ಅಫಜಲಪುರದಲ್ಲಿ ನಾಲ್ವರು ರೋಗಿಗಳ ಸಾವು: ಆಕ್ಸಿಜನ್ ಕೊರತೆ ಕಾರಣವಲ್ಲ
Team Udayavani, May 4, 2021, 1:50 PM IST
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿಯಿಂದ ಇಬ್ಬರು ಕೋವಿಡ್ ಸೋಂಕಿತರು ಮತ್ತು ಇಬ್ಬರು ಕೋವಿಡ್ ಶಂಕಿತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇದಕ್ಕೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷ ರೋಗಿಗಳು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. ಆದರೆ, ಆಕ್ಸಿಜನ್ ಸಮಸ್ಯೆಯಿಂದ ಸಾವನ್ನಪ್ಪಿಲ್ಲ ಎಂದರು.
ನಿತ್ಯ ಬೇಡಿಕೆಯಷ್ಟು ಆಕ್ಸಿಜನ್ ತಾಲೂಕು ಆಸ್ಪತ್ರೆಗೆ ಪೂರೈಕೆ ಆಗುತ್ತದೆ. ಈ ಘಟನೆ ನಡೆದಾಗಲೂ ಐದು ಸಿಲಿಂಡರ್ ಗಳ ಆಸ್ಪತ್ರೆಯಲ್ಲೇ ಇದ್ದವು. ಆದರೆ, ನಾಲ್ವರೂ ರೋಗಿಗಳು ಗಂಭೀರ ಪರಿಸ್ಥಿತಿಯಲ್ಲಿ ಇದ್ದರು. ಹೀಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದರು.