ಈಗಲೇ ಶುರುವಾಯಿತು ನೀರಿಗೆ ತತ್ವಾರ

Team Udayavani, Oct 20, 2018, 12:21 PM IST

ಅಫಜಲಪುರ: ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು ಇದು ಪ್ರಕೃತಿ ನಿಯಮ. ಆದರೆ ಈಗ ಮಳೆಗಾಲದಲ್ಲಿ ಮಳೆಯಾಗುತ್ತಿಲ್ಲ, ಬದಲಾಗಿ ಸುಡುವ ಬಿಸಿಲಿದೆ, ಮಳೆಗಾಲವೇ ಇನ್ನೂ ಮುಗಿದಿಲ್ಲ ಈಗಲೇ ನೀರಿಗಾಗಿ ಬರ ಶುರುವಾಗಿದೆ.

ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು , ಹನಿ ನೀರಿಗಾಗಿಯೂ ಗ್ರಾಮಸ್ಥರು ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಎಷ್ಟು ಕೊಳವೆ ಬಾವಿ ಕೊರೆದರೂ ಭೂಮಿಯಿಂದ ಹನಿ ನೀರು ಹೊರಗೆ ಬರುತ್ತಿಲ್ಲ.

ಹೊಸೂರ ಗ್ರಾಮದಲ್ಲಿ ಬತ್ತಿದ ಅಂತರ್ಜಲ: ತಾಲೂಕಿನ ಗಡಿ ಗ್ರಾಮದಲ್ಲೀಗ ನೀರಿಗಾಗಿ ಪರದಾಟ ಆರಂಭವಾಗಿದೆ. ಗ್ರಾಮದಲ್ಲಿ ಅಕ್ಷರಶಃ ಭೀಕರ ಜಲಕ್ಷಾಮ ಉಂಟಾಗಿದೆ. ಎಲ್ಲಿ ನೋಡಿದರೂ ಹನಿ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಎಲ್ಲ ಜಲ ಮೂಲಗಳಲ್ಲಿ ಅಂತರ್ಜಲ ಮಟ್ಟ ಖಾಲಿಯಾಗಿದ್ದು, ಗ್ರಾಮಸ್ಥರು ಒಂದು ಕೊಡ ನೀರು ತರಬೇಕಾದರೆ ಕಿಲೋ ಮೀಟರ್‌ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಳ್ಳಿಗಳಲ್ಲೀಗ ಜಲಮೂಲ ಖಾಲಿ: ತಾಲೂಕಿನ ಹೊಸೂರ ಮಾತ್ರವಲ್ಲದೆ ಚಿಂಚೋಳಿ, ಮಾತೋಳಿ, ಮಲ್ಲಾಬಾದ, ಚಿಕ್ಕರೇವೂರ, ಅರ್ಜುಣಗಿ, ಗೊಬ್ಬೂರ (ಬಿ), ಬಳೂರ್ಗಿ, ಬಂದರವಾಡ, ಸ್ಟೇಷನ್‌ ಗಾಣಗಾಪುರ ಸೇರಿದಂತೆ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜಲಮೂಲ ಖಾಲಿಯಾಗಿ ಕುಡಿಯುವ ನೀರಿನ ಬವಣೆ ಶುರುವಾಗಿದೆ. ಜನಸಾಮಾನ್ಯರು ತಮ್ಮ ದನಕರುಗಳಿಗೆ ಮತ್ತು ತಮಗೆ ಕುಡಿಯಲು ನೀರು ತರುವ ಸಲುವಾಗಿ ಎಲ್ಲ ಕೆಲಸಗಳನ್ನು ಬದಿಗಿಟ್ಟು ಖಾಸಗಿಯವರು ಹೊಲ ಗದ್ದೆಗಳಿಗೆಲ್ಲ ಅಲೆದಾಡಿ ನೀರು ಹೊತ್ತು ತರುವಂತಾಗಿದೆ. 

ಇನ್ನು ಕೆಲವು ಕಡೆಯಲ್ಲಿ ಅಲ್ಪಸ್ವಲ್ಪ ನೀರು ಬರುತ್ತದೆ ಅಂತ ಊರುಗಳಲ್ಲಿ ಮನೆಗೆಲಸ ಬಿಟ್ಟು ಮಹಿಳೆಯರು ಮಕ್ಕಳು ಎಲ್ಲರೂ ಕೊಡ ನೀರಿಗಾಗಿ ದಿನವಿಡಿ ಕಾಯುತ್ತ ಕೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು ತರುವ ಸಲುವಾಗಿ ಮಕ್ಕಳು ಶಾಲೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ನದಿ ಪಾತ್ರದ ಗ್ರಾಮಗಳಲ್ಲೂ ನೀರಿಲ್ಲ: ಇನ್ನು ತಾಲೂಕಿನಲ್ಲಿ ಹರಿಯುವ ಭೀಮಾ ನದಿ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಆದರೆ ಈ ಬಾರಿಯ ಮಳೆಗಾಲ ಮುಗಿಯಲು ಬಂದರೂ ನದಿಗಳು ತುಂಬಿ ಹರಿದಿಲ್ಲ. ಹೀಗಾಗಿ ನದಿ ಪಾತ್ರದ ಗ್ರಾಮಗಳಲ್ಲೂ ನೀರಿನ ಕೊರತೆ ಕಾಡುತ್ತಿದೆ. 

ಇಲಾಖೆ, ಜನಪ್ರತಿನಿಧಿಗಳ ಬೇಜವಬ್ದಾರಿ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲವಾಗಿದ್ದು ಅವರ ಬೇಜವಾಬ್ದಾರಿ ತೋರಿಸುತ್ತಿದೆ. ಇವರ ನಡೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ತಾಲೂಕಿನ ಮಾತೋಳಿ ಗ್ರಾಮಸ್ಥರು ತಾಲೂಕಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿ ಕೊಟ್ಟಾಗ ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಆದರೂ ಯಾವುದೇ ಪ್ರಯೋಜವಾಗಿಲ್ಲ.

ಹೊಸೂರ ಊರಾಗ ಎಲ್ಲಿನೂ ಹನಿ ನೀರ್‌ ಸಿಗಲಾರ್‌ª ಪರಿಸ್ಥಿತಿ ಬಂದಾದ್ರಿ, ಮನ್ಯಾನ್‌ ಮಂದಿ, ಮಕ್ಕಳೆಲ್ಲ ಸೇರಿ ದೂರ್‌ದ ಗೌಡ್ರ, ಕುಲಕಾಣ್ಯಾರ್‌ ಹೊಲಕ್‌ ಹೋಗಿ ನೀರ್‌ ತರಬೇಕ್ರೀ, ನಮ್‌ ಗೋಳ್‌ ಕೇಳುವರು ಯಾರೂ ಇಲ್ರಿ.
 ಹೊಸೂರ್‌ ಗ್ರಾಮಸ್ಥರು

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಖಾಸಗಿಯವರಿಂದ ನೀರು ಖರೀದಿಸಿ ಸರಬರಾಜು ಮಾಡಲಾಗುತ್ತದೆ. ಯಾವ ಗ್ರಾಮದಲ್ಲಾದರೂ ಸಮಸ್ಯೆ ಹೆಚ್ಚಿದ್ದರೆ ತುರ್ತಾಗಿ ಸ್ಪಂದಿಸಲಾಗುತ್ತದೆ.
 ಗುರುನಾಥ ಶೆಟಗಾರ, ತಾಪಂ ಇಒ

„ಮಲ್ಲಿಕಾರ್ಜುನ ಹಿರೇಮಠ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ