ಕೆರೆ ನಿರ್ಮಾಣ ಕಾರ್ಯಕ್ಕೆಗ್ರಾಮಸ್ಥ ರಿಂದಲೇ ಚಾಲನೆ
Team Udayavani, Jan 4, 2020, 11:31 AM IST
ಯಡ್ರಾಮಿ: ಪಟ್ಟಣದ ಬಹುದಿನದ ಬೇಡಿಕೆಗಳಲ್ಲಿ ಒಂದಾದ ಕೆರೆ ನಿರ್ಮಾಣ ಕಾರ್ಯಕ್ಕೆ ಸ್ವತಃ ಗ್ರಾಮಸ್ಥರೇ ಯೋಜನೆ ರೂಪಿಸಿಕೊಂಡು, ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ತಹಶೀಲ್ದಾರ್ ಬಸಲಿಂಗಪ್ಪ ನೈಕೋಡಿ ಗುದ್ದಲಿ ಪೂಜೆ ನೆರವೇರಿಸಿದರು.
ಯಡ್ರಾಮಿಯಿಂದ ಕೋಣಶಿರಸಗಿ ರಸ್ತೆಯಲ್ಲಿರುವ ಮಾದಳ್ಳದ ದಂಡೆಯಲ್ಲಿನ ಭೂಮಿಯಲ್ಲಿ ಗ್ರಾಮಸ್ಥರೇ ಕೆರೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡರು. ಪಟ್ಟಣಕ್ಕೆ ಮೊದಲಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಶೇ. 90ರಷ್ಟು ಭೂಮಿ ಮಳೆಯಾಶ್ರಿತ ಕೃಷಿ ಪದ್ಧತಿಗೆ ಹೊಂದುವಂತದ್ದು. ಸಾವಿರಾರು ಅಡಿಗಳಷ್ಟು ಆಳವಾಗಿ ಕೊಳವೆ ಬಾವಿ ಕೊರೆದರೂ ತೊಟ್ಟು ನೀರು ಬರುತ್ತಿಲ್ಲ. ಈ ಕುರಿತು ಜನಪ್ರತಿನಿಧಿ ಗಳ ಗಮನಕ್ಕೆ ತಂದು, ಕೆರೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಬೇಸಿಗೆ ಬಂತೆಂದರೆ ದನಕರುಗಳಿಗೆ ಕುಡಿಯಲು ನೀರು ಸಿಗದಂತಾಗುತ್ತಿದೆ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನ್ನುವುದನ್ನು ಅರಿತ ನಾವು ಸ್ವತಃ ಖರ್ಚು ಭರಿಸಿ ಸುಮಾರು ನಾಲ್ಕು ಎಕರೆ ಜಾಗದಲ್ಲಿ ಕೆರೆ ನಿರ್ಮಾಣ ಮಾಡಲು ತೀರ್ಮಾನ ಕೈಗೊಂಡೆವು ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.
ತಹಶಿಲ್ದಾರ್ ಬಸಲಿಂಗಪ್ಪ ನೈಕೋಡಿ, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಸುರೇಶ ಡಂಬಳ, ಗ್ರಾ.ಪಂಉಪಾಧ್ಯಕ್ಷ ಈರಣ್ಣ ಸುಂಕದ, ಪಿಡಿಒ ಬಾಬುಗೌಡ ಪಾಟೀಲ ಕುರುಳಗೇರಾ, ಎನ್.ಆರ್. ಪಾಟೀಲ, ಮಲ್ಹಾರಾವ್ ಕುಲಕರ್ಣಿ, ಅಬ್ದುಲ್‌ರಜಾಕ್ ಮನಿಯಾರ ಇನ್ನಿತರರು ಇದ್ದರು