ಎಚ್ಚರ..ಕಲುಷಿತ ನೀರು ಸರಬರಾಜು

Team Udayavani, Jul 15, 2018, 11:16 AM IST

ಕಲಬುರಗಿ: ವೇಗವಾಗಿ ಬೆಳೆಯುತ್ತಿರುವ ಮಹಾನಗರದಲ್ಲಿ ಪೂರೈಕೆಯಾಗುವ ನೀರಿನ ಮೂಲಗಳಲ್ಲಿ ಶೇ. 32ರಷ್ಟು ಕುಡಿಯಲು ಯೋಗ್ಯವಿಲ್ಲ ಎನ್ನುವುದು ಆರೋಗ್ಯ ಇಲಾಖೆ ಕೈಗೊಂಡ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಕಳೆದ ಜನವರಿಯಿಂದ ಜೂನ್‌ 31ರ ವರೆಗೆ ಮಹಾನಗರದಲ್ಲಿ 2430 ನೀರಿನ ಮೂಲಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 600ಕ್ಕೂ ಹೆಚ್ಚು ಮೂಲಗಳ ನೀರು ಕುಡಿಯಲು ಯೋಗ್ಯವಿಲ್ಲ ಎನ್ನುವುದು ವರದಿಗಳಿಂದ ಬಹಿರಂಗಗೊಂಡಿದೆ. ಜೂನ್‌ ತಿಂಗಳಲ್ಲಿ ನಡೆಸಲಾದ 16 ನೀರಿನ ಮೂಲಗಳಲ್ಲಿ 15 ಮೂಲಗಳೇ ಯೋಗ್ಯವಿಲ್ಲ ಎನ್ನುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಕಲುಷಿತ ನೀರು ಸೇವನೆಯಿಂದ ಜನರು ವಿವಿಧ ರೋಗ-ರುಜಿನಗಳಿಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚಾಗಿದೆ.

ಈಗ ಮಳೆಗಾಲ. ಈ ಸಮಯದಲ್ಲಂತೂ ಕೆಟ್ಟ ವಾಸನೆ ನೀರೇ ಪೂರೈಕೆಯಾಗುತ್ತದೆ. ಕುಡಿಯಲು ಬಿಡಿ, ಬಳಸುವುದಕ್ಕೂ ಬಾರದಿರುವಷ್ಟು ಮಟ್ಟಿಗೆ ಅಯೋಗ್ಯವಾಗಿರುತ್ತದೆ. ಇದೇ ಕಾರಣಕ್ಕೆ ಮಳೆಗಾಲ ಆರಂಭದ ನಂತರ ಮಹಾನಗರದಲ್ಲಿ ಕಾಲರಾ ಕಾಣಿಕೊಳ್ಳುತ್ತಿದೆ ಎನ್ನಲಾಗಿದೆ. 

ಕಲುಷಿತಕ್ಕೆ ಕಾರಣ: ನೀರು ಪೂರೈಕೆ ಪೈಪ್‌ಗ್ಳು ಅಲ್ಲಲ್ಲಿ ಒಡೆದಿರುವುದು-ಬಹುತೇಕ ನಳಗಳಿಗೆ ಟ್ಯಾಪ್‌ ಇಲ್ಲದಿರುವುದೇ ಕಲುಷಿತ ನೀರು ಪೂರೈಕೆಗೆ ಕಾರಣ. ಮುಖ್ಯವಾಗಿ ನಳಕ್ಕಾಗಿ ತೋಡಲಾದ ಗುಂಡಿಯಲ್ಲಿ ನಿಲ್ಲುವ ನೀರು ಪೈಪ್‌ನೊಳಗೆ ಸೇರುತ್ತಿರುವುದೇ ಕಲುಷಿತ ನೀರು ಪೂರೈಕೆಗೆ ಕಾರಣವೆಂದು ಅಧಿಕಾರಿಗಳು ವಿವರಿಸುತ್ತಾರೆ. 

ಶುದ್ಧೀಕರಣ ಘಟಕ ಕಾರ್ಯಾರಂಭ: ಮಹಾನಗರದ ತ್ಯಾಜ್ಯ (ಒಳಚರಂಡಿ) ನೇರವಾಗಿ ಭೀಮಾ ನದಿಯ ಸರಡಗಿ ಬ್ಯಾರೇಜ್‌ಗೆ ಸೇರಿ ಅದೇ ನೀರಿನಲ್ಲಿ ಬೆರೆತು ವಾಪಸ್ಸು ಬರುತ್ತಿದೆ. ಇದೇ ಕಲುಷಿತ ನೀರು ಮಹಾನಗರಕ್ಕೆ ಪೂರೈಕೆಯಾಗುತ್ತಿತ್ತು. 

ಆದರೀಗ ತ್ಯಾಜ್ಯ ನೀರು ಶುದ್ಧೀಕರಣಗೊಳಿಸುವ ಘಟಕವನ್ನು ನಂದಿಕೂರ ಬಳಿ ವಿಶಾಲವಾದ 45 ಎಕರೆ ಭೂಮಿಯಲ್ಲಿ ಅತ್ಯಾಧುನಿಕ 47 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ 40 ಎಂಎಲ್‌ಡಿ ಸಾಮರ್ಥಯದ ತ್ಯಾಜ್ಯ ನೀರು ಶುದ್ಧೀಕರಣವಾಗುತ್ತಿದ್ದರೂ ಮಹಾನಗರಕ್ಕೆ ಶುದ್ಧ ಕುಡಿಯುವ ನೀರು ಯಾಕೆ ಪೂರೈಕೆಯಾಗುತ್ತಿಲ್ಲ ಎನ್ನುವುದೇ ತಿಳಿದುಬಂದಿಲ್ಲ. 

ತ್ಯಾಜ್ಯ ನೀರು ಶುದ್ಧೀಕರಣದ ಜತೆಗೆ ಚೋರಗುಂಬಜ್‌ ಬಳಿಯ ಫಿಲ್ಟರ್‌ಬೆಡ್‌ ಕಾರ್ಯದಲ್ಲೂ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಹಳೆಯಯಂತ್ರಗಳನ್ನು ಬದಲಾಯಿಸಲಾಗಿದೆ. ಅಲ್ಲದೆ ಮಹಾನಗರದ ನೀರು ಪೂರೈಕೆ ಪೈಪ್‌ಲೈನ್‌ ದಲ್ಲಿ ಕೆಲವೆಡೆ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಆದರೆ ಕುಡಿಯಲು ಯೋಗ್ಯವಲ್ಲದ ನೀರ ಪೂರೈಕೆಯಾಗುತ್ತಿದೆಯಲ್ಲ ಎಂದು ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ತಲೆ ಎತ್ತುತ್ತಿರುವ ನೀರು ಶುದ್ಧೀಕರಣದ ಖಾಸಗಿ ಘಟಕಗಳು: ಮಹಾನಗರಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುದ್ಧೀಕರಿಸಿದ ನೀರು ಪೂರೈಕೆ ಹೆಸರಿನಲ್ಲಿ 30 ರೂ.,40ರೂ. ಕ್ಯಾನ್‌ ಗಳ ನೀರು ಮಾರಾಟ ಜೋರಾಗಿದೆ.ಮಹಾನಗರದ ಶೇ. 40ರಷ್ಟು ಜನರು ನ್‌ಗಳ ನೀರನ್ನೇ ಆಶ್ರಯಿಸುತ್ತಿದ್ದಾರೆ. ಈಗ ನೀರಿನ ಮಾರಾಟದ ವ್ಯಾಪಾರವೇ ಜೋರಾಗಿ ಕಂಡು ಬರುತ್ತಿದೆ. 

ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ನಾಯಿ ಕೊಡೆಗಳಂತೆ ಅನಧಿಕೃತ ಘಟಕಗಳು ತಲೆ ಎತ್ತುತ್ತಿವೆ. ಐಎಸ್‌ಐ ಗುಣಮಟ್ಟದ ನೀರು ಪೂರೈಕೆಯಾಗಬೇಕೆಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆ ಆಗುತ್ತಿಲ್ಲ. ಶುದ್ಧೀಕರಣದ ನೀರಿನ ಹೆಸರಿನಲ್ಲಿ ತಲೆ ಎತ್ತಿರುವ ಘಟಕಗಳ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿದ್ದ ಅಧಿಕಾರಿಗಳು ಈಗ ದಾಳಿಯನ್ನೇ ನಿಲ್ಲಿಸಿದ್ದಾರೆ. ಒಟ್ಟಾರೆ ಕುಡಿಯುವ ನೀರಿನ ಹೆಸರಿನಲ್ಲಿ ಇನ್ನಿಲ್ಲದ ಕಾರ್ಯಗಳು ತೆರೆಮರೆಯಲ್ಲಿ ನಡೆಯುತ್ತಿವೆ.
 
ಕಲಬುರಗಿ ಮಹಾನಗರದಲ್ಲಿ ಐಎಸ್‌ಐ ಗುಣಮಟ್ಟದ 37 ಶುದ್ಧ ಕುಡಿಯುವ ನೀರು ತಯಾರಿಕೆ ಹಾಗೂ ಪೂರೈಕೆ ಘಟಕಗಳಿವೆ. ಇವುಗಳ ನೀರಿನ ಗುಣಮಟ್ಟ ಆಗಾಗ್ಗೆ ಪರಿಶೀಲನೆ ನಡೆಯಬೇಕು. ಅಲ್ಲದೆ ಹತ್ತಾರು ಘಟಕಗಳು ಪಟ್ಟಣ, ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ತಲೆಎತ್ತಿವೆ. ಆದರೆ ಇವುಗಳ ಮೇಲೆ ಯಾರೂ ನಿಗಾವಹಿಸುತ್ತಿಲ್ಲ.

ಗ್ರಾಮೀಣ ಭಾಗವೂ ಹೊರತಾಗಿಲ್ಲ: ಗ್ರಾಮೀಣ ಭಾಗದಲ್ಲೂ ಶುದ್ಧ ಕುಡಿಯುವ ನೀರಿನ ಕೊರತೆಯೂ ಕಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿನ ನೀರಿನ ಮೂಲಗಳನ್ನು ಪರೀಕ್ಷಿಸಿದಾಗಲೂ ಹಲವು ಮೂಲಗಳು ಕುಡಿಯಲು ಯೋಗ್ಯವಿಲ್ಲ ಎನ್ನುವ ವರದಿ ಬಂದಿದೆ. ಕಲಬುರಗಿ ಗ್ರಾಮೀಣ ಭಾಗದಲ್ಲಿ ಶೇ. 23ರಷ್ಟು, ಜೇವರ್ಗಿ, ಆಳಂದ ತಾಲೂಕಿನಲ್ಲಿ ಶೇ. 22, ಚಿತ್ತಾಪುರ ತಾಲೂಕಿನಲ್ಲಿ ಶೇ. 14, ಅಫಜಲಪುರ ತಾಲೂಕಿನಲ್ಲಿ ಶೇ. 7ರಷ್ಟು ಹಾಗೂ ಸೇಡಂ ತಾಲೂಕಿನಲ್ಲಿ ಶೇ. 7ರಷ್ಟು ನೀರಿನ ಮೂಲಗಳು ಕುಡಿಯಲು ಯೋಗ್ಯವಿಲ್ಲ ಎನ್ನುವ ವರದಿಗಳು ಬೆಳಕಿಗೆ ಬಂದಿವೆ. 

ಶುದ್ಧ ಕುಡಿಯುವ ನೀರಿನ ಘಟಕ ಅರ್ಧಕ್ಕೂ ಹೆಚ್ಚು ಬಂದ್‌: ಕಲಬುರಗಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಂಬಂಧ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಘಟಕಗಳು ಬಂದ್‌ ಆಗಿದ್ದು, ಎಂದಿನಂತೆ ಜನತೆಗೆ ಅಶುದ್ಧ ನೀರೇಗತಿ ಎನ್ನುವಂತಾಗಿದೆ. ಈಗ ಮಳೆಗಾಲ ಶುರುವಾಗಿದೆ. ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಶುದ್ಧ ನೀರೇ ಪೂರೈಕೆಯಾಗುತ್ತದೆ. ಇದರಿಂದ ಜನರು ಕಾಲರಾ ಸೇರಿದಂತೆ ಇತರ ರೋಗಗಳಿಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು.

ಇದನ್ನು ಮನಗಂಡೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆರಂಭದಲ್ಲಿ ಕೆಲ ತಿಂಗಳಗಳ ಕಾಲ ಇವು ಸರಿಯಾಗಿ ನಡೆದರೂ ಸಮರ್ಪಕ ನಿರ್ವಹಣೆ ಕೊರತೆಯಿಂದ ಈಗ ಇದ್ದು ಇಲ್ಲದಂತಾಗಿವೆ.
 
 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಜಿಲ್ಲೆಯಲ್ಲಿ 300 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಸ್ಥಳ ನಿಗದಿ ಮಾಡಲಾಗಿ, ಅದರಲ್ಲಿ 248 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಇದರಲ್ಲಿ 100ಕ್ಕೂ ಹೆಚ್ಚು ಬಂದ್‌ ಆಗಿವೆ. 14 ನೀರಿನ ಸಮಸ್ಯೆಯಿಂದ ಬಂದ್‌ ಆಗಿದ್ದು, ಉಳಿದಿದ್ದೆಲ್ಲ ನಿರ್ವಹಣೆ ಕೊರತೆಯಿಂದ ಬಂದ್‌ ಆಗಿವೆ.
 
ಸಹಕಾರಿ ಸಂಘಗಳ ವತಿಯಿಂದ 35 ಘಟಕಗಳನ್ನು ಸ್ಥಾಪಿಸಲು ನಿಗದಿ ಮಾಡಿ ಅದರಲ್ಲಿ 28 ಘಟಕಗಳನ್ನು ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 20 ಮಾತ್ರ  ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳ ವತಿಯಿಂದ 40 ಕಡೆ ಸ್ಥಳ ನಿಗದಿ ಮಾಡಲಾಗಿದ್ದು, ಅದರಲ್ಲಿ 14 ಕಡೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು  ಕಾರ್ಯನಿರ್ವಹಿಸುತ್ತಿವೆ.

 ವಿಧಾನಸಭೆಯಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತಾಗಿ ಚರ್ಚೆಯಾಗಿದೆ. ಘಟಕಗಳು ಸರಿಯಾಗಿ ನಿರ್ವಹಣೆ ಮಾಡುವಂತಾಗಲು ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ. 

ಅಗತ್ಯವಿದ್ದ ಕಡೆ ಇಲ್ಲ ಘಟಕಗಳು: ಕುಡಿಯಲು ಯೋಗ್ಯವಿಲ್ಲದ ಕಡೆ ಆದ್ಯತೆ ಮೇರೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಾಗಬೇಕಿತ್ತು. ಆದರೆ ಇಲ್ಲಿ ಯೋಗ್ಯವಿಲ್ಲದ ನೀರಿನ ಮೂಲಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆ ಆಗಿರುವುದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯತನವನ್ನು ತೋರಿಸುತ್ತದೆ. 

ಕಲಬುರಗಿ ತಾಲೂಕಿನ ಹೊನ್ನಕಿರಣಗಿಯಲ್ಲಿ ದೊರಕುವ ನೀರಿನ ಮೂಲ ಕುಡಿಯಲು ಯೋಗ್ಯವಿಲ್ಲ ಎನ್ನುವ ವರದಿ ಬಂದಿದೆ. ಪ್ಲೋರೈಡ್‌ ಅಂಶ ಶೇ. 75ರಷ್ಟಿದೆ. ಆರೋಗ್ಯ ಇಲಾಖೆಯೂ  ಹೊನ್ನಕಿರಣಗಿಯಲ್ಲಿನ ನೀರು ಕುಡಿದರೆ ರೋಗಗಳು ಬರುತ್ತವೆ ಎನ್ನುವ ವರದಿ ನೀಡಿದೆ. ಆದರೆ
ಹೊನ್ನಕಿರಣಗಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವೇ ಇಲ್ಲ. ಜಿಲ್ಲೆಯ ಹಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿಯಿದೆ. ಒಟ್ಟಾರೆ ಶುದ್ಧ ಕುಡಿಯುವ ನೀರಿನ ಘಟಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಕುಡಿಯುವ ನೀರಿನ ಭರವಸೆ ನೀಡಿದ ಜನಪ್ರತಿನಿಧಿಗಳು, ಈಗ ಈ ಕುರಿತು ಚಕಾರ ಎತ್ತುತ್ತಿಲ್ಲ.

ಹೊನ್ನಕಿರಣಗಿ ಗ್ರಾಮದ ಜನರ ಹಲ್ಲುಗಳು ಹಚ್ಚ ಹಸುರಾಗಿವೆ. ಕಾಲುಗಳು ನೋಯುತ್ತಿವೆ. ಇದಕ್ಕೆಲ್ಲ
ಕುಡಿಯುವ ನೀರು ಕಲುಷಿತವಾಗಿರುವುದೇ ಕಾರಣ. ಆದರೂ ಸಂಬಂಧಪಟ್ಟವರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಗಿಲ ಹೊನ್ನಕಿರಣಗಿಗೆ ಶಾಶ್ವತ ಕ್ರಮದ ಯೋಜನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಪೂರೈಕೆಯಾಗುವ ನೀರಿನಲ್ಲಿ ಪ್ಲೋರೈಡ್‌ ಅಂಶವಿದೆ ಎನ್ನುವುದು ವರದಿಯಿಂದ ಗೊತ್ತಾಗಿದೆ. ಬಹುಗ್ರಾಮ ಯೋಜನೆ ಅಡಿ ಶುದ್ಧ ಕುಡಿಯುವ ನೀರಿನ ಯೋಜನೆ ಕೈಗೊಳ್ಳಬೇಕಿತ್ತು. ಆದರೆ ಕೈಗೂಡಿಲ್ಲ. ಈಗ ಫರಹತಾಬಾದ್‌ದಿಂದಲೇ 6 ಕೀ.ಮೀ ಪೈಪಲೈನ್‌ ಮೂಲಕ ಶುದ್ಧ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಕೈಗೂಡಿದಲ್ಲಿ ಹೊನ್ನಕಿರಣಿ ಜನತೆ ಪ್ಲೋರೈಡ್‌ ನೀರು ಕುಡಿಯುವುದು ತಪ್ಪುತ್ತದೆ.
 ದಿಲೀಪ ಪಾಟೀಲ, ಜಿಪಂ ಸದಸ್ಯರು, ಫರಹತಾಬಾದ ಕ್ಷೇತ

ಪರೀಕ್ಷೆಯಿಂದ ವರದಿ ಬಹಿರಂಗ ಕಲಬುರಗಿ ಮಹಾನಗರದಲ್ಲಿ ಪೂರೈಕೆಯಾಗುವ ನೀರಿನ ಮೂಲಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಶೇ. 32ರಷ್ಟು ಮೂಲಗಳು ಕುಡಿಯಲು ಯೋಗ್ಯವಿಲ್ಲ ಎಂದು ತಿಳಿದು ಬಂದಿದೆ. ಅದೇ ರೀತಿ ಗ್ರಾಮೀಣ ಭಾಗದಲ್ಲೂ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂಬುದು ವರದಿಗಳಿಂದ ಪತ್ತೆಯಾಗಿದೆ.
 ಶರಣಬಸಪ್ಪ ಗಣಜಲಖೇಡ, ಉಪ ಮುಖ್ಯ ವೈದ್ಯಾಧಿಕಾರಿ, ಕಾಲರಾ ನಿಯಂತ್ರಣ, ಆರೋಗ್ಯ ಇಲಾಖೆ

ಘಟಕಗಳ ವರದಿಗೆ ಸೂಚನೆ ಕಲಬುರಗಿ ಮಹಾನಗರದಲ್ಲಿನ ಹಾಗೂ ಗ್ರಾಮೀಣ ಭಾಗದಲ್ಲಿರುವ ಐಎಸ್‌ಐ ಗುಣಮಟ್ಟದ ಎಲ್ಲ ನೀರು ತಯಾರಿಕೆ ಹಾಗೂ ಪೂರೈಕೆ ಘಟಕಗಳಿಗೂ ಭೇಟಿ ನೀಡಿ ವಾಸ್ತವ ವರದಿ ಸಲ್ಲಿಸುವಂತೆ ಎಲ್ಲ ಆಹಾರ ಸುರಕ್ಷತೆ
ಹಾಗೂ ಗುಣಮಟ್ಟತೆ ತಾಲೂಕು ಇನ್ಸಪೆಕ್ಟ್ರ್‌ಗಳಿಗೆ ಸೂಚನೆ ನೀಡಲಾಗಿದೆ. ಕಳೆದ ಹಲವಾರು ತಿಂಗಳುಗಳಿಂದ ದಾಳಿಯೇ
ನಡೆದಿಲ್ಲ. 15 ದಿನದಲ್ಲಿ ವರದಿ ಬಂದ ನಂತರ ಮುಂದಿನ ಹೆಜ್ಜೆ ಇಡಲಾಗುವುದು.
  ಡಾ| ದೀಪಕ್‌, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಜಿಲ್ಲಾ ಅಂಕಿತ ಅಧಿಕಾರಿ

ಹಣಮಂತರಾವ ಭೈರಾಮಡಗಿ


ಈ ವಿಭಾಗದಿಂದ ಇನ್ನಷ್ಟು

 • ವಾಡಿ: ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರ ಸಂಕಟದಲ್ಲಿರುವ ಪಟ್ಟಣದ ವಿವಿಧ ಬಡಾವಣೆಗಳ ಜನರ ಅನುಕೂಲಕ್ಕಾಗಿ ಕೊಳವೆಬಾವಿ (ಬೋರ್‌ವೆಲ್)ಗಳು ಮಂಜೂರಾಗಿದ್ದು,...

 • ಕಲಬುರಗಿ: ತಾಲೂಕಿನ ಹಾಗರಗಿ ಗ್ರಾಪಂ ವ್ಯಾಪ್ತಿಯ ಆಜಾದಪೂರ ಗ್ರಾಮದಲ್ಲಿ ನಾಲ್ಕು ಕಡೆ ಪೈಪ್‌ಲೈನ್‌ ಒಡೆದು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ತಕ್ಷಣವೇ ಪೈಪ್‌ಲೈನ್‌...

 • ಕಲಬುರಗಿ: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕರನ್ನು ಕೊಂಡೊಯ್ಯುತ್ತಿರುವ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ...

 • ಚಿತ್ತಾಪುರ: ಸರ್ಕಾರಿ ಶಾಲಾ ಮಕ್ಕಳು ಕೂಡ ಆರಂಭದಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ...

 • ವಾಡಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ವೇತನವೂ ಪಾವತಿಸಲಾಗುತ್ತಿದೆ. ಲಕ್ಷಾಂತರ...

ಹೊಸ ಸೇರ್ಪಡೆ

 • ಚಿಕ್ಕಮಗಳೂರು: ವಿಶಾಲ ದೃಷ್ಟಿಕೋನದೊಂದಿಗೆ ಭಾರತದ ಸಾರ್ವಭೌಮತ್ವದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ಉದ್ದೇಶದೊಂದಿಗೆ ಸಂವಿಧಾನ ರಚನೆ ಮೂಲಕ ಎಲ್ಲಾ ವರ್ಗದ...

 • ಚಿಕ್ಕಮಗಳೂರು: ಅಡುಗೆ ಅನಿಲವನ್ನು ಸರಿಯಾಗಿ ಪೂರೈಕೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ಬೆಳಗ್ಗೆ ಗ್ರಾಹಕರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಜಿಲ್ಲಾಧಿಕಾರಿ...

 • ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣಾ ಅಖಾಡದ ಮತ ಎಣಿಕೆಗೆ ಇನ್ನೂ ಕೇವಲ 24 ಗಂಟೆ ಮಾತ್ರ ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ...

 • ಚಿಕ್ಕಬಳ್ಳಾಪುರ: ಕಳೆದ ಏ.18 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು 2,284 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.23 ರಂದು ನಗರದ ಹೊರ ವಲಯದ...

 • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

 • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...