ಡಿ.11ರಿಂದ ಡಿಪಿಟಿ-ಟಿಡಿ ಲಸಿಕಾ ಕಾರ್ಯಕ್ರಮ
Team Udayavani, Nov 19, 2019, 10:33 AM IST
ಕಲಬುರಗಿ: ರಾಷ್ಟ್ರೀಯ ಪರಿಷ್ಕೃತ ಲಸಿಕಾ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಡಿ.11ರಿಂದ 31ರ ವರೆಗೆ ಡಿಫ್ಟಿರಿಯಾ ರೋಗದ ಡಿಪಿಟಿ ಮತ್ತು ಟಿಡಿ ಲಸಿಕೆ ನೀಡುವ ಆಂದೋಲನ ನಡೆಯಲಿದೆ. ಒಟ್ಟು 6,56,370 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಪಿಟಿ ಮತ್ತು ಟಿಡಿ ಲಸಿಕೆ ಶಾಲಾ ಮಕ್ಕಳ ಅಭಿಯಾನ ಕುರಿತು ನಡೆದ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 5ರಿಂದ 16 ವರ್ಷದೊಳಗಿನ ಪ್ರತಿಯೊಂದು ಮಗುವಿಗೆ ಲಸಿಕೆ ಹಾಕುವುದು ಕಡ್ಡಾಯವಾಗಿದೆ. 5ರಿಂದ 6 ವರ್ಷದೊಳಗಿನ 62368 ಮಕ್ಕಳಿಗೆ (ಒಂದನೇ ತರಗತಿ ವರೆಗೆ) ಡಿಪಿಟಿ ಲಸಿಕೆ 0.5 ಎಂ.ಎಲ್ ಹಾಗೂ 7ರಿಂದ 16 ವರ್ಷದೊಳಗಿನ 5,94,002 ಮಕ್ಕಳಿಗೆ (10ನೇ ತರಗತಿ ವರೆಗೆ) ಟಿಡಿ ಲಸಿಕೆ 0.5 ಎಂ.ಎಲ್ ಹಾಕಲಾಗುತ್ತದೆ. ಇದಕ್ಕಾಗಿ 386523 ಡಿಪಿಟಿ ಮತ್ತು 3579125 ಟಿಡಿ ಡೋಸ್ ಲಭ್ಯವಿದೆ ಎಂದರು. ಜಿಪಂ ಸಿಇಒ ಡಾ| ಪಿ. ರಾಜಾ ಮಾತನಾಡಿ, ಆಂದೋಲನ ಯಶಸ್ವಿಗೆ ಎಲ್ಲಾ ಅಧಿ ಕಾರಿಗಳು ಶ್ರಮಿಸಬೇಕು. ಸಹಕಾರ ನೀಡದ ಅ ಧಿಕಾರಿಗಳು ಹಾಗೂ ಶಾಲೆಗಳ ಮೇಲೆ ಶಿಸ್ತು ಕ್ರಮ ಅನಿವಾರ್ಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಮಾಧವರಾವ್ ಪಾಟೀಲ್, ಜಿಲ್ಲಾ ಸರ್ವೇಕ್ಷಣ ಅ ಧಿಕಾರಿ (ಡಬ್ಲೂ.ಎಚ್.ಒ) ಡಾ| ಅನಿಲಕುಮಾರ ತಾಳಿಕೋಟೆ ಮಾತನಾಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ| ಪ್ರಭುಲಿಂಗ ಆರ್. ಮಾನಕರ್, ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, ಸಿಡಿಪಿಒಗಳು ಸೇರಿದಂತೆ ವಿವಿಧ ಇಲಾಖೆಗಳ ಸಂಬಂಧಿಸಿದ ಅಧಿ ಕಾರಿಗಳು ಉಪಸ್ಥಿತರಿದ್ದರು.