ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ
7500 ಬಾಳೆ ಗಿಡಗಳು ಗೊನೆ ಬಿಟ್ಟಿದ್ದು, ಪ್ರತಿ ಗಿಡ ಸರಾಸರಿ 30ಕೆ.ಜಿಯ ತೂಕದ ಗೊನೆ ಹೊಂದಿದೆ.
Team Udayavani, Sep 26, 2022, 6:04 PM IST
ಆಳಂದ: ಹಳದಿ ಕಲ್ಲಂಗಡಿ ಬೆಳೆದು ಗಮನ ಸೆಳೆದಿದ್ದ ತಾಲೂಕಿನ ಕೊರಳ್ಳಿ ಗ್ರಾಮದ ಯುವ ರೈತ ಬಸವರಾಜ ಎಸ್. ಪಾಟೀಲ ಈಗ ತಾಂತ್ರಿಕತೆ ಅಳವಡಿಸಿ ಬೆಳೆದ ಬಾಳೆಗೊನೆಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದಾರೆ. ಒಟ್ಟು 25 ಎಕರೆ ಪ್ರದೇಶದ ಪೈಕಿ 17 ಎಕರೆಯಲ್ಲಿ ಬಾಳೆ ಬೆಳೆಯಲಾಗಿದೆ. ಈ ಪೈಕಿ ಸದ್ಯ ಏಳು ಎಕರೆ ಬೆಳೆ ವಿದೇಶಕ್ಕೆ ಹಾಗೂ 10 ಎಕರೆಯಲ್ಲಿ ಬೆಳೆದ ಬಾಳೆಯನ್ನು ಸ್ಥಳೀಯ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ.
17 ಎಕರೆ ಪ್ರದೇಶದಲ್ಲಿ ಹಂತಹಂತವಾಗಿ ಬಾಳೆ ಕೈಗೆ ಬರತೊಡಗಿದೆ. ಜಿ-9 ತಳಿಯ ಬಾಳೆಯನ್ನು ಆಧುನಿಕ ಪದ್ಧತಿ ಅನುಸರಿಸಿ ಸಾಲಿನಿಂದ ಸಾಲಿಗೆ ಏಳು ಅಡಿ, ಗಿಡದಿಂದ ಗಿಡಕ್ಕೆ ಐದು ಅಡಿ ಅಂತರಕ್ಕೆ ನಾಟಿ ಮಾಡಲಾಗಿದೆ. ಜತೆಗೆ ಹನಿ ನೀರಾವರಿ ಮಲ್ಚಿಂಗ್ ಶೀಟ್ ಆಳವಡಿಸಿ ನಿರ್ವಹಣೆ ಮತ್ತು ಕಳೆ ನಿರ್ವಹಣೆಗೂ ಪೂರಕವಾಗುವಂತೆ ಮಾಡಿ ಖರ್ಚಿನ ಉಳಿತಾಯ ಮಾಡಿದ್ದಾರೆ. ಅಲ್ಲದೇ ಮಿಶ್ರ ಬೆಳೆಯಾಗಿ ಹಳದಿ ಕಲ್ಲಗಂಡಿ ಬೆಳೆದು ಏಳು ಲಕ್ಷ ರೂ. ಆದಾಯ ಪಡೆದಿದ್ದಾರೆ.
ಬೆಳೆ ನಿರ್ವಹಣೆಗೆ ಕಾಲ ಕಾಲಕ್ಕೆ ಬೇಕಾದ ಔಷಧ, ರಸಗೊಬ್ಬರ, ಕೀಟನಾಶಗಳ ಜತೆಗೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಮತ್ತು ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಕಂಪನಿ ಬಳಿ ತಾಂತ್ರಿಕ ಮಾಹಿತಿ, ಸಲಹೆ ಪಡೆಯಲಾಗುತ್ತಿದೆ.
ಬಾಳೆ ಬೆಳೆದು ದೊಡ್ಡದಾದ ಮೇಲೆ ನೈಸರ್ಗಿಕವಾಗಿ ಕಳೆದ ಸಾಲಿನಲ್ಲಿ ಗಾಳಿ-ಬಿರುಗಾಳಿಗೆ ಅಡ್ಡಬಿದ್ದು ಹಾನಿಯಾಗಿದ್ದನ್ನು ಮನಗಂಡು ಈ ಬಾರಿ ಗೊನೆ ತುದಿಯನ್ನು ಬಾಳೆಯ ಕಾಂಡಕ್ಕೆ ದಾರದಿಂದ ಹತ್ತಿರವಾಗಿ ಕಟ್ಟಿದ್ದಾರೆ. ಗೊಂಚಲು ಕಟಾವಿಗೆ ಬರುವ ಹೊತ್ತಿನಲ್ಲಿ ಬಾಳೆಗೆ ಖಾಸಗಿ ಕಂಪನಿ ತಜ್ಞರ ಮಾರ್ಗದರ್ಶನದಂತೆ ಪೋಷಕಾಂಶ ಸಿಂಪಡಿಸಿದ್ದರಿಂದ ಅತ್ಯುತ್ತಮ ಮತ್ತು ಗುಣಮಟ್ಟದ ಕಾಯಿಕಟ್ಟಿವೆ. ಪರಿಣಾಮ ಈ ಬಾಳೆಯನ್ನು ರಫ್ತು ಮಾಡಲು ಸೊಲ್ಲಾಪುರದ ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ.
ಪ್ರತಿ ಕೆಜಿಗೆ 20ರೂ.ಗಳಂತೆ ದರ ನಿಗದಿ ಮಾಡಿ ಎಕರೆ ಗುಣಮಟ್ಟದ್ದು ರಫ್ತು ಹಾಗೂ 10 ಎಕರೆ ಸ್ಥಳೀಯ ಮಾರುಕಟ್ಟೆ ಪೂರೈಸುತ್ತಿದ್ದಾರೆ. ಸರಾಸರಿ ಆರು ಎಕರೆಗೆ ನೋಡುವುದಾದರೆ, 7500 ಬಾಳೆ ಗಿಡಗಳು ಗೊನೆ ಬಿಟ್ಟಿದ್ದು, ಪ್ರತಿ ಗಿಡ ಸರಾಸರಿ 30ಕೆ.ಜಿಯ ತೂಕದ ಗೊನೆ ಹೊಂದಿದೆ.
ಗಿಡವೊಂದಕ್ಕೆ ಕನಿಷ್ಟ 500ರೂ, 550ರೂ. ಹೀಗೆ 7500 ಗಿಡದಿಂದ ಸುಮಾರು 35ಲಕ್ಷ ರೂ. ಲಾಭ ನಿರೀಕ್ಷಿಸಿರುವ ರೈತ ಪ್ರತಿ ಗಿಡಕ್ಕೆ 80ರಿಂದ 100ರೂ.ದಂತೆ ಖರ್ಚು ಮಾಡಿದ್ದಾರೆ. ಆದರೆ ಸ್ಥಳೀಯ ಮಾರುಕಟ್ಟೆಗೆ ಸಾಗಿಸುವ ಬಾಳೆಗೆ ಕೆಜಿಗೆ 10ರಿಂದ 11ರೂ. ಮಾತ್ರ ಬೆಲೆ ದೊರಕುತ್ತದೆ.
ರೈತ ಬಸವರಾಜ ಪಾಟೀಲ ಹಳದಿ ಕಲ್ಲಂಗಡಿ ಬೆಳೆದು ಜಿಲ್ಲಾ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಹೊಸ ತಂತ್ರಜ್ಞಾನ ಅಳವಡಿಸುವಲ್ಲಿ ಮುಂದಿದ್ದಾರೆ. ಇದರ ಫಲವಾಗಿ ರಫ್ತಿನ ಗುಣಮಟ್ಟದ ಬಾಳೆ ಉತ್ಪಾದಿಸಿ ಹೆಚ್ಚಿನ ಬೆಲೆ ಪಡೆದು ಇತರ ಬಾಳೆ ಬೆಳೆಯುವ ರೈತರಿಗೆ ಮಾದರಿಯಾಗಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ನಾಲ್ಕು ಎಕರೆ ಪ್ರದೇಶಕ್ಕೆ ಆಗುವಷ್ಟು ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.
ಶಂಕರಗೌಡ ಪಾಟೀಲ, ಸಹಾಯಕ ತೋಟಗಾರಿಕೆ ಹಿರಿಯ ನಿರ್ದೇಶಕ, ಆಳಂದ
ಒಟ್ಟು 25 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆಗೆ ಹನ್ನೊಂದು ಲಕ್ಷ ರೂ. ಖರ್ಚಾಗಿದೆ. ಕಳೆದ ಬಾರಿ ಬಾಳೆ ಗೊನೆ ಮುರಿದು ಹಾನಿಯಾದರೂ ಈ ಬಾರಿ ಬಿಡದೆ ಟೆಂಬೋಣಿ ಹಾಗೂ ರಫ್ತು ಮಾಡುವರ ಸಲಹೆ ಪಡೆದು ಯಶಸ್ವಿಯಾಗಿದ್ದೇನೆ.
ಬಸವರಾಜ ಪಾಟೀಲ,
ರೈತ ಕೊರಳ್ಳಿ
ಮಹಾದೇವ ವಡಗಾಂವ