ಕಾಳಗಿ ಗ್ರಂಥಾಲಯಕ್ಕೆ ಅಜ್ಜಿಯೇ ಮೇಲ್ವಿಚಾರಕಿ

Team Udayavani, Nov 5, 2019, 11:49 AM IST

ಕಾಳಗಿ: ಪಟ್ಟಣದಲ್ಲಿರುವ ಗ್ರಾಪಂ ಗ್ರಂಥಾಲಯ ಹೆಸರಿಗಷ್ಟೇ ಇದ್ದಂತೆ ಕಾಣುತ್ತಿದೆ. ಓದುಗರಿಗೆ ಸಮಯಕ್ಕೆ ಸರಿಯಾಗಿ ಪುಸ್ತಕಗಳು ಸಿಗುತ್ತಿಲ್ಲ. ದಿನ ಪತ್ರಿಕೆಗಳೇ ಗತಿಯಾಗಿದ್ದು, ಇಂತಹ ಗ್ರಂಥಾಲಯಕ್ಕೆ ಅಜ್ಜಿಯೇ ಗ್ರಂಥ ಮೇಲ್ವಿಚಾರಕಿ.

ಪಟ್ಟಣದಲ್ಲಿ 1989ರಲ್ಲಿ ಗ್ರಾಮೀಣ ಗ್ರಂಥಾಲಯದಿಂದ ಪ್ರಾರಂಭವಾಗಿದೆ. ನಂತರದಲ್ಲಿ ಮಂಡಲ ಗ್ರಂಥಾಲಯವಾಗಿ, ಸದ್ಯ ಗ್ರಾಪಂ ಗ್ರಂಥಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಎರಡು ಕೋಣೆಗಳ ಚಿಕ್ಕ ಕಟ್ಟಡ ಹೊಂದಿದೆ. ಒಂದು ಕೋಣೆಯಲ್ಲಿ ಪುಸ್ತಕಗಳಿದ್ದರೆ, ಇನ್ನೊಂದು ಓದುಗರಿಗಾಗಿ ಇದೆ. ಕಿಟಕಿಗಳು ಕಿತ್ತು ಹೋಗಿವೆ. ಬಾಗಿಲು ಮುರಿದಿದ್ದು, ತಗಡಾದಿಂದ ರಿಪೇರಿ ಮಾಡಲಾಗಿದೆ. ಮಳೆ ಬಂದರೆ ಕಟ್ಟಡ ಸೊರುತ್ತದೆ. ಗ್ರಂಥಾಲಯದಲ್ಲಿ 4-5 ಸಾವಿರ ಪುಸ್ತಗಳಿವೆ. 450 ಓದುಗ ಸದಸ್ಯರನ್ನು ಹೊಂದಿದೆ. ಪ್ರತಿ ತಿಂಗಳು 400 ರೂ. ಮಾತ್ರ ಪತ್ರಿಕೆ ಬಿಲ್‌ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಬರುತ್ತದೆ.

ಇದನ್ನು ಬಿಟ್ಟರೇ ಮತ್ತೇ ಯಾವ ಅನುದಾನ ಬರುವುದಿಲ್ಲ. ದಿನನಿತ್ಯ ನಾಲ್ಕು ಕನ್ನಡ ದಿನಪತ್ರಿಕೆಗಳು ಬರುತ್ತವೆ. ಸ್ಥಳೀಯ ಪತ್ರಿಕೆ ಏಜೆಂಟರ ಮನವೊಲಿಸಿ ಒಂದು ಪತ್ರಿಕೆಗೆ 100 ರೂ. ಬಿಲ್‌ ನೀಡುತ್ತೇನೆ. ಇವುಗಳು ಬಿಟ್ಟರೆ ಮತ್ಯಾವ ವಾರಪತ್ರಿಕೆ, ಮಾಸಪತ್ರಕೆ, ಬರುವುದಿಲ್ಲ ಎನ್ನುತ್ತಾರೆ ಗೌರವಧನದ ಗ್ರಂಥಾಲಯ ಮೇಲ್ವಿಚಾರಕ ಶಿವಶರಣಪ್ಪ ಹೊಸಮನಿ.

ಗ್ರಂಥಾಲಯಕ್ಕೆ ಬಂದಿರುವ ಪುಸ್ತಕ, ಟೇಬಲ್‌, ಕುರ್ಚಿ, ರ್ಯಾಕ್ಸ್‌ ಇಡಲು ಸ್ಥಳವಿಲ್ಲ. ಕೆಲ ಪುಸ್ತಕಗಳ ಗಂಟು ಇನ್ನೂ ಬಿಚ್ಚಿಲ್ಲ. ಕುರ್ಚಿ, ರ್ಯಾಕ್ಸ್‌ಗಳು ಅರ್ಧ ಸ್ಥಳ ಹಿಡಿದುಕೊಂಡಿವೆ. ನಾಲ್ಕು ಜನ ಓದುಗರು ಗ್ರಂಥಾಲಯಕ್ಕೆ ದಿನಪತ್ರಿಕೆ ಓದಲು ಬಂದರೆ ಐದನೆಯವರು ಹೊರಗಡೆ ನಿಲ್ಲುವಂತ ಇಕ್ಕಟ್ಟಿನ ಸ್ಥಿತಿ ಇಲ್ಲಿಯದ್ದಾಗಿದೆ.

ಪದವಿ, ಪಿಯು, ಪ್ರೌಢಶಾಲೆ ನೂರಾರು ವಿದ್ಯಾರ್ಥಿಗಳು ಹಾಗೂ ಓದುಗರು ಇದ್ದಾರೆ. ಅವರು ಗ್ರಂಥಾಲಯಕ್ಕೆ ಓದಲು ಬಂದರೆ ಅಲ್ಲಿ ನಾಲ್ಕು ಕನ್ನ ದಿನಪತ್ರಿಕೆ ಬಿಟ್ಟರೆ ಯಾವುದೇ ಮಾಸಪತ್ರಿಕೆಗಳು ಸಿಗುವುದಿಲ್ಲ. ದಿನನಿತ್ಯ ಮೇಲ್ವಿಚಾರಕನ ಬದಲು ಒಬ್ಬ ಅಜ್ಜಿ ಇರುತ್ತಾಳೆ. ಬೆಳಗ್ಗೆ 9:00ರಿಂದ 11:00ರ ವರೆಗೆ ಮಾತ್ರ ಗ್ರಂಥಾಲಯ ತೆರೆದಿರುತ್ತೆ ಮತ್ತೆ ಸಂಜೆ 4:00ಕ್ಕೆ ಬೀಗ ತೆರೆಯುವುದೇ ಇಲ್ಲ. ಮೇಲ್ವಿಚಾರಕ ವಾರಕ್ಕೆ 2-3 ಬಾರಿ ಮಾತ್ರ ಗ್ರಂಥಾಲಯಕ್ಕೆ ಬರುತ್ತಾರೆ. ನಮಗೆ ಪುಸ್ತಕ ಬೇಕಾದರೆ ಮೊಬೈಲ್‌ ಕರೆ ಮಾಡಿ ಕಾದು ಕುಳಿತು ಪುಸ್ತಕ ತೆಗೆದುಕೊಳ್ಳಬೇಕು. ಇಲ್ಲಿ ನಮಗೆ ಅಗತ್ಯವಿರುವ ಸ್ಪರ್ಧಾತ್ಮಕ ಪುಸ್ತಕ ಸಿಗುವುದಿಲ್ಲ. ಹೆಸರಿಗೆ ಮಾತ್ರ ಇದು ಗ್ರಂಥಾಲಯವಾಗಿದೆ ಪುಸ್ತಗಳೆ ಸಿಗುವುದಿಲ್ಲ ಎಂದು ಓದುಗರು ಬೇಸರ ವ್ಯಕ್ತಪಡಿಸಿದರು.

ಕಾಳಗಿ ನೂತನ ತಾಲೂಕು ಕೇಂದ್ರವಾಗಿ ಉದ್ಘಾಟನೆಯಾಗಿ ಎರಡು ವರ್ಷ ಕಳೆಯುತ್ತಿದೆ. ಗ್ರಾಪಂ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತಿಯಾಗಿದೆ. ಆದರೆ ಗ್ರಾಪಂ ಗ್ರಂಥಾಲಯ ಮಾತ್ರ ಮೇಲ್ದರ್ಜೆಗೇರದೆ ಯತಾಸ್ಥಿಯಲ್ಲಿದೆ. ಗ್ರಂಥಾಲಯಕ್ಕಾಗಿಯೇ ಪಟ್ಟಣದ ಭರತನೂರ ಮಾರ್ಗದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿ ಸುಮಾರು ಒಂದು ವರ್ಷವಾಗುತ್ತಿದೆ.

ಆದರೆ ಗ್ರಂಥಾಲಯ ಮಾತ್ರ ಸ್ಥಳಾಂತರಗೊಂಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ನೂತನ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಿಸಿ ತಾಲೂಕು ಮಟ್ಟದ ಶಾಖಾ ಗ್ರಂಥಾಲಯವಾಗಿ ಮೇಲ್ದರ್ಜೆಗೇರಿಸಿದರೆ ಅನುಕೂಲವಾಗಲಿದೆ ಎಂಬುದು ಓದುಗರ ಅಭಿಪ್ರಾಯ.

ತಾಲೂಕು ಕೇಂದ್ರವಾಗಿರುವ ಕಾಳಗಿ ಪಟ್ಟಣದಲ್ಲಿ 3 ಪದವಿ ಕಾಲೇಜು, 5 ಪಿಯು ಕಾಲೇಜು, ಪಾಲಿಟೆಕ್ನಿಕ್‌ ಕಾಲೇಜು ಹಾಗೂ ಅನೇಕ ಪ್ರೌಢಶಾಲೆಗಳಿವೆ. ಇಲ್ಲಿಗೆ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಅಗತ್ಯ ಪಠ್ಯಪುಸ್ತಗಳನ್ನು ಒದಗಿಸುವುದು ಇಲ್ಲಿನ ಗ್ರಂಥಾಲಯದ ಜವಾಬ್ದಾರಿಯಾಗಿದೆ. ಆದರೆ ಇಲ್ಲಿನ ಗ್ರಂಥಾಲಯ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದೂ ಇಲ್ಲದಂತಾಗಿದೆ. ಓದುವ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗುತ್ತಿದೆ. -ಭೀಮರಾಯ ಮಲಘಾಣ, ಓದುಗ

 

-ಭೀಮರಾಯ ಕುಡ್ಡಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ