“ಯಲ್ಲೋ ವಂಚನೆ ಜಾಲಕ್ಕೆ ಬಿದ್ದ 46 ಜನ

ಕಂಪನಿ ವಿರುದ್ದ ಸಿಐಡಿ ತನಿಖೆಗೆ ಆದೇಶಒಟ್ಟು 2.10 ಕೋಟಿ ರೂ. ಹೂಡಿಕೆ

Team Udayavani, Nov 16, 2019, 12:58 PM IST

ಕಲಬುರಗಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಲ್ಲೋ ಎಕ್ಸ್‌ಪ್ರೆಸ್‌ ಲಾಜಿಸ್ಟಿಕ್‌ ಕಂಪನಿಯ ವಂಚನೆ ಜಾಲ ಕಲಬುರಗಿ ಜಿಲ್ಲೆಗೂ ವ್ಯಾಪ್ತಿಸಿದೆ. ಕಂಪನಿಯಲ್ಲಿ ಜಿಲ್ಲೆಯ ಅನೇಕರು ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.

ಯಲ್ಲೋ ಎಕ್ಸ್‌ಪ್ರೆಸ್‌ ಕಂಪನಿಯಲ್ಲಿ ಜಿಲ್ಲೆಯ 46 ಜನ 2.10 ಕೋಟಿ ರೂ.ಗಳಿಗೂ ಹೆಚ್ಚು ಹಣ ಹೂಡಿ ಷೇರುದಾರರಾಗಿದ್ದಾರೆ. ಈಗ ರಾಜ್ಯ ಸರ್ಕಾರ ಕಂಪನಿ ವಿರುದ್ಧ ಸಿಐಡಿ ತನಿಖೆಗೆ ಆದೇಶಿಸಿದೆ. ಈ ವಿಷಯ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಕಂಪನಿಯ ವಂಚನೆ ಗೊತ್ತಾಗಿದೆ ಎಂದು ಜಿಲ್ಲೆಯ ಪೇರುದಾರರಲ್ಲೊಬ್ಬರಾದ ವೆಂಕಟೇಶಕುಮಾರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ಕಂಪನಿ ವಂಚನೆಯಲ್ಲಿ ತೊಡಗಿದೆ ಎನ್ನುವ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ವಂಚನೆ ಕುರಿತು ಮಾಧ್ಯಮಗಳಲ್ಲಿ ವರದಿಯಾದ ನಂತರ ಬೆಂಗಳೂರಿನಲ್ಲಿರುವ ಕಂಪನಿ ಕಚೇರಿಗೆ ತೆರಳಿದಾಗ ಕಚೇರಿಗೆ ಬೀಗ ಹಾಕಲಾಗಿತ್ತು. ಒಬ್ಬರೊಬ್ಬರು ಲಕ್ಷಾಂತರ  ಹೂಡಿಕೆ ಮಾಡಿ ಷೇರುದಾರರಾಗಿದ್ದೇವೆ. ಈಗ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡರು.

ವಂಚನೆ ಹೇಗೆ?: ಯಲ್ಲೋ ಎಕ್ಸ್‌ಪ್ರೆಸ್‌ ಲಾಜಿಸ್ಟಿಕ್‌ ಕಾರು ಗುತ್ತಿಗೆ ಕಂಪನಿ. ಇದರಲ್ಲಿ 2 ಲಕ್ಷ ರೂ. ತುಂಬಿ ಷೇರುದಾರರಾಗಿದ್ದೇವೆ. ಕಂಪನಿಯು 8 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿ, ಅದರ ಆರ್‌ಸಿಯನ್ನು ಷೇರುದಾರರ ಹೆಸರಲ್ಲಿ ಮಾಡಿಸುವುದಾಗಿ ಹೇಳಿತ್ತು. ಅದೇ ಕಾರನ್ನು ಲೀಜ್‌ ಪಡೆಯುವುದಾಗಿ ಹಾಗೂ ಉಳಿದ ಆರು ಲಕ್ಷ ರೂ.ಗಳನ್ನು ತಾನೇ ಭರಿಸುವುದಾಗಿ ತಿಳಿಸಿತ್ತು. ಜತೆಗೆ ಎರಡು ಲಕ್ಷ ರೂ. ಷೇರು ನೀಡಿದವರಿಗೆ ಪ್ರತಿ ತಿಂಗಳು 10 ಸಾವಿರ ರೂ. ಹಾಕಲಾಗುತ್ತದೆ ಎಂದು ಕಂಪನಿ ಕರಾರು ಮಾಡಿಕೊಂಡಿತ್ತು.

ಆರಂಭದಲ್ಲಿ ಬ್ಯಾಂಕ್‌ ಖಾತೆಗೆ 10 ಸಾವಿರ ರೂ.ಗಳನ್ನು ಕಂಪನಿ ಹಾಕಿತ್ತು. ನಂತರ 9,800 ರೂ. ಜಮೆ ಆಗುತ್ತಿತ್ತು. ಹೀಗೆ ಕೆಲವು ತಿಂಗಳು ಸರಿಯಾಗಿ ಹಣ ಖಾತೆಗೆ ಹಾಕಿದೆ. ಈಗ ಮೂರು ತಿಂಗಳಿಂದ ಜಮೆ ಮಾಡುವುದನ್ನು ನಿಲ್ಲಿಸಿತ್ತು. ಇಷ್ಟರಲ್ಲೇ ಕಂದಾಯ ಸಚಿವ ಆರ್‌. ಅಶೋಕ ಅವರು ಇದೊಂದು “ಐಎಂಎ’ ರೀತಿಯ ದೊಡ್ಡ ಹಗರಣ ಎಂದು ಹೇಳಿದ ಬಳಿಕ, ಕಂಪನಿಯ ವಂಚನೆ ಅರಿವಿಗೆ ಬಂದಿದೆ. ನಾನು ಆರು ಕಾರುಗಳಿಗೆ 12 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದೇನೆ. ಅದೇ ರೀತಿ ಅನೇಕರು ಹಣ ಹೂಡಿಕೆ ಮಾಡಿದ್ದಾರೆ ಎಂದು ವಿವರಿಸಿದರು.

ವಂಚನೆಗೊಳ್ಳಲಾಗದ ಸಂಗಮೇಶ ಜ್ಯೋತೆಪ್ಪ, ಸತೀಶ ಜಾನೆ, ಅಬ್ದುಲ್‌ ನಹೀಂ ಖಲೀಫಾ, ಯಾಕೂಬ್‌ ಅಲಿ ಮುಜಾವರ್‌ ಮತ್ತಿತರರು ಇದ್ದರು. ಕಲಬುರಗಿ ಜಿಲ್ಲೆಯಲ್ಲಿ ಸದ್ಯಕ್ಕೆ 46 ಜನರು ಯಲ್ಲೋ ಎಕ್ಸ್‌ಪ್ರೆಸ್‌ ಲಾಜಿಸ್ಟಿಕ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಷೇರುದಾರರಾಗಿದ್ದು ಗಮನಕ್ಕೆ ಬಂದಿದೆ. ನಾನು 15 ಕಾರುಗಳಿಗೆ 30 ಲಕ್ಷ ರೂ. ಹೂಡಿಕೆ ಮಾಡಿದ್ದೇನೆ. ಇನ್ನು ಅದೆಷ್ಟು ಜನ ಷೇರುದಾರರು ಇದ್ದಾರೋ ಗೊತ್ತಿಲ್ಲ. ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದ್ದು, ತನಿಖೆ ನಡೆಯುತ್ತಿದೆ.ನಾವು ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಕಂಪನಿಯಿಂದ ಹಣ ಮರಳಿಸಬೇಕು.
ಅಬ್ದುಲ್‌ ನಹೀಂ ಖಲೀಫಾ
ವಂಚನೆಗೊಳಗಾದ ಷೇರುದಾರ 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ