ಬಿಸಿಲಿಗೆ ಆವಿಯಾದ ಭೀಮೆ ಒಡಲು

Team Udayavani, Mar 18, 2019, 6:01 AM IST

ಜೇವರ್ಗಿ: ಪ್ರಸಕ್ತ ವರ್ಷ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ರೈತರು ಒಂದು ಕಡೆಯಾದರೆ, ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿರುವ ಯುವ ಜನರ ಸಮೂಹ ಮತ್ತೂಂದು ಕಡೆ. ಮತ್ತೂಂದೆಡೆ ಗಾಯದ ಮೇಲೆ ಬರೆ ಎಳೆದಂತೆ ಕುಡಿಯುವ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ಬಿಸಿಲ ಧಗೆಗೆ ಬತ್ತಿದ ಭೀಮೆಯ ಒಡಲಾಳದ ನೀರು ಆವಿಯಾಗಿದೆ. ಕಟ್ಟಿಸಂಗಾವಿ ಹತ್ತಿರದ ಭೀಮಾ ಬ್ರಿಡ್ಜ್ನಲ್ಲಿ ಮರಳು ಮತ್ತು ಕಲ್ಲುಗಳು ಮೇಲೆ ಬಂದಿದ್ದು, ಮಾನವನ ದೇಹದಲ್ಲಿನ ಅಸ್ತಿಪಂಜರದಂತೆ ಕಾಣಿಸುತ್ತಿವೆ. 

ಇದೇನು ಭೀಮಾ ನದಿಯೋ ಅಥವಾ ಮರಳು ಭೂಮಿಯೋ?  ಎನ್ನುವ ಅನುಮಾನ ಮೂಡಿಸುತ್ತಿದೆ. ಕೋನಾ ಹಿಪ್ಪರಗಾ ಬ್ಯಾರೇಜ್‌ ಕಂ ಬ್ರಿಡ್ಜ್ ಬಳಿ ನೀರು ಸಂಗ್ರಹಿಸಿ ದೂರದ ಕಲಬುರಗಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಕೋಳಕೂರ ಮಾರ್ಗವಾಗಿ ಅಲ್ಲಲ್ಲಿ ಅಲ್ಪಸ್ವಲ್ಪ ನೀರಿನ ಸಂಗ್ರಹಣೆ ಇದ್ದು, ಅದೇ ಹರಿವು ಕಟ್ಟಿಸಂಗಾವಿ ಗ್ರಾಮದ ಹತ್ತಿರ ಅಲ್ಲಲ್ಲಿ ತೆಗ್ಗುಗಳಲ್ಲಿ ಸಂಗ್ರಹವಾಗಿದೆ. ಈ ನೀರು ಜಾನುವಾರುಗಳ ದಾಹ ನೀಗಿಸಲು ಸಾಕಾಗುತ್ತದೆ. ಬೆಳೆದ ಬೆಳೆಗಳು ಬಾಡಿ ಹೋಗಿವೆ.

ಬರಗಾಲ ಕಾಮಗಾರಿಗಳು ಹಳ್ಳ ಹಿಡಿದಿವೆ. ಸರಕಾರ ನೀಡುವ ಪರಿಹಾರ ಗಗನ ಕುಸುಮವಾಗಿದೆ. ಸಾಲಮನ್ನಾ, ಬೆಳೆವಿಮೆ ಕೇವಲ ಕಾಗದದಲ್ಲಿ ಘೋಷಣೆಯಾಗಿ ಜಾರಿಗೆ ಬರದೇ ಧೂಳು ತಿನ್ನುತ್ತಿವೆ. 

ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಗಳಿಗೂ ಸಮರ್ಪಕ ಬೆಲೆ ಸಿಗದೆ ಕಂಗಾಲಾಗಿ ಸಾಲಬಾಧೆಯಿಂದ ಆತ್ಮಹತ್ಯೆ ದಾರಿ  ತುಳಿಯುತ್ತಿದ್ದಾರೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದಿದ್ದರಿಂದ ಅಂತರ್ಜಲ ಮಟ್ಟ ಕುಸಿದು ಪಾತಾಳ ಸೇರಿದೆ. ಅಲ್ಲದೇ ಅಕ್ರಮ ಮರಳುಗಾರಿಕೆಯಿಂದ ನೀರಿನ ಸಂಗ್ರಹಣೆ, ಹರಿವಿನ ಮಾರ್ಗ ಹಾಳಾಗಿ ಪ್ರಕೃತಿ ಮಡಿಲಿಗೆ ಕೊಳ್ಳಿ ಇಡುತ್ತಿರುವುದು ನಾಗರಿಕ ಪ್ರಪಂಚದ ಜನರು ತಲೆತಗ್ಗಿಸುವಂತೆ ಮಾಡುತ್ತಿವೆ.

ಭೀಮಾನದಿ ನೀರು ಖಾಲಿಯಾಗಿದ್ದು ಜೇವರ್ಗಿ ಪಟ್ಟಣದ ಜನರು ತಮ್ಮ ಮನೆ ಎದುರಿನ ನಳಗಳಿಗೆ ಕೀಲಿಹಾಕಿ ನೀರಿನ
ಆಸೆಯನ್ನೇ ಬಿಟ್ಟಿದ್ದಾರೆ. ಬೋರವೆಲ್‌ ಮತ್ತು ಟ್ಯಾಂಕರ್‌ ನೀರಿಗೆ ಮೊರೆಹೋಗುತ್ತಿದ್ದು, ಮೋಟಾರು ಸೈಕಲ್‌ಗ‌ಳ ಮೇಲೆ ಕೊಡಗಳನ್ನು ಕಟ್ಟಿಕೊಂಡು ನೀರು ತರುತ್ತಿದ್ದಾರೆ.

ಅರಣ್ಯ ಇಲಾಖೆ ಗಿಡಮರ ಬೆಳೆಸುವಲ್ಲಿ ವಿಫಲವಾಗಿ ಸಂಪೂರ್ಣ ರಕ್ಷಿತ ಅರಣ್ಯ ಪ್ರದೇಶ ನಶಿಸಿಹೋಗಿದೆ. ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಕಾಲುವೆಗಳು ಹಾಳಾಗಿವೆ. ನೀರಿನ ಸಂಗ್ರಹಣೆ ಮತ್ತು ಅಂತರ್ಜಲ ಸಂರಕ್ಷಣೆ ಬರಗಾಲ ಕಾಮಗಾರಿ, ಉದ್ಯೋಗ ಖಾತ್ರಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದೆ ಅರ್ಧಮರ್ಧ ಕೆಲಸ ಗಳಿಂದಾಗಿ ನೀರಿನ ಮೂಲಗಳು ಬರಿದಾಗಿವೆ. ಇಷ್ಟಾದರೂ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಸಮಸ್ಯೆ ಬಂದಾಗಲೇ ಪರಿಹರಿಸಲು ಸನ್ನದ್ಧರಾಗುತ್ತಿದ್ದಾರೆ. 

ಸಮಸ್ಯೆಗೆ ಬೆನ್ನು ತೋರುತ್ತಿರುವ ಪ್ರತಿನಿಧಿಗಳು ಪುರಸಭೆ ಸದ್ಯ ಆರರಿಂದ ಎಂಟು ದಿನಗಳಿಗೊಮ್ಮೆ ಕುಡಿಯುವ ನೀರು  ಪೂರೈಸುತ್ತಿದೆ. 23ವಾರ್ಡ್‌ ಜನರು ಜನಪ್ರತಿನಿಧಿ ಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಗಾಢ ನಿದ್ದೆಯಲ್ಲಿದೆ. ಮರಗಿಡಗಳು ಕಣ್ಮರೆಯಾಗಿವೆ. ಪುರಸಭೆಯಲ್ಲಿಯೂ ಜನಪ್ರತಿನಿಧಿ ಗಳ ಆಯ್ಕೆ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಗೊಂದಲ ನ್ಯಾಯಾಲಯದ ಮೆಟ್ಟಿಲು ಏರಿದ್ದು ಚುನಾಯಿತ ಪ್ರತಿನಿಧಿ ಸದಸ್ಯರು ಪಟ್ಟಣದ ಸಮಸ್ಯೆಗಳತ್ತ ಬೆನ್ನು ತೋರಿಸುತ್ತಿದ್ದಾರೆ

 ಮರೆಪ್ಪ ಬೇಗಾರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ