ಚುನಾವಣೆ: ಜನಪ್ರತಿನಿಧಿಗಳ ಅಗ್ನಿ ಪರೀಕ್ಷೆ

Team Udayavani, Aug 3, 2018, 10:38 AM IST

ಕಲಬುರಗಿ: ಈಗಷ್ಟೇ ವಿಧಾನಸಭೆ ಚುನಾವಣೆ ಗುಂಗಿನಿಂದ ಹೊರ ಬಂದ ಶಾಸಕರಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಗ್ನಿ ಪರೀಕ್ಷೆಯಂತೆ ಎದುರಾಗಿದೆ. ಹೊಸದಾಗಿ ಆಯ್ಕೆಯಾದ ಶಾಸಕರಿಗಂತೂ
ಸವಾಲು ಎನ್ನುವಂತಾಗಿದ್ದು, ಚುನಾವಣೆ ಹೇಗೆ ಎದುರಿಸಬೇಕೆಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಜಿಲ್ಲೆಯ ಶಹಾಬಾದ ನಗರಸಭೆ, ಅಫಜಲಪುರ, ಆಳಂದ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ ಹಾಗೂ ಸೇಡಂ ಸೇರಿ ಒಟ್ಟಾರೆ ಆರು ಪುರಸಭೆಯ 169 ಸ್ಥಾನಗಳಿಗೆ ಆ. 29ರಂದು ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ರಾಜಕೀಯ
ಪಕ್ಷಗಳಲ್ಲಿ ನಿದ್ದೆಗೆಡಿಸುವಂತೆ ಮಾಡಿದೆ. 

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಈ ಎರಡು ಪಕ್ಷಗಳಿಗೆ ಹೊಸ ನಿಟ್ಟಿನ ಸವಾಲಾಗಿದ್ದರೆ ಪ್ರತಿಪಕ್ಷ ಬಿಜೆಪಿಗೂ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಮೂರು ಪಕ್ಷಗಳಿಗೆ ಒಂದಿಲ್ಲ ಒಂದು ನಿಟ್ಟಿನಲ್ಲಿ ಸವಾಲಾಗಿದೆ. ಹೀಗಾಗಿ ಈ ಚುನಾವಣೆಗೆ ಶಕ್ತಿ ಮೀರಿ ಶ್ರಮಿಸುವ ಮಟ್ಟಿಗೆ ಪರಿಸ್ಥಿತಿ ಬದಲಾವಣೆಯಾಗಿದೆ.

ಗೆದ್ದ ಪಕ್ಷವೊಂದು-ಅಧಿಕಾರಕ್ಕಾಗಿ ಮತ್ತೂಂದು: ಯಾವ ಪುರಸಭೆಯಲ್ಲಿ ಯಾರ್ಯಾರು ಆಡಳಿತಕ್ಕೆ ಇದ್ದಾರೆ ಎನ್ನುವ ಮಟ್ಟಿಗೆ ಪ್ರಸಕ್ತ ಆಡಳಿತದ ಅವಧಿಯಲ್ಲಿ ನಡೆದಿದೆ. ಅಂದರೆ ಪಕ್ಷಾಂತರಕ್ಕೆ ಲಂಗು ಲಗಾಮು ಇಲ್ಲ ಎನ್ನುವಂತೆ ಆಗಿದೆ.
ಹೀಗಾಗಿ ಶಾಸಕರ ಹಾಗೂ ಆ ಕ್ಷೇತ್ರದ ಮಾಜಿ ಶಾಸಕರ ಜತೆಗೆ ಮುಖಂಡರ ಬೆಂಬಲಿಗರು ಎಷ್ಟು ಎಂದು ನಿಖರವಾಗಿ ಹೇಳದಂತಾಗಿದೆ. ಗೆದಿದ್ದು ಒಂದು ಪಕ್ಷವಾದರೆ ಅಧಿಕಾರಕ್ಕಾಗಿ ಮತ್ತೂಂದು ಪಕ್ಷಕ್ಕೆ ಪಕ್ಷಾಂತರವಾಗಿದ್ದೇ ಹೆಚ್ಚು. ಒಂದು ಅಂದಾಜಿನ ಪ್ರಕಾರ ಕಳೆದ ಚುನಾವಣೆಯಲ್ಲಿ ಗೆದ್ದ ಪಕ್ಷವೊಂದನ್ನು ಸುಮಾರು ಅರ್ಧಕ್ಕಿಂತಲೂ ಹೆಚ್ಚಿನ
ಸದಸ್ಯರು ಆಯ್ಕೆಗೊಂಡ ಪಕ್ಷದಿಂದ ದೂರ ಸರಿದಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಗೆದ್ದ ಪಕ್ಷ ಬಿಟ್ಟು ಮತ್ತೂಂದು ಪಕ್ಷಕ್ಕೆ ಸೇರ್ಪಡೆಯಾದರೂ ಯಾರೊಬ್ಬರ ವಿರುದ್ಧವೂ ಪಕ್ಷಾಂತರ ನಿಷೇಧ ದೂರು ಸಲ್ಲಿಕೆಯಾಗಿಲ್ಲ. ಇದನ್ನು ನೋಡಿದರೆ ಹೊಂದಾಣಿಕೆ ರಾಜಕೀಯ ಬಲವಾಗಿದೆ ಎಂಬುದನ್ನು ನಿರೂಪಿಸುತ್ತದೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನಿಷ್ಠೆಯಾಗಿ ದುಡಿದಿದ್ದ ಕಾರ್ಯಕರ್ತರು ಸ್ಥಳೀಯ ಸಂಸ್ಥೆಯ ಈ ಚುನಾವಣೆಯಲ್ಲಿ ಸ್ಪರ್ಧಾ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಯಾರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂಬುವುದೇ ಶಾಸಕರಿಗೆ ಸವಾಲಾಗಿದೆ. ಹೀಗಾಗಿ ಹಗ್ಗದ ಮೇಲಿನ ನಡಿಗೆ ಎನ್ನುವಂತಾಗಿದೆ.

 ಚಟುವಟಿಕೆ ಶುರು: ಗುರುವಾರ ಸ್ಥಳೀಯ ಸಂಸ್ಥೆಗಳ ಚುನಾವ ಣೆ ಪ್ರಕಟವಾಗುತ್ತಿದ್ದಂತೆರಾಜಕೀಯ ಪಕ್ಷಗಳು ಹಾಗೂ ಸ್ಪರ್ಧಾ ಆಕಾಂಕ್ಷಿಗಳಲ್ಲಿ ಚಟುವಟಿಕೆ ಆರಂಭವಾಗಿದೆ. ತಮಗೆ ಟಿಕೆಟ್‌ ನೀಡಿದರೆ ಅನುಕೂಲವಾಗುತ್ತದೆ ಎಂಬುದಾಗಿ ತಮ್ಮ ಮುಖಂಡರ ಮೇಲೆ ಒತ್ತಡ ಹಾಕುತ್ತಿರುವುದು ವರದಿಯಾಗಿದೆ. ಕೆಲವೊಂದು ಸ್ಥಾನಗಳಲ್ಲಿ ಮೀಸಲಾತಿ ಬದಲಾಗಿರುವುದು ಚರ್ಚೆ ನಡೆಯುತ್ತಿದೆ. ಆಯಾ ಕ್ಷೇತ್ರದ ಶಾಸಕರ ಒತ್ತಡ ಮೇರೆಗೆ ಬದಲಾಗಿದೆ ಎನ್ನಲಾಗುತ್ತಿದೆ. ಇದನ್ನೆಲ್ಲ ನೋಡಿದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವು ಈಗಾಗಲೇ ಮೂಡಿದೆ ಎಂಬುದನ್ನು ನಿರೂಪಿಸುತ್ತ¨

ಸ್ಥಳೀಯ ಸಮಸ್ಯೆಗಳು ಹಾಗೂ ಪರಿಸ್ಥಿತಿ ಅನುಗುಣ ಆಧಾರದ ಮೇಲೆ ಈ ಚುನಾವಣೆಗಳು ನಡೆಯುತ್ತವೆ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಸಹಜವಾಗಿ ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ತಮ್ಮ ಮೇಲೂ ಒತ್ತಡ ಇದ್ದೇ ಇರುತ್ತದೆ. ಸ್ಥಳೀಯವಾಗಿ ಕೆಲವೊಂದು ಸೀಟುಗಳಿಗೆ ಹೊಂದಾಣಿಕೆ ನಡೆದರೆ ನಡೆಯಬಹುದು. ಅದನ್ನೆಲ್ಲ ಈಗಲೇ ಹೇಳಲಿಕ್ಕಾಗದು. ಒಟ್ಟಾರೆ ಸ್ಥಳೀಯ ಸಂಸ್ಥೆಗಳ ಈ ಚುನಾವಣೆ ಹೊಂದಾಣಿಕೆ ಕುರಿತ ವಿಷಯ ರಾಜ್ಯಮಟ್ಟದ ನಾಯಕರಿಗೆ ಬಿಟ್ಟಿದ್ದು. 
 ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಕಲಬುರಗಿ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಮತದಾರರ ಪಟ್ಟಿಯತ್ತ ಗಮನ ಹರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪಕ್ಷದ ಜಿಲ್ಲಾ ಘಟಕದ ಸಭೆ ಕರೆದು ಶಾಸಕರ ಹಾಗೂ ಪಕ್ಷದ
ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಏಕಾಂಗಿಯಾಗಿ ಜಿಲ್ಲೆಯ ಎಲ್ಲ ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ.
 ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಧ್ಯಕ್ಷರು, ಜಿಲ್ಲಾ ಬಿಜೆಪಿ, ಕಲಬುರಗಿ 

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇವಿಎಂ ಯಂತ್ರಗಳನ್ನು
ಆಯಾ ತಹಶೀಲ್ದಾರ್‌ರಿಗೆ ಕಳುಹಿಸಿ ಕೊಡಲಾಗಿದ್ದು, ಸ್ಟ್ರಾಂಗ್‌ ರೂಂನಲ್ಲಿಡಲಾಗಿದೆ. ಒಟ್ಟಾರೆ 760 ಇವಿಎಂ ಯಂತ್ರಗಳನ್ನು ತರಿಸಿ ಪರೀಕ್ಷಿಸಲಾಗಿದೆ. ಮುಖ್ಯವಾಗಿ ಆಯಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ, ಎಂಸಿಸಿ ತಂಡ ಸೇರಿದಂತೆ ಇತರ ತಂಡಗಳನ್ನು ರಚಿಸಲಾಗಿದೆ. 
 ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ

ಚುನಾವಣೆಗಾಗಿ ಜೆಡಿಎಸ್‌ ಅಗತ್ಯ ಸಿದ್ಧತೆಗಳನ್ನು ಚರ್ಚಿಸಲು 5ರಂದು ಸಭೆ ಕರೆದಿದೆ. ಈ ಸಭೆಯಲ್ಲಿ ಶಕ್ತಿಗನುಸಾರವಾಗಿ ಹಾಗೂ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಲಾಗುವುದು. ಹೊಂದಾಣಿಕೆ ಮಾಡಿಕೊಳ್ಳುವ ವಿಚಾರ ಪಕ್ಷದ ರಾಜ್ಯ ನಾಯಕರಿಗೆ ಬಿಟ್ಟಿದ್ದು. ಅವರ ನಿರ್ದೇಶನ ಹಾಗೂ ಸೂಚನೆಯಂತೆ ನಡೆದುಕೊಳ್ಳಲಾಗುವುದು. 
 ಬಸವರಾಜ ತಡಕಲ್‌, ಅಧ್ಯಕ್ಷರು, ಜಿಲ್ಲಾ ಜೆಡಿಎಸ್‌

„ಹಣಮಂತರಾವ ಭೈರಾಮಡಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ