ಹೆಚ್ಚು ಅಂಕದೊಂದಿಗೆ ಸಮಾಜಕ್ಕೆ ಮಾದರಿಯಾಗಿ

Team Udayavani, Nov 30, 2018, 11:15 AM IST

ಕಲಬುರಗಿ: ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿ ದುಡ್ಡು ಮಾಡಿದರೆ ಮಾತ್ರ ಸಾಲದು, ಸಮಾಜಕ್ಕೆ  ದರಿಯಾಗಬೇಕು ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಹೇಳಿದರು. ಅಫಜಲಪುರ ತಾಲೂಕಿನ ಸಾಗನೂರದ ಯುವ ಸಂಘಟಕ ಬಸವರಾಜ ಸಾಗನೂರ ಹಾಗೂ ಸಂಗಡಿಗರ ವತಿಯಿಂದ ಹಮ್ಮಿಕೊಂಡಿದ್ದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆ ಕಲಿಯುವುದು ಪ್ರತಿಯೊಬ್ಬರ ಹಕ್ಕು. ವಿದ್ಯೆ ಕಲಿತು ಸಮಾಜ, ನಾಡು, ನುಡಿ, ದೇಶದ ಬಗ್ಗೆ ಗೌರವ ಹಾಗೂ ಅಭಿಮಾನ ಹೊಂದಿರಬೇಕು ಎಂದು ಹೇಳಿದರು. ಜಿ.ಪಂ. ಮಾಜಿ ಸದಸ್ಯ ಪ್ರಕಾಶ ಜಮಾದಾರ ಮಾತನಾಡಿ, ಡಾ| ಅಂಬೇಡ್ಕರ್‌ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಮುಖ್ಯವಾಗಿದೆ. ಶಿಕ್ಷಣವಿರದ ಸಂಘಟನೆಯ ಹೋರಾಟ ಕ್ರಮೇಣ ನಶಿಸಿ ಹೋಗುತ್ತದೆ ಎಂದಿದ್ದರು. ಅದಕ್ಕಾಗಿ ಮೊದಲು ಎಲ್ಲರೂ ಶಿಕ್ಷಿತರಾಗಬೇಕು ಎಂದರು.

ಬಿಜೆಪಿ ಯುವ ಮುಖಂಡ ಶಿವಾ ಅಷ್ಟಗಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯಾ ಸಿಕ್ಕ ನಂತರ ಬೇರೆ ಬೇರೆ ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಲು ಅನೇಕ ಕನ್ನಡದ ದಿಗ್ಗಜರು ನಡೆಸಿದ ಸಂಘಟಿತ ಹೋರಾಟದ ಫಲವಾಗಿ ಇಂದು ಕನ್ನಡ ಮಾತಾಡುವ ನಾವೆಲ್ಲರೂ ಒಂದಾಗಿ ಕರ್ನಾಟಕದಲ್ಲಿದ್ದೇವೆ ಎಂದರು.

ಕನ್ನಡ ಭಾಷಿಕರೆಲ್ಲ ಒಂದಾಗಬೇಕೆಂದು ಮೊದಲು ಮುನ್ನುಡಿ ಇಟ್ಟವರು ಆಲೂರು ವೆಂಕಟರಾಯರು. ನಂತರ ಕನ್ನಡ ಸಾಹಿತ್ಯ ಪರಿಷತ್‌ ಮುಂದುವರಿಸಿ 1956 ರಲ್ಲಿ ಕರ್ನಾಟಕದ ಏಕೀಕರಣವಾಯಿತು. ನಂತರ ದಿ.ಮುಖ್ಯಮಂತ್ರಿ ದೇವರಾಜ ಅರಸರು ಕರ್ನಾಟಕವೆಂದು ನಾಮಕರಣ ಮಾಡಿದರು ಎಂದು ಹೇಳಿದರು. 

ಸಿದ್ದು ಸಿರಸಗಿ, ಜಿ.ಪಂ. ಮಾಜಿ ಸದಸ್ಯ ಸಿದ್ದಾರ್ಥ ಬಸರಿಗಿಡ, ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಚವ್ಹಾಣ ಮಾತನಾಡಿದರು. ವೇದಮೂರ್ತಿ ರಾಚಯ್ಯ ಸ್ವಾಮಿ ಸಾನ್ನಿಧ್ಯ, ಜಿ.ಪಂ. ಅಧ್ಯಕ್ಷೆ ಶೋಭಾ ಸಿರಸಗಿ ಅಧ್ಯಕ್ಷತೆ ವಹಿಸಿದ್ದರು. ಸಂಘಟಕ ಬಸವರಾಜ ಯಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವಂತರಾಯ ಬೆಣ್ಣೂರರು ಸ್ವಾಗತಿಸಿ, ನಿರೂಪಿಸಿದರು.
 
ತಾ.ಪಂ. ಮಾಜಿ ಅಧ್ಯಕ್ಷ ರಾಜುಗೌಡ ಪಾಟೀಲ ಅವರಳ್ಳಿ, ಪಿಎಸ್‌ಐ ರಾಜಕುಮಾರ ಬಿರಾದಾರ, ಗ್ರಾ.ಪಂ. ಅಧ್ಯಕ್ಷೆ ಆಸ್ಮಾ ಬೇಗಂ ರಹಮಾನ ಪಟೇಲ್‌, ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ರೇಣುಕಾ ಸಿಂಗೆ, ಹೇಮಂತ ರಾಠೊಡ, ಮಹೇಶ ಸರಡಗಿ, ವಿಠಲ ಚಕ್ರ, ಗಿರೀಶ ಚಕ್ರ, ಸಚೀನ ನಾಯ್ಕೋಡಿ, ಸಿದ್ದರಾಮಯ್ಯ ಹಿರೇಮಠ, ಪಿಡಿಒ ಶರಫೋದ್ದಿನ್‌ ನದಾಫ್‌ ಭಾಗವಹಿಸಿದ್ದರು. ಮೌಲಾಲಿ ಮನಿಯಾರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ