ಆಪರೇಶನ್‌ ಕಮಲಕ್ಕೆ ಬಲಿಪಶು

Team Udayavani, Mar 3, 2019, 6:54 AM IST

ಚಿತ್ತಾಪುರ: ಬಿಜೆಪಿ ಆಪರೇಶನ್‌ ಕಮಲ ಮೂಲಕ ಸಂವಿಧಾನದ ಆಶೋತ್ತರಗಳ ವಿರುದ್ಧ ನಡೆದುಕೊಳ್ಳುತ್ತಿದ್ದು, ಈ ಆಪರೇಶನ್‌ ಕಮಲಕ್ಕೆ ಜಿಲ್ಲೆಯ ಕೆಲವರು ಬಲಿಪಶುವಾಗುತ್ತಿದ್ದು, ಹೋಗುವವರು ಹೋಗಲಿ ನಮಗೂ ಸಾಕಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ತಾಲೂಕಿನ ತೆಂಗಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನದ ಉದ್ಘಾಟನೆ ಮತ್ತು ಪುತ್ಥಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಕೆಲಸ ಬಯಸುವ ಜನರು ತಮ್ಮ ಸಂಸದ ಹಾಗೂ ಶಾಸಕ ಯಾರಾಗಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಯಾರೂ ಶ್ರಮಿಸುತ್ತಾರೆ. ಯಾರು ಬಿಜೆಪಿ ಆಪರೇಷನ್‌ ಕಮಲಕ್ಕೆ ಒಳಗಾಗಿ ಕ್ಷೇತ್ರದ ಮತದಾರರಿಗೆ ದ್ರೋಹ ಬಗೆಯುತ್ತಿದ್ದಾರೆ ಎನ್ನುವುದನ್ನು ತೀರ್ಮಾನಿಸುತ್ತಾರೆ. ಅವರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ತೆಂಗಳಿ ಹಾಗೂ ಕಾಳಗಿ ಭಾಗದ ಹಿರಿಯರು ನನ್ನ ಮೇಲೆ ವಿಶೇಷ ಕಾಳಜಿ ಇಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಭಾಗದ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಒಂದು ಕೋಟಿ ರೂ. ಅನುದಾನ ಘೋಷಿಸುತ್ತೇನೆ. ಅಲ್ಲದೇ
ಪ್ರಗತಿ ಕಾಲೋನಿ ಯೋಜನೆಯಲ್ಲಿ ಈ ಭಾಗವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವಗಳನ್ನು ಪಾಲಿಸುತ್ತಾ ಹೇಗೆ ಚಿತ್ತಾಪುರದ ಮನೆ ಮಗನಾಗಿ ಕೆಲಸ ಮಾಡುತ್ತಿದ್ದೇನೋ ಹಾಗೆ ಚಿಂಚೋಳಿ ಮನೆ ಮಗನಾಗಿ ದುಡಿಯುತ್ತೇನೆ. ನೀವು ನನ್ನನ್ನು ದತ್ತು ತೆಗೆದುಕೊಳ್ಳಲು ತಯಾರಾಗಿ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯರಾದ ಮಾಪಣ್ಣ ಗಂಜಗೇರಿ, ಟಿ.ಟಿ ಭೀಮರಾಯ, ರಮೇಶ ಮರಗೋಳ, ಶಂಭುಲಿಂಗ ಗುಂಡಗುರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್‌, ಸುನೀಲ ದೊಡ್ಮನಿ, ಮಲ್ಲಿಕಾರ್ಜುನ ಬೆಣ್ಣೂರಕರ್‌, ಮಹ್ಮದ್‌ ಹನೀಫಸಾಬ್‌, ಬಸವರಾಜ ತುಪ್ಪದ್‌, ಪಂಡಿತರಾವ್‌ ಬೇರೆನ್‌, ಶಿವರಾಜ ಕಲಗುರ್ತಿ, ಶರಣಗೌಡ ಪಾಟೀಲ ತೊನಸನಳ್ಳಿ, ವೀರಭದ್ರಯ್ಯ ಸಾಲಿಮಠ ಇದ್ದರು.

ಭಾರತ ದೇಶದ ಸಂವಿಧಾನ ಇಡೀ ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿದೆ. ಸಂವಿಧಾನದಿಂದ ದೇಶ ಮುನ್ನಡೆಯುತ್ತಿದೆ. ದೇಶದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವ ಅನುಸರಿಸಿ ಕೆಲಸ ಮಾಡಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಗೌರವಿಸಿ, ಜನರ ಆಶೋತ್ತರಗಳಿಗೆ ಸ್ಪಂದಿ ಸಿ, ಉತ್ತಮ ಚಿಂತನೆ ಅಳವಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು. ಆದರೆ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ಸಂವಿಧಾನದ ತತ್ವ ಪ್ರತಿಪಾದಿಸುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. 
 ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ