ಅನ್ನಛತ್ರ ಮಂಡಳ

ದೇಶದಲ್ಲೇ ಹೆಸರುವಾಸಿ ಸ್ವಾಮಿ ಸಮರ್ಥ

Team Udayavani, Jul 16, 2019, 4:21 PM IST

ಸೊಲ್ಲಾಪುರ: ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಮಹಾರಾಜರ ಪುಣ್ಯಕ್ಷೇತ್ರದಲ್ಲಿ ಜನ್ಮೇಜಯರಾಜೆ ಭೋಸಲೆ ಅವರ ನೇತೃತ್ವದಲ್ಲಿ 1988ರಂದು ಗುರುಪೂರ್ಣಿಮೆ ದಿನ ಬರೀ ಮೂರು ಕೆಜಿ ಅಕ್ಕಿಯಿಂದ ಆರಂಭವಾದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ(ಟ್ರಸ್ಟ್‌) ಈಗ ಅನ್ನ ಸಂತರ್ಪಣೆಯಿಂದಲೇ ದೇಶದಲ್ಲೇ ಹೆಸರುವಾಸಿಯಾಗಿದೆ.

ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ-ಮೂಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಸ್ವಾಮಿ ಸಮರ್ಥರು ಹಿಂದೆ ಒಪ್ಪತ್ತಿನ ಊಟ ಸಿಗದವರಿಗೆ ಅನ್ನಪ್ರಸಾದ ಕಲ್ಪಿಸಿದ್ದರು. ಅನ್ನದಾನ ನಿರಂತರ ನಡೆಯಬೇಕೆಂಬ ಆಸೆ ಅವರದ್ದಾಗಿತ್ತು. ಅವರ ಅಪೇಕ್ಷೆಯಂತೆ ಕಳೆದ 31 ವರ್ಷಗಳಿಂದ ಅನ್ನದಾನ ಕಾರ್ಯವನ್ನು ನಿರಂತರ ನಡೆಯುತ್ತ ಬರಲಾಗಿದೆ.

ಮೋಹನ ಪೂಜಾರಿ ಎಂಬುವರ ಪ್ರೇರಣೆಯಿಂದ ಜನ್ಮೇಜಯರಾಜೆ ವಿಜಯಸಿಂಹರಾಜೆ ಭೋಸಲೆ ಅವರು ತಮ್ಮ ಸಹಕಾರಿಗಳೊಂದಿಗೆ ಅಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ವಾಮಿ ಸಮರ್ಥರ ಹೆಸರಿನಲ್ಲಿ ಅನ್ನದಾನ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಭಕ್ತರ ಕಾಣಿಕೆಯಿಂದಲೇ ಅನ್ನದಾಸೋಹ ನಿರಂತರವಾಗಿ ನಡೆಯುತ್ತಿದೆ.

ಪ್ರಸಾದ ನಿಲಯದ ದೊಡ್ಡ ಕೋಣೆಯಲ್ಲಿ ಒಂದು ಸಲಕ್ಕೆ 1000ದಿಂದ 1500 ಜನರು ಪ್ರಸಾದ ಸ್ವೀಕರಿಸುತ್ತಾರೆ. ಹೀಗೆ ಒಂದು ದಿನಕ್ಕೆ ಸುಮಾರು 10ರಿಂದ 15 ಸಾವಿರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಅನ್ನಕ್ಷೇತ್ರ ಆವರಣದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಉದ್ಯಾನ ಮತ್ತು ಶಿವಚರಿತ್ರ ದಾತುಚಿತ್ರ ಶಿಲ್ಪ ಪ್ರದರ್ಶನ ಹಾಲ್ ನಿರ್ಮಿಸಲಾಗಿದೆ. ಬಡ ರೋಗಿಗಳಿಗಾಗಿ ಅಲ್ಪ ದರದದಲ್ಲಿ ಆಂಬ್ಯುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಸುರಕ್ಷತೆಗಾಗಿ ಅಗ್ನಿಶಾಮಕ ವಾಹನ ಖರೀದಿಸಲಾಗಿದೆ. ಗೋವಾದಲ್ಲಿ ಸುಮಾರು 5.30 ಎಕರೆ ಜಮೀನು ಖರೀದಿಸಲಾಗಿದ್ದು, ಅಲ್ಲಿ ಬೃಹತ್‌ ಅಧ್ಯಾತ್ಮಿಕ ಕೇಂದ್ರ ನಿರ್ಮಿಸಲಾಗುತ್ತಿದೆ. ಮುಂಬೈನಲ್ಲಿ ಅಂತಾರಾಷ್ಟ್ರೀಯ ಕಚೇರಿ ತೆರೆಯುವ ಉದ್ದೇಶದಿಂದ 4 ಬಿಎಚ್ಕೆ ಪ್ಲ್ಯಾಟ್ ಖರೀದಿಸಲಾಗಿದೆ. ಭಕ್ತರಿಗೆ ಉಳಿಯಲು ಯಾತ್ರಿ ನಿವಾಸ, ಯಾತ್ರಿ ಭವನ ನಿರ್ಮಿಸಲಾಗಿದೆ.

ಸಂಸ್ಥೆ ಹೆಸರಿನ ನಾಲ್ಕೂವರೆ ಎಕರೆ ಭೂಮಿಯನ್ನು ಮುಸ್ಲಿಂ ಸಮಾಜದ ಸ್ಮಶಾನಕ್ಕಾಗಿ, 3 ಎಕರೆಯನ್ನು ಲಿಂಗಾಯತ ಸಮಾಜದ ಸ್ಮಶಾನಕ್ಕಾಗಿ,ಒಂದೂವರೆ ಎಕರೆಯನ್ನು ರಿಂಗ್‌ರೋಡ್‌ ಸಲುವಾಗಿ ಉಚಿತವಾಗಿ ನೀಡಲಾಗಿದೆ.

ನಗರದ ಪ್ರಮುಖ ವೃತ್ತ ಸುಂದರಗೊಳಿಸಿ ಸಸಿ ನೆಟ್ಟು ಫಲಕ ಹಾಕಲಾಗಿದೆ. ಫತ್ತೇಸಿಂಹ ಕ್ರೀಡಾಂಗಣದಲ್ಲಿ 40 ಸಿಮೆಂಟ್ ಖುರ್ಚಿ ಹಾಕಲಾಗಿದೆ. ಅನ್ನಛತ್ರ ವೃತ್ತದಲ್ಲಿ ಪೋಲಿಸ್‌ ಚೌಕಿ ಮತ್ತು ಪೋಲಿಸ್‌ ವಿಶ್ರಾಂತಿಗೃಹ ಕಟ್ಟಿಸಲಾಗಿದೆ. ರಾಜ್ಯ ಪರಿವಹನದ ವಾಹಕ ಮತ್ತು ಚಾಲಕರ ಸಲುವಾಗಿ ಅನ್ನಛತ್ರದ ಗೇಟ್ ನಂಬರ್‌ 581ರಲ್ಲಿ ಐದೂವರೆ ಎಕರೆ ಭೂಮಿಯಲ್ಲಿ ವಾಹನ ನಿಲ್ದಾಣ ನಿರ್ಮಿಸಿ 108 ಹಾಸಿಗೆಗಳ ವಿಶ್ರಾಂತಿಗೃಹ ನಿರ್ಮಿಸಲಾಗಿದೆ.

ಗಳ್ಳೋರಗಿಯಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅನ್ನಛತ್ರಕ್ಕೆ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಭೀಕರ ಬರಗಾಲದಲ್ಲಿ ಸುಮಾರು 8 ಕಿಮೀ ಅಂತರದಿಂದ ಪೈಪ್‌ಲೈನ್‌ ಮೂಲಕ ನಗರವಾಸಿಗಳಿಗೆ 10 ತಿಂಗಳು ದಿನನಿತ್ಯ 10 ಲಕ್ಷ ಲೀ. ನೀರು ಉಚಿತವಾಗಿ ಪೂರೈಸಿ ಸಮಾಜದ ಋಣ ತೀರಿಸುವಲ್ಲಿ ಸಂಸ್ಥೆ ಮಹಾಕಾರ್ಯ ಮಾಡಿದೆ.

ಸ್ವಾಮಿ ಸಮರ್ಥ ಮಹಾರಾಜರ ಭಕ್ತಿ ಪ್ರಸಾರ ಆಗಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಸ್ವಾಮಿ ಸಮರ್ಥ ಪಲ್ಲಕ್ಕಿ ಪರಿಕ್ರಮ ಆಯೋಜಿಸಲಾಗುತ್ತಿದ್ದು, ಸುಮಾರು 8 ತಿಂಗಳು ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ 200 ವಾರಕರಿಗಳು ಆನೆ, ಕುದುರೆ ಸಮೇತವಾಗಿ ಪರಿಭ್ರಮಣ ಮಾಡಿ ಬರುತ್ತಾರೆ.

•ಭಕ್ತರ ಕಾಣಿಕೆಯಿಂದಲೇ ನಡೆಯುತ್ತಿದೆ ಅನ್ನದಾಸೋಹ

•ಸ್ವಾಮಿ ಸಮರ್ಥರ ಅಪೇಕ್ಷೆಯಂತೆ ಕಳೆದ 31 ವರ್ಷಗಳಿಂದ ಅನ್ನದಾನ ಕಾರ್ಯ

•ಜನ್ಮೇಜಯರಾಜೆ ವಿಜಯಸಿಂಹರಾಜೆ ಭೋಸಲೆ ಸಹಕಾರಿಗಳೊಂದಿಗೆ ಆರಂಭಿಸಿದ್ದರು ಅನ್ನದಾನ

ಕ್ಷೇತ್ರದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನೂತನ ಮಹಾಪ್ರಸಾದ ಗೃಹ ನಿರ್ಮಿಸಲಾಗುತ್ತಿದ್ದು, ಕಟ್ಟಡ ಹಾಗೂ ಅನ್ನದಾನ ಸೇವೆಗೆ ಕಲಂ 80 ಪ್ರಕಾರ ತೆರಿಗೆ ವಿನಾಯಿತಿ ಇದೆ. ಕಾಣಿಕೆದಾರರು ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ (ಟ್ರಸ್ಟ್‌) ಅಕ್ಕಲಕೋಟ, ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ, ಖಾತೆ ನಂ. 11419854447 ಕಳಿಸಬಹುದು. ಹೆಚ್ಚಿನ ಮಾಹಿತಿಗೆ 02181 220444, 222555ಕ್ಕೆ ಸಂಪರ್ಕಿಸಬಹುದು.

ಮಂಡಳದ ಪ್ರಮುಖ ಕಾರ್ಯಕಾರಿ ವಿಶ್ವಸ್ಥ ಅಮೋಲರಾಜೆ ಭೋಸಲೆ, ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶ್ಯಾಮರಾವ ಮೋರೆ, ಲಕ್ಷ್ಮಣ ಪಾಟೀಲ, ಖಜಾಂಚಿ ಲಾಲಾ ರಾಠೊಡ, ಅಪ್ಪಾ ಹಂಚಾಟೆ, ಮಹಾಂತೇಶ ಸ್ವಾಮಿ, ಸಿದ್ಧಾರಾಮ ಪೂಜಾರಿ, ಸಮರ್ಥ ಘಾಟಗೆ, ಜನಸಂಪರ್ಕ ಅಧಿಕಾರಿ ಪ್ರಶಾಂತ ಭಗರೆ ಹಾಗೂ ಮಂಡಳ ಪದಾಧಿಕಾರಿಗಳು, ಸಿಬ್ಬಂದಿ ಜು.6ರಿಂದ 15ರವರೆಗೆ ನಡೆದ ಧರ್ಮ ಸಂಕೀರ್ತನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿ ದ್ದಾರೆ.

21ರಿಂದ 30ರವರೆಗೆ ಧರ್ಮ ಸಂಕೀರ್ತನೆ: ಮಂಡಳದ 32ನೇ ವಾರ್ಷಿಕೋತ್ಸವ ಅಂಗವಾಗಿ ಅನ್ನಛತ್ರದಲ್ಲಿ ಜುಲೈ 21ರಿಂದ 30ರ ವರೆಗೆ ಧರ್ಮ ಸಂಕೀರ್ತನೆಯೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಗುರುಪೂರ್ಣಿಮೆ ನಿಮಿತ್ತ ಜು. 16ರಂದು ಬೆಳಗ್ಗೆ 8ರಿಂದ 10ರವರೆಗೆ ಶ್ರೀ ಸ್ವಾಮಿ ಸಮರ್ಥ ಸಾರಾಮೃತ ಪಾರಾಯಣ, ಬೆಳಗ್ಗೆ 10ರಿಂದ 11ರವರೆಗೆ ನಾಮಸ್ಮರಣೆ, ಶ್ರೀಗುರು ಪೂಜೆ, ಬೆಳಗ್ಗೆ 11ಕ್ಕೆ ಮಹಾನೈವೇದ್ಯ ನಡೆಯಲಿದೆ. ಬೆಳಗ್ಗೆ 11:30ರಿಂದ ಸಂಜೆ 4ರವರೆಗೆ ಸ್ವಾಮಿ ಭಕ್ತರಿಗೆ ಮಹಾಪ್ರಸಾದ, ಸಂಜೆ 5ಕ್ಕೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪಲ್ಲಕ್ಕಿ ಹಾಗೂ ರಥೋತ್ಸವ ನಡೆಯಲಿದೆ.
•ಸೋಮಶೇಖರ ಜಮಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ