ಕಲಬುರಗಿ: ಮಹಾನಗರ ಪಾಲಿಕೆ ನೂತನ ಕಟ್ಟಡ.

ಹಣಮಂತರಾವ ಭೈರಾಮಡಗಿ
ಕಲಬುರಗಿ:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ 6 ತಿಂಗಳೊಳಗೆ ಕಲಬುರಗಿ ಮಹಾನಗರವನ್ನು ‘ಸ್ಮಾರ್ಟ್‌ ಸಿಟಿ’ ಮಾಡಲು ಸರ್ವ ಪ್ರಯತ್ನ ಮಾಡುವುದಾಗಿ ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆಂದು ಕಲಬುರಗಿಗೆ ಆಗಮಿಸಿದ್ದಾಗ ಸೂಪರ್‌ ಮಾರ್ಕೆಟ್ದಲ್ಲಿ ನಡೆದಿದ್ದ ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ ಮತಕ್ಷೇತ್ರದ ಚುನಾವಣಾ ಭಾಷಣದಲ್ಲಿ ಯಡಿಯೂರಪ್ಪ ಈ ಭರವಸೆ ನೀಡಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜತೆಗೆ ಬಿ.ಎಸ್‌.ಯಡಿಯೂರಪ್ಪ ಅವರೇ ಸಿಎಂ ಆಗಿದ್ದಾರೆ. ಹೀಗಾಗಿ ‘ಸ್ಮಾರ್ಟ್‌ ಸಿಟಿ’ ಕನಸಿಗೆ ರೆಕ್ಕೆಪುಕ್ಕ ಬಂದಂತಾಗಿದೆ.

ಕಲಬುರಗಿಗೆ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಬಿಎಸ್‌ವೈ ಈ ಹಿಂದೆ ಸಿಎಂ ಆಗಿದ್ದಾಗ 40 ಸಲ ಬಂದಿದ್ದಲ್ಲದೇ ಮಹಾನಗರದ ಅಭಿವೃದ್ಧಿಗೆ 200 ಕೋಟಿ ರೂ. ವಿಶೇಷ ಅನುದಾನ ನೀಡಿದ್ದರು. ಈ ಸಲ ಕಲಬುರಗಿ ಸ್ಮಾರ್ಟ್‌ ಸಿಟಿಯಾಗಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟರೆ ಸಾಕು ಎಂದು ಮಹಾನಗರದ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಭಿವೃದ್ಧಿಗೆ ಪೂರಕ: ಕಲಬುರಗಿ ಸ್ಮಾರ್ಟ್‌ ಸಿಟಿಯಾದರೆ ಕೇಂದ್ರದಿಂದ ಕೋಟ್ಯಂತರ ರೂ. ಪರಿಹಾರ ಬರುತ್ತದೆ. ನರೇಂದ್ರ ಮೋದಿ ನೇತೃತ್ವದ ಮೊದಲ ಸರ್ಕಾರದ ಅವಧಿಯಲ್ಲಿ ದೇಶದಾದ್ಯಂತ 100 ಮಹಾನಗರಗಳನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಆಯ್ಕೆ ಮಾಡಿಕೊಂಡು ಅಮೂಲಾಗ್ರ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ನೀಡಿದೆ. ಆದರೆ ಕಲಬುರಗಿ ಮಹಾನಗರ ಮೊದಲ ಹಂತದಲ್ಲಿ ಆಯ್ಕೆಯಾಗಲಿಲ್ಲ.

ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ: ಮೊದಲ ಹಂತದ ‘ಸ್ಮಾರ್ಟ್‌ ಸಿಟಿ’ ಪಟ್ಟಿಯಲ್ಲಿ ಕಲಬುರಗಿ ಮಹಾನಗರ ಆಯ್ಕೆ ಆಗದಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದರೆ, ಕೇಂದ್ರದಲ್ಲಿ ಬಿಜೆಪಿ ಇತ್ತು. ಹೀಗಾಗಿ ಸಮನ್ವಯ ಕೊರತೆಯಿಂದ ‘ಸ್ಮಾರ್ಟ ಸಿಟಿ’ ಕಾರ್ಯ ಕೈಗೂಡಿರಲಿಲ್ಲ.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ ‘ಸ್ಮಾರ್ಟ ಸಿಟಿ’ ಕಾರ್ಯ ಕೈಗೆತ್ತಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಚಿಂತನೆ ನಡೆಸಿದೆಯಂತೆ. ಎರಡನೆ ಹಂತದಲ್ಲಾದರೂ ಕಲಬುರಗಿ ಮಹಾನಗರ ಈ ಪಟ್ಟಿಯಲ್ಲಿ ಸೇರಬೇಕೆಂದರೆ ಈಗಿನಿಂದಲೇ ತಾಲಿಮು ನಡೆಸಬೇಕು. ಅಲ್ಲದೇ ರಾಜ್ಯ ಸರ್ಕಾರವೂ ಮೇಲ್ಸೇತುವೆ, ನಗರ ಸಂಚಾರ ಸುಧಾರಣೆಗೆ ಅಮೂಲಾಗ್ರ ಬದಲಾವಣೆ, ತ್ಯಾಜ್ಯ ನಿರ್ವಹಣೆಗೆ ಆಧುನಿಕ ಕ್ರಮ, ಸಾರಿಗೆ ವ್ಯವಸ್ಥೆ ಸೇರಿದಂತೆ ಇತರ ಕಾರ್ಯಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಿದರೆ ‘ಸ್ಮಾರ್ಟ ಸಿಟಿ’ ಆಗುವುದರಲ್ಲಿ ಅನುಮಾನವೇ ಇಲ್ಲ.

ಈಗಷ್ಟೇ ಕಲಬುರಗಿ ಮಹಾನಗರಕ್ಕೆ ಪೊಲೀಸ್‌ ಆಯುಕ್ತಾಲಯ ಕಾರ್ಯರಂಭ ಆಗಿದೆ. ಪಾಲಿಕೆಯಲ್ಲಿ ತುರ್ತಾಗಿ ಖಾಲಿ ಹುದ್ದೆ ಭರ್ತಿಗೆ ಕ್ರಮ, ಅದರಲ್ಲೂ ಪಾಲಿಕೆಗೆ ಚುನಾವಣೆ ನಡೆಸಿ ಹೊಸ ಚುನಾಯಿತ ಮಂಡಳಿ ಬರುವುದು ಮುಖ್ಯವಾಗಿದೆ. ಒಟ್ಟಾರೆ ಮಹಾನಗರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ, ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಗಮನಹರಿಸಬೇಕು. ಇಲ್ಲದಿದ್ದರೆ ಯಥಾಸ್ಥಿತಿಯಲ್ಲೇ ಮುಂದುವರಿಯುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ನಗರಾಭಿವೃದ್ಧಿ ಖಾತೆ ಸಿಎಂ ಯಡಿಯೂರಪ್ಪ ಬಳಿಯೇ ಇದೆ. ಹೀಗಾಗಿ ಕಲಬುರಗಿ ಮಹಾನಗರ ‘ಸ್ಮಾರ್ಟ್‌ ಸಿಟಿ’ ಆಗುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡುವಂತೆ ಮನವಿ ಮಾಡಲಾಗಿದೆ. ಸೆಪ್ಟೆಂಬರ್‌ 7ರಂದು ಕಲಬುರಗಿ ಪಾಲಿಕೆಗೆ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ ಅಡಿ 2019-20ರಿಂದ 2023-2024ರ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 150 ಕೋಟಿ ರೂ.ಗಳನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಕಲಬುರಗಿ ಮಹಾನಗರ ಜನತೆ ವತಿಯಿಂದ ಅಭಿನಂದನೆ ಸಲ್ಲಿಸುವೆ.
ದತ್ತಾತ್ರೇಯ ಪಾಟೀಲ ರೇವೂರ,
    ಶಾಸಕರು, ಕಲಬುರಗಿ ದಕ್ಷಿಣ

ಕಲಬುರಗಿ ಪಾಲಿಕೆಗೆ150 ಕೋಟಿ ರೂ.
ಈ ಹಿಂದೆ ಸಿಎಂ ಆಗಿದ್ದಾಗ ಕಲಬುರಗಿ ಪಾಲಿಕೆಗೆ 200 ಕೋಟಿ ರೂ. ವಿಶೇಷ ಅನುದಾನ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ಕಲಬುರಗಿ ಪಾಲಿಕೆಗೆ 150 ಕೋಟಿ ರೂ. ಮಂಜೂರಾತಿ ನೀಡಿದ್ದಾರೆ. ಈ ಅನುದಾನವನ್ನು ಎಲ್ಲ ಹಂತದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಹಣ ಬಿಡುಗಡೆಗೆ ಆಡಳಿತಾತ್ಮಕವಾಗಿ ಅನುಮೋದನೆ ದೊರೆತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ