ಹೈ.ಕ. ಸಮಗ್ರ ಅಭಿವೃದ್ಧಿಗೆ ದೃಢ ಸಂಕಲ್ಪ: ಸಿಎಂ
Team Udayavani, Sep 18, 2018, 6:00 AM IST
ಕಲಬುರಗಿ: ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ “ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದರೆ ಅಭಿವೃದ್ಧಿಯಾಗಲ್ಲ. ಇದರ ಬದಲು ಬರುವ ಐದು ವರ್ಷಗಳಲ್ಲಿ ಈ ಭಾಗವನ್ನು ಸಮಗ್ರವಾಗಿ ಸರ್ವ ನಿಟ್ಟಿನಿಂದ ಅಭಿವೃದ್ಧಿ ಮಾಡುವ ದೃಢ ಸಂಕಲ್ಪ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ, ಖಾಲಿ ಹುದ್ದೆಗಳ ಭರ್ತಿ, ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುವ, ಶೈಕ್ಷಣಿಕ ವಲಯ ಸುಧಾರಣೆ ಸೇರಿದಂತೆ ಹತ್ತಾರು ನಿಟ್ಟಿನಲ್ಲಿ ಬದಲಾವಣೆ ತರುವ ಮೂಲಕ “ಕಲ್ಯಾಣ ಕರ್ನಾಟಕ’ ಮಾಡುವುದಾಗಿ ಹೇಳಿದರು.
ಎರಡು ದಿನದೊಳಗೆ ಹೈಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಈ ಭಾಗದ ಸಚಿವರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುವುದು. ಆ ಮೂಲಕ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಮಂಡಳಿಗೆ ನೀಡಿರುವ ಅನುದಾನ ಸಂಪೂರ್ಣ ಬಳಸಲು ಪ್ರಥಮಾಧ್ಯತೆ ನೀಡಲಾಗುವುದು. ಒಟ್ಟಾರೆ 9 ವಲಯಗಳನ್ನು ಅಭಿವೃದ್ಧಿಗೊಳಿಸುವ ನೀಲನಕ್ಷೆ ಹೊಂದಲಾಗಿದೆ ಎಂದರು.
ಮುಂದಿನ 8-10 ದಿನದೊಳಗೆ ಕಲಬುರಗಿಗೆ ಬಂದು ಎಲ್ಲ ಹಿರಿಯ ಅಧಿಕಾರಿಗಳು ಹಾಗೂ ಜನರೊಂದಿಗೆ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ದೃಢ ಸಂಕಲ್ಪ ಕೈಗೊಳ್ಳಲಾಗುವುದು. 371ನೇ ಜೆ ವಿಧಿ ಮೀಸಲಾತಿ ಲೋಪ ಸರಿಪಡಿಸುವುದರ ಜತೆಗೆ ಎಲ್ಲ ಇಲಾಖಾವಾರು ಸಭೆ ನಡೆಸಲಾಗುವುದು ಎಂದೂ ಸಿಎಂ ತಿಳಿಸಿದರು.
ಕಚೇರಿ ಸ್ಥಳಾಂತರ: ಕೆಲವು ಕಚೇರಿಗಳನ್ನು ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸುವ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. 10-15 ದಿನದೊಳಗೆ ಸಮಿತಿ ವರದಿ ಬರುವ ಸಾಧ್ಯತೆ ಇದೆ. ಆ ಬಳಿಕ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು. ಹೈ-ಕ ಭಾಗಕ್ಕೆ ಪ್ರತ್ಯೇಕ ನೇಮಕಾತಿ ಆಯೋಗವನ್ನು ರಚಿಸುವ ಕುರಿತೂ ಪ್ರಸ್ತಾವನೆಯಿದೆ. ಒಟ್ಟಾರೆ ಹೈ.ಕ ಭಾಗವನ್ನು ಬರುವ ಐದು ವರ್ಷಗಳಲ್ಲಿ “ಕಲ್ಯಾಣ ಕರ್ನಾಟಕ’ ಆಗಿ ಅಭಿವೃದ್ಧಿ ಮಾಡಲು ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕಾರ-ಸಲಹೆ ಅಗತ್ಯವಾಗಿದೆ ಎಂದರು.
ಸಂಪುಟ ಸಭೆ: ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದಿಲ್ಲ. ಆದರೆ ಈ ಭಾಗದ ಅಭಿವೃದ್ಧಿಪೂರಕ ನಿರ್ಣಯಗಳನ್ನು ಬೆಂಗಳೂರಿನಲ್ಲಿಯೇ ತೆಗೆದುಕೊಳ್ಳಲಾಗುವುದು. ಆದರೆ ಕಲಬುರಗಿಯಲ್ಲಿ ನಡೆಸಲಾಗುವ ಸಭೆಗೆ ಹಿರಿಯ ಅಧಿಕಾರಿಗಳನ್ನು ಜತೆಗೆ ಕರೆದುಕೊಂಡು ಬರಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಹೈಕ ಭಾಗಕ್ಕೆ 371ನೇ ಜೆ ವಿಧಿ ಜಾರಿಯಾಗಿದೆ ಎಂದು ಸಿಹಿ ಹಂಚಿ ಪಟಾಕಿ ಸಿಡಿಸಿದ್ದೀರಿ. ಆದರೆ ಈಗ ಜಾರಿಯಲ್ಲಿನ ಲೋಪ ದೋಷ ಸರಿಪಡಿಸಬೇಕಾಗಿದೆ. ಬಹುಮುಖ್ಯವಾಗಿ ಈ ಭಾಗ ಯಾಕೆ ಹಿಂದುಳಿದಿದೆ ಎಂಬುದನ್ನು ಹಾಗೂ ಮುಂದೆ ಯಾವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಹೆಜ್ಜೆ ಇಡಲಾಗುವುದು.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಂಗಳೂರು; ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ : ಸಿಎಂ ಬೊಮ್ಮಾಯಿ
ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು
ಸಿಎಂ ದಾವೋಸ್ ಪ್ರವಾಸ ಮೊಟಕು?; ಇಂದು ದಿಲ್ಲಿಗೆ ಹಠಾತ್ ಭೇಟಿ!
ಇಡೀ ದೇಶದಲ್ಲಿ ಕೃಷಿ ಭೂಮಿ ಸೈಟ್ ಗಳಾಗುತ್ತಿದೆ : ಸಚಿವೆ ಶೋಭಾ ಕರಂದ್ಲಾಜೆ ಆತಂಕ
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ : ಮೂರೂವರೆ ಗಂಟೆಗಳ ಹುಡುಕಾಟ