ಇತಿಹಾಸ ತಿರುಚುವುದನ್ನು ಬಿಡಿ: ಪ್ರಿಯಾಂಕ್‌

Team Udayavani, Nov 11, 2018, 11:58 AM IST

ಕಲಬುರಗಿ: ಬ್ರಿಟಿಷರನ್ನೇ ನಡುಗಿಸಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ದೇಶ ಕಂಡ ಮಹಾನ್‌ ಯುದ್ಧ ನೀತಿ ನಿಪುಣ. ಟಿಪ್ಪು ಮರಣ ಹೊಂದಿದ್ದು ಹಿಂದೂಗಳ ವಿರುದ್ಧದ ಹೋರಾಟದಲ್ಲಿ ಅಲ್ಲ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ. ಹೀಗಾಗಿ ಇತಿಹಾಸದ ಪುಟಗಳನ್ನು ತಿರುಚುವ ಕೆಲಸ ಬಿಟ್ಟು ಇತಿಹಾಸ ಓದಿ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ
ಪಾಲಿಕೆ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಿಟಿಷರು 200 ವರ್ಷಕ್ಕಿಂತ ಹೆಚ್ಚು ವರ್ಷ ಆಳ್ವಿಕೆ ಮಾಡಿದ ವೇಳೆ ದೇಶದ
ಇತಿಹಾಸ ಪುಟದಲ್ಲಿ ಅನೇಕ ಮಹಾನ್‌ ನಾಯಕರ ಹೆಸರುಗಳಿವೆ. ಅದೇ ರೀತಿ ಬ್ರಿಟಿಷರ ಇತಿಹಾಸ ಪುಟದಲ್ಲೂ ಟಿಪ್ಪು ಸುಲ್ತಾನ್‌ ಹೆಸರು ದಾಖಲಾಗಿದೆ. ಲಂಡನ್‌ನ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪು ಅವರದ್ದೇ ಪ್ರತ್ಯೇಕ ವಿಭಾಗವಿದೆ. 
ಬೇಕಾದರೆ ಬಿಜೆಪಿಯುವರು ಲಂಡನ್‌ಗೆ ಹೋಗಿ ನೋಡಿಕೊಂಡು ಬರಲಿ ಎಂದು ಸವಾಲು ಹಾಕಿದರು.

ಒಬ್ಬ ಮಹಾನ್‌ ಯುದ್ಧ ನೀತಿ ನಿಪುಣನಾಗಿದ್ದ ಟಿಪ್ಪು ರಾಕೇಟ್‌ ಬಳಕೆ ಮಾಡಿದ ದೇಶದ ಪ್ರಥಮ ರಾಜ. ಪಾಶ್ಚಿಮಾತ್ಯ ರಾಷ್ಟ್ರಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಂದೇ ಅಳವಡಿಸಿಕೊಂಡಿದ್ದರು. ಟಿಪ್ಪು ಸುಲ್ತಾನ್‌ನನ್ನು ಕಂಡರೆ ಬ್ರಿಟಿಷರೇ ಹೆದರುತ್ತಿದ್ದರು. 14ನೇ ವಯಸ್ಸಿಗೆ ಯುದ್ಧ ಭೂಮಿಗೆ ಇಳಿದಿದ್ದ ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳಲ್ಲಿ ಹೋರಾಡಿದ ಏಕೈಕ ದೊರೆ. ಯುದ್ಧದಲ್ಲಿ ಟಿಪ್ಪು ಮಡಿದ ಸುದ್ದಿ ತಿಳಿದು ಇಡೀ ಬ್ರಿಟಿಷ್‌ ಸರ್ಕಾರವೇ ಸಂಭ್ರಮಿಸಿತ್ತು. ಟಿಪ್ಪು ಸುಲ್ತಾನ್‌ ದುಃಸ್ವಪ್ನವಾಗಿ ಬ್ರಿಟಿಷರನ್ನು ಕಾಡಿದ್ದ ಎಂದರು.

ಟಿಪ್ಪು ಶೂರ ಮಾತ್ರವಾಗಿರದೇ ಕೃಷಿ, ಧಾರ್ಮಿಕವಾಗಿಯೂ ಕೊಡುಗೆ ನೀಡಿದ್ದಾನೆ. ರೇಷ್ಮೆ, ಮೈಸೂರು ಸ್ಯಾಂಡಲ್‌ಗೆ ಉತ್ತೇಜನ ನೀಡಿದ್ದೂ ಟಿಪ್ಪು. ನಂಜನಗೂಡು, ಕಂಚಿ ಮತ್ತು ಶೃಂಗೇರಿ ಮಠಗಳಿಗೆ ಅಪಾರ ಕೊಡುಗೆಯನ್ನು ಟಿಪ್ಪು ಕೊಟ್ಟಿದ್ದರು. ಮೈಸೂರಿನಲ್ಲೇ 156 ದೇವಸ್ಥಾನಗಳಿಗೆ ಪ್ರತಿ ವರ್ಷ ಆರ್ಥಿಕ ನೆರವನ್ನು ಟಿಪ್ಪು ಒದಗಿಸುತ್ತಿದ್ದರು. ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದಾಗ ಟಿಪ್ಪು ತನ್ನ ಸೈನ್ಯ ಕಳಿಸಿ ಮಠವನ್ನು ರಕ್ಷಿಸಿದ್ದರು. ಇಂತಹ ಟಿಪ್ಪು ಇತಿಹಾಸ ಯುವ ಜನತೆಗೆ ತಿಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಫೇಸ್‌ಬುಕ್‌, ವ್ಯಾಟ್ಸಪ್‌ನಲ್ಲಿ ಯಾರೋ ಅಪಪ್ರಚಾರ ಮಾಡಿದ್ದನ್ನೇ ಓದಿಕೊಂಡು ಅದೇ ಸತ್ಯ ಎಂದು ಯುವಕರು ಭಾವಿಸಬಾರದು. ಇತಿಹಾಸ ಓದಿ ತಿಳಿದುಕೊಳ್ಳಬೇಕು. ಟಿಪ್ಪು ಬಗ್ಗೆ 2012ರಲ್ಲಿ ಸರ್ಕಾರ ರಚಿಸಿದ್ದ ಪುಸ್ತಕಕ್ಕೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಜಗದೀಶ ಶೆಟ್ಟರ್‌ ಮುನ್ನುಡಿ ಬರೆದು, ಕೊಂಡಾಡಿದ್ದರು. ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಟಿಪ್ಪು ಪೇಟ ಧರಿಸಿ, ಖಡ್ಗ ಹಿಡಿದು ಮೆರೆದಿದ್ದರು. ಆದರೆ, ಈಗ ಅದೇ ಟಿಪ್ಪು ಕುರಿತು ವಿರೋಧ ವ್ಯಕ್ತಪಡಿಸುವುದಕ್ಕೆ ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. 

ಬ್ರಿಟಿಷರ ವಿರುದ್ಧ ಹೋರಾಡಿದವರನ್ನು ವಿರೋಧಿಸುವ ಬಿಜೆಪಿ ಮತ್ತು ಆರ್‌ಎಸ್‌ ಎಸ್‌ನಿಂದ ಯಾವೊಬ್ಬ ನಾಯಕನೂ ಸ್ವಾತಂತ್ರ್ಯಾ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಹೋಗಲಿ ಸ್ವಾತಂತ್ರ್ಯಾ ಸಿಕ್ಕ ನಂತರವಾದರೂ ಇವರು ಏನೂ ಮಾಡಿದ್ದಾರೆ? ದೇಶ ಭಕ್ತ ಎಂದು ಕರೆದುಕೊಳ್ಳುವ ಇವರು 2012ರ ವರೆಗೂ ಆರ್‌ ಎಸ್‌ಎಸ್‌ ಕಚೇರಿಯ ಮೇಲೆ ತಿರಂಗ ಧ್ವಜವನ್ನೇ ಹಾರಿಸಿರಲಿಲ್ಲ ಎಂದರು.

ಟಿಪ್ಪು ಯಾವುದೇ ಧರ್ಮದ ಆಧಾರದಲ್ಲಿ ಯಾವತ್ತೂ ಯುದ್ಧ ಮಾಡಿಲ್ಲ. ಅಂದಿನ ದಿನಗಳು ಮತ್ತು ಇಂದಿನ ದಿನಗಳಿಗೆ ಸಮೀಕರಿಸಿ ಸಮಾಜ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಬಿಡಬೇಕು. ಇತಿಹಾಸದಲ್ಲಿ ರಾಜಕೀಯ ಹಾಗೂ ಜಾತಿ
ಬೆರೆಸುವುದು ತಪ್ಪು. ಪ್ರಬುದ್ಧ ಸಮಾಜ ಕಟ್ಟಲು ಎಲ್ಲರ ಅಭಿಪ್ರಾಯಗಳನ್ನು ಅಲಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಒಡೆದು ಆಳುವ ನೀತಿ ಸರಿಯಲ್ಲ ಎಂದು ಟೀಕಿಸಿದರು.

ಶಾಸಕಿ ಖನೀಜ್‌ ಫಾತಿಮಾ ಮಾತನಾಡಿ, ದೇಶದ ಸ್ವಾತಂತ್ರ್ಯಾಕ್ಕೆ ಹೋರಾಡಿದ್ದ ಟಿಪ್ಪು ಸುಲ್ತಾನ್‌ ಬ್ರಿಟಿಷರಲ್ಲಿ ಭಯ ಹುಟ್ಟಿಸಿದ ಏಕೈಕ ದೊರೆ. ಇಂದು ಟಿಪ್ಪು ಸುಲ್ತಾನ್‌ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇಂತಹವರಿಗೆ ತಕ್ಕ ಪಾಠ
ಕಲಿಸಬೇಕಿದೆ ಎಂದರು.

ಕಿಪ್ಪು ಸುಲ್ತಾನ್‌ ಕುರಿತು ನಿವೃತ್ತ ಪ್ರಾಧ್ಯಾಪಕ ಅಬ್ದುಲ್‌ ಹಮೀದ್‌ ಅಕºರ್‌, ಕಬೂಲ್‌ ಕೊಕಟನೂರ ವಿಶೇಷ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಮೇಯರ್‌ ಮಲ್ಲಮ್ಮ ವಳಕೇರಿ, ಟಿಪ್ಪು ಸೌಹಾರ್ದ ವೇದಿಕೆ ಅಧ್ಯಕ್ಷ ಶೌಕತ್‌ ಅಲಿ ಆಲೂರ, ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ, ಜಿಪಂ ಸಿಇಒ ಡಾ| ಪಿ.ರಾಜಾ, ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ ಆರ್‌. ಎಸ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಹಾಗೂ ಮತ್ತಿತರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ