ಲೌಕ್ ಡೌನ್ ಆದೇಶ ಉಲ್ಲಂಘಿಸಿದವರಿಗೆ ರಸ್ತೆಯಲ್ಲೇ ಬಸ್ಕಿ ಶಿಕ್ಷೆ
Team Udayavani, Mar 25, 2020, 4:51 PM IST
ಕಲಬುರಗಿ: ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಕಲಬುರಗಿ ನಗರದಲ್ಲಿ ರಸ್ತೆಗಿಳಿದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ನೀಡುವ ಮೂಲಕ ಬುದ್ಧಿ ಕಲಿಸಿದ್ದಾರೆ.
ಕೊರೊನಾ ಸೋಂಕು ವ್ಯಾಪಕ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಮನೆ ಬಿಟ್ಟು ರಸ್ತೆಗೆ ಬರಬೇಡಿ. ಒಬ್ಬರಿಂದ ಇನ್ನೊಬ್ಬರು ದೂರ ಉಳಿದು ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿನಿಂದ ಬಚಾವ್ ಆಗಿ ಎಂದು ಅಧಿಕಾರಿಗಳು ಮತ್ತು ಪೊಲೀಸರು ಹೇಳುತ್ತಲೇ ಇದ್ದಾರೆ.
ಜನ ಸಂದಣಿ ಸೇರದಂತೆ ಸರ್ಕಾರ ಲಾಕ್ ಡೌನ್ ಗೆ ಆದೇಶಿಸಿದೆ. ಆದರೂ, ಕೆಲವರು ಬೇಕಾಬಿಟ್ಟಿ ರಸ್ತೆಗಳಲ್ಲಿ ಸುತ್ತಾಡಿ ಲೌಕ್ ಡೌನ್ ಆದೇಶವನ್ನು ಗಾಳಿ ತೂರುತ್ತಿದ್ದಾರೆ. ಹೀಗೆ ನಿಯಮ ಉಲ್ಲಂಘಿಸಿ ಬುಧವಾರ ರಸ್ತೆಗಿಳಿದ ಯುವಕರಿಗೆ ಪೊಲೀಸರು ರಸ್ತೆಯಲ್ಲೇ ಬಸ್ಕಿ ಹೊಡೆಸಿದ್ದಾರೆ.
ನಗರದ ಶಹಬಜಾರ್ ಚೆಕ್ ಪೋಸ್ಟ್ ಬಳಿ ಬೈಕ್ ಗಳಲ್ಲಿ ಬಂದ ಯುವಕರನ್ನು ಹಿಡಿದು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ನೀಡುವ ಶಿಕ್ಷೆ ರೀತಿಯಲ್ಲೇ ಪೊಲೀಸರು ಶಿಕ್ಷೆ ನೀಡಿದ್ದಾರೆ.