ಶಾಂತಾಬಾಯಿ-ಮೇಳಕುಂದಿಗೆ ಸಿಐಡಿ ತಲಾಶ್ : ಮುಖ್ಯಶಿಕ್ಷಕ ಕಾಶೀನಾಥ 2ನೇ ಬಾರಿ ಸಿಐಡಿ ವಶಕ್ಕೆ
Team Udayavani, May 15, 2022, 11:36 PM IST
ಕಲಬುರಗಿ : ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬರುತ್ತಿದ್ದಂತೆ ಸಿಐಡಿಯಿಂದ ಕಣ್ತಪ್ಪಿಸಿ ಕೊಂಡಿರುವ ಅಭ್ಯರ್ಥಿ ಶಾಂತಾಬಾಯಿ ಮತ್ತು ಆಕೆಯ ಪತಿ ಹಾಗೂ ಕಿಂಗ್‌ಪಿನ್ ಮಂಜುನಾಥ ಮೇಳಕುಂದಿಯ ಸಹೋದರ ರವೀಂದ್ರ ಮೇಳಕುಂದಿ ಅವರನ್ನು ಖೆಡ್ಡಾಕ್ಕೆ ಕೆಡವಲು ಸಿಐಡಿ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ.
ಕಳೆದೊಂದು ತಿಂಗಳಿನಿಂದ ತಲೆಮರೆಸಿಕೊಂಡಿರುವ ಈ ಇಬ್ಬರು ಸಿಕ್ಕಿಬಿಟ್ಟರೆ ಕಲಬುರಗಿಯ ಸಿಐಡಿ ವಿಚಾರಣೆ ಉಪಾಂತ್ಯಕ್ಕೆ ಬಂದು ತಲುಪುತ್ತದೆ. ಆದರೆ, ಇಬ್ಬರೂ ಸಿಗುತ್ತಿಲ್ಲ. ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಶಾಂತಾಬಾಯಿ ಪತಿ ಕೂಡ ಸಿಐಡಿಗೆ ಬೇಕಾಗಿದ್ದಾನೆ. ಆತನ ಸುಳಿವೂ ಇಲ್ಲ. ಆದರೆ, ಕೆಲವು ಮೂಲಗಳ ಪ್ರಕಾರ ಪಕ್ಕದ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜಾಮೀನು ಅರ್ಜಿ
ಶಾಂತಾಬಾಯಿ ಅಜ್ಞಾತ ಸ್ಥಳದಿಂದ ಜಾಮೀನಿಗೆ ಅರ್ಜಿ ಕೂಡ ಸಲ್ಲಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ. ಇದೆಲ್ಲವನ್ನು ಕಣ್ಣೆದುರಿಗೆ ಇಟ್ಟುಕೊಂಡು ನ್ಯಾಯಾಲಯದ ಬಂಧನ ವಾರೆಂಟ್ ಹೊರಡಿಸುವಲ್ಲಿ ಸಿಐಡಿ ಅಧಿಕಾರಿಗಳು ಸಫಲರಾಗಿದ್ದಾರೆ. ಇನ್ನೊಂದೆಡೆ ಆಸ್ತಿ ಮುಟ್ಟುಗೋಲಿನ ಚರ್ಚೆಯೂ ನಡೆದಿದೆ. ಹೇಗಾದರೂ ಮಾಡಿ ಇಬ್ಬರನ್ನೂ ಬಂಧಿಸಿ ವಿಚಾರಣೆ ಮಾಡಿದರೆ ಒಎಂಆರ್ ಮತ್ತು ಬ್ಲೂಟೂತ್ ಹಗರಣ ಒಂದು ಹಂತಕ್ಕೆ ಬಂದು ತಲುಪಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್ 126 ಪಾಸಿಟಿವ್ ವರದಿ, 103 ಮಂದಿ ಗುಣಮುಖ
ಕಾಶೀನಾಥ ಏಳು ದಿನ ಸಿಐಡಿ ವಶಕ್ಕೆ
ಆಚ್ಚರಿಯ ಬೆಳವಣಿಗೆ ಮತ್ತು ತನಿಖೆ ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಸಿಐಡಿ ಅಧಿಕಾರಿಗಳು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥನನ್ನು ಮತ್ತೆ ಶನಿವಾರ ವಶಕ್ಕೆ ಪಡೆದು ರವಿವಾರ 2ನೇ ಬಾರಿಗೆ ವಿಚಾರಣೆ ಆರಂಭಿಸಿದ್ದಾರೆ. ಎಂಎಸ್‌ಐ ಪದವಿ ಕಾಲೇಜಿನಲ್ಲಿ ನಡೆದಿರುವ ಹಗರಣದಲ್ಲೂ ಕಾಶೀನಾಥ ಕೈವಾಡ ಸ್ಪಷ್ಟವಾಗಿ ಕಂಡುಬಂದಿದೆ. ಅಲ್ಲೂ ಈತ ತನ್ನ ಪ್ರಭಾವ ಬೀರಿ ಅಭ್ಯರ್ಥಿಗಳ ಒಎಂಆರ್ ಶೀಟ್‌ನಲ್ಲಿ ಅಂಕ ಹೆಚ್ಚು ಮಾಡಲು ಪ್ರಯತ್ನಿಸಿದ್ದ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ 2ನೇ ಬಾರಿ ವಿಚಾರಣೆ ಎದುರಿಸುವಂತಾಗಿದೆ.