ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಬಿಜೆಪಿಯ 25 ಸಂಸದರು ವಿಫಲ: ಧ್ರುವ ನಾರಾಯಣ್ ಟೀಕೆ
Team Udayavani, Oct 8, 2020, 1:32 PM IST
ಕಲಬುರಗಿ: ರಾಜ್ಯದಿಂದ ಆಯ್ಕೆಯಾಗಿ ಹೋದ ಬಿಜೆಪಿಯ 25 ಸಂಸದರಿಗೆ ಪ್ರಧಾನಿ ಮೋದಿ ಎದುರು ಮಾತನಾಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಪರಿಹಾರ ಹಾಗೂ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ನ ಮಾಜಿ ಸಂಸದ ಆರ್.ಧೃವನಾರಾಯಣ್ ಟೀಕಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಗುಜರಾತ್ ನಂತರ ಕರ್ನಾಟಕ ಅತಿಹೆಚ್ಚು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕಳಿಸುವ ರಾಜ್ಯ ಕರ್ನಾಟಕವಾಗಿದ್ದು, ಅನುದಾನ ಬಿಡುಗಡೆಗೆ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಈಗ ಯಡಿಯೂರಪ್ಪನವರು 30 ಸಾವಿರ ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ರಾಜ್ಯದ ಸಾಲ 3.68 ಲಕ್ಷ ಕೋಟಿ ರೂ. ಇದ್ದು, ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ 62, 402 ರೂ. ಸಾಲ ಇದೆ. ಮತ್ತೆ ಸಾಲ ಮಾಡಿದರೆ ಮತ್ತಷ್ಟು ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ 23.9% ಜಿಡಿಪಿ ತಳಮಟ್ಟಕ್ಕೆ ತಲುಪಿದ್ದು ಜಗತ್ತಿನಲ್ಲೇ ಭಾರತ ಅತ್ಯಂತ ಕೆಳಮಟ್ಟದ ಜಿಡಿಪಿ ಹೊಂದಿರುವ ದೇಶವಾಗಿದೆ. ಆರ್ಥಿಕ ಸುಸ್ಥಿರತೆಗೆ ಕಾರ್ಯಕ್ರಮ ರೂಪಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದ ಧೃವನಾರಾಯಣ್, ಇತ್ತೀಚಿಗೆ ವಿತ್ತ ಸಚಿವರು 20 ಸಾವಿರ ಲಕ್ಷ ಹಣ ಆತ್ಮನಿರ್ಭರ ಅಡಿಯಲ್ಲಿ ಬಿಡುಗಡೆ ಮಾಡಲಾಗುವುದು ಹೇಳಿದ್ದರು. ಕುಸಿದಿರುವ ಆರ್ಥಿಕ ವ್ಯವಸ್ಥೆಗೆ ಇದು ಯಾವುದೇ ರೀತಿ ಪ್ರಯೋಜನವಾಗದೇ, ಇದು ಆತ್ಮಘಾತುಕವಾಗಿದೆ ಎಂದು ದೂರಿದರು.
ಕೇಂದ್ರದಲ್ಲಿ ಯುಪಿಎ 1 ಮತ್ತು 2 ಸರ್ಕಾರ ಹಾಗೂ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಬಡವರ ಪರ ಕಾರ್ಯಕ್ರಮ ಕೈಗೊಂಡಿತ್ತು. ಈಗ ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಕಾಂಗ್ರೆಸ್ ಆಹಾರ ಧಾನ್ಯ ವಿತರಿಸಿದೆ. ಔಷಧಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಒಟ್ಟು 7 ಲಕ್ಷ ಜನರಿಗೆ ನೆರವಾಗಿ ಕಾಂಗ್ರೆಸ್ ತನ್ನ ಸಾಮಾಜಿಕ ಜವಾಬ್ದಾರಿ ಮೆರೆದಿದೆ ಎಂದರು.
ಇದನ್ನೂ ಓದಿ:ದಿಲ್ಲಿಯಲ್ಲಿ ನನ್ನ ಹೆಸರು ಹೇಳಿ ಮಾರ್ಕೆಟ್ ಮಾಡ್ಕೊಳ್ತಿದಾರೆ: ಸಿಟಿ ರವಿಗೆ ಕುಟುಕಿದ ಡಿಕೆಶಿ
ಮುಖ್ಯ ಸಚೇತಕರಾದ ಶಾಸಕ ಡಾ. ಅಜಯ್ ಸಿಂಗ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸರ್ಕಾರ ಮಾಡಬೇಕಾಗಿರುವ ಕಾರ್ಯಕ್ರಮಗಳನ್ನು ನಾವು ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅವರ ವಿಶೇಷ ಆಸಕ್ತಿಯಿಂದಾಗಿ ರಾಜ್ಯ 7,400 ಗ್ರಾಮ ಪಂಚಾಯಿತಿಗಳು ಹಾಗೂ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಶಾಸಕರಾದ ನಾರಾಯಣ್ ರಾವ್ ಕೋವಿಡ್ ನಿಂದ ಮರಣ ಹೊಂದಿದ್ದಾರೆ. ಸೋಂಕು ಈಗಾಗಲೇ ಸಮುದಾಯ ಮಟ್ಟದಲ್ಲಿ ವ್ಯಾಪಕವಾಗಿ ಹಬ್ಬಿದೆ. ಇದು ಇನ್ನೂ ಯಾವ ಮಟ್ಟಕ್ಕೆ ಹೋಗಿ ಮುಟ್ಟಲಿದೆ ಎನ್ನುವುದು ತಿಳಿಯದಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗದುಕೊಳ್ಳದೇ ಹಣಲೂಟಿಯಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಶಾಸಕರಾದ ಪ್ರಿಯಾಂಕ್ ಖರ್ಗೆ, ಕನೀಜ್ ಫಾತಿಮಾ, ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಧುಸೂಧನ್, ಡಾ.ಕಿರಣ್ ದೇಶಮುಖ್ ಇದ್ದರು.