ಧರ್ಮ ಯಾರೂ ಒಡೆದಿಲ್ಲ: ಸಂಸದ ಖರ್ಗೆ

Team Udayavani, Oct 20, 2018, 2:07 PM IST

ಕಲಬುರಗಿ: ದೇಶದಲ್ಲಿ ಧರ್ಮವನ್ನು ಯಾರೂ ಒಡೆಯಲಿಲ್ಲ. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್‌ ಈ ದೇಶದ ನೆಲದಲ್ಲಿ ಹುಟ್ಟಿದ ಧರ್ಮವನ್ನು ಬೆಳೆಸಿದರೇ ಹೊರತು ಒಡೆಯುವ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

ನಗರದ ಹೊರವಲಯದಲ್ಲಿರುವ ಬುದ್ಧ ವಿಹಾರದಲ್ಲಿ ಶುಕ್ರವಾರ ಸಿದ್ಧಾರ್ಥ ವಿಹಾರ ಟ್ರಸ್ಟ್‌ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 62ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೌದ್ಧ ಹಾಗೂ ಬಸವಾದಿ ಶರಣರ
ಪ್ರಭಾವದಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಹಲವು ಸಮುದಾಯಗಳ ಸಾಮರಸ್ಯ ಹೆಚ್ಚಿದೆ. ಅದರಲ್ಲೂ ಕರ್ನಾಟಕದ ಜನತೆ ಅತ್ಯುತ್ತಮರಲ್ಲದಿದ್ದರೂ ಉತ್ತಮರು ಎಂದರು.

ಉತ್ತರ ಭಾರತದಲ್ಲಿ ಸಮುದಾಯಗಳ ಮಧ್ಯೆ ಸಂಘರ್ಷ ಹೆಚ್ಚಾಗಿದೆ. ಗುಜರಾತ್‌, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನಗಳಲ್ಲಿ ಕೋಮು ಗಲಭೆಗಳು ಅಧಿಕ. ಅಲ್ಲಿನ ಜನರಲ್ಲಿ ಸಾಮರಸ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರರು ಧರ್ಮ ಹಾಗೂ ಸಮಾಜದ ಸುಧಾರಿಸಲು ಶ್ರಮಿಸದಿದ್ದರೆ ಇಂದು ಹಿಂದೂ ಧರ್ಮ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಆದರೆ, ಇಂದು ಒಂದೇ ಧರ್ಮದ ತತ್ವಗಳನ್ನು ಪಸರಿಸುವ ಸಂಚು ನಡೆಯುತ್ತಿದೆ. ಅಂದು ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಮುಖ್ಯವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡಿದ್ದರು ಎಂದರು.

ಅಂಬೇಡ್ಕರ್‌ ಅವರನ್ನು ಕೇವಲ ದಲಿತರಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಇಡೀ ಸಮಾಜಕ್ಕಾಗಿ ಸಂವಿಧಾನ ಬರೆದಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿಯ ಎರಡು ಕಲಂಗಳು ಮಾತ್ರ ಇವೆ. ಉಳಿದೆಲ್ಲ ಕಲಂಗಳು ದೇಶದ ಸಮಗ್ರ ಜನರಿಗಾಗಿ ಇವೆ. ಬದುಕಿ ಬದುಕಲು ಬಿಡಿ ಎನ್ನುವ ತತ್ವಗಳನ್ನು ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ನಮಗೆ ಹೇಳಿಕೊಟ್ಟಿದ್ದಾರೆ. ಆದ್ದರಿಂದ ನಾವು ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಮಾರ್ಗದಲ್ಲಿ ನಡೆದು, ಸಮಾಜದ ತತ್ವವನ್ನು ಪ್ರತಿಪಾದಿಸುವ ಸಂವಿಧಾನ ಉಳಿಸಲು ಹೋರಾಟ ನಡೆಸೋಣ. ಅಂಬೇಡ್ಕರ್‌ ಆರಂಭಿಸಿದ್ದ ಸುಧಾರಣೆ ರಥವನ್ನು ಮುನ್ನಡೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ಆರ್‌. ಶೇಷಶಾಸ್ತ್ರಿ ಹಾಗೂ ಮುಂಬೈನ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ, ಖ್ಯಾತ ನ್ಯಾಯವಾದಿ ಎಸ್‌. ಎಸ್‌. ವಾನಖೇಡೆ ಮುಖ್ಯ ಧಮ್ಮ ಪ್ರವಚನ ನೀಡಿದರು. ಬುದ್ಧ ವಿಹಾರದ ಪೂಜ್ಯ ಸಂಗಾನಂದ ಭಂತೆಜಿ ಹಾಗೂ ಇತರರು ಬುದ್ಧ ವಂದನೆ ಸಲ್ಲಿಸಿದ್ದರು.

ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಾರುತಿರಾವ್‌ ಮಾಲೆ ಸ್ವಾಗತಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ| ಎಚ್‌.ಟಿ.ಪೋತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ| ಈಶ್ವರ ಇಂಗನ್‌ ವಂದಿಸಿದರು. ಡಾ| ಚಂದ್ರಶೇಖರ
ದೊಡ್ಡಮನಿ ನಿರೂಪಿಸಿದರು. 

ಶಾಸಕ ಎಂ.ವೈ. ಪಾಟೀಲ, ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್‌ ಶರಣುಕುಮಾರ ಮೋದಿ, ರಾಧಾಬಾಯಿ ಖರ್ಗೆ, ರಾಹುಲ್‌ ಖರ್ಗೆ ಹಾಗೂ ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ ಮುಂತಾದವರು ಇದ್ದರು.

ಶಬರಿಮಲೆಯಲ್ಲಿ ಮಹಿಳೆಯರು ದೇವಸ್ಥಾನ ಪ್ರವೇಶಕ್ಕಾಗಿ ಈಗ ಹೋರಾಟ ನಡೆಸುತ್ತಿದ್ದಾರೆ. ಆದರೆ, 1942ರಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಮಹಿಳೆಯರಿಗಾಗಿ ಹಿಂದೂ ಕೋಡ್‌ ಬಿಲ್‌ ಮಂಡಿಸಿ ಅದರ ಜಾರಿಗಾಗಿ ಒತ್ತಾಯಿಸಿದ್ದರು. ಅಂದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು ಅಂಬೇಡ್ಕರ್‌.
 ಡಾ| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದೀಯ ನಾಯಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ