ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆ ಪೂರ್ವ ಸಿದ್ಧತೆಗೆ ಸೂಚನೆ

Team Udayavani, Jun 18, 2019, 2:40 PM IST

ಕಲಬುರಗಿ: ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.

ಕಲಬುರಗಿ: 2019ನೇ ಸಾಲಿನ ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆ ಜೂನ್‌ 21ರಿಂದ 28ರ ವರೆಗೆ ಜಿಲ್ಲೆಯ ಒಟ್ಟು 43 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಅಕ್ರಮಕ್ಕೆ ಯಾವುದೇ ಅವಕಾಶ ನೀಡದೆ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು. ಅಕ್ರಮ ಕಂಡುಬಂದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನೇ ನೇರವಾಗಿ ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 12,866 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದರು.

ಒಟ್ಟು 43 ಪರೀಕ್ಷಾ ಕೇಂದ್ರಗಳ ಪೈಕಿ 3 ಸೂಕ್ಷ್ಮ, 3 ಅತಿ ಸೂಕ್ಷ್ಮ ಹಾಗೂ 37 ಸಾಮಾನ್ಯ ಪರೀಕ್ಷಾ ಕೇಂದ್ರಗಳು ಎಂದು ಗುರುತಿಸಲಾಗಿದೆ. ಪರೀಕ್ಷೆ ಸೂಸೂತ್ರವಾಗಿ ನಡೆಯಲು ಪ್ರತಿ ಕೇಂದ್ರಕ್ಕೆ ಸ್ಥಾನಿಕ ಜಾಗೃತ ದಳ ರಚಿಸಲಾಗಿದೆ. ಇದಲ್ಲದೆ 43 ಜನರನ್ನು ವೀಕ್ಷಕರನ್ನಾಗಿ, 21 ಜನ ರೂಟ್ ಅಧಿಕಾರಿಗಳನ್ನಾಗಿ ನೇಮಿಸಿದೆ. ಇದಲ್ಲದೆ ಡಿಡಿಪಿಐ, ಡಿವೈಎಸ್‌ಪಿ ಮತ್ತು ಅಕ್ಷರ ದಾಸೋಹ ಇಒ ಅವರ ನೇತೃತ್ವದ ಸಂಚಾರಿ ಜಾಗೃತ ದಳ ಸಹ ಪರೀಕ್ಷೆಗಳ ಮೇಲೆ ನಿಗಾ ಇಡಲಿವೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಕೊಠಡಿ ಹಾಗೂ ಆಯ್ದ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಿಶೇಷವಾಗಿ ಪತ್ರಿಕೆ ತೆರೆಯುವಾಗ ಹಾಗೂ ಪರೀಕ್ಷೆ ನಂತರ ಪ್ಯಾಂಕಿಂಗ್‌ ಮಾಡುವ ಕಾರ್ಯವನ್ನು ಸಿಸಿಕ್ಯಾಮೆರಾದಲ್ಲಿ ದಾಖಲಿ ಸುವಂತಾಗಬೇಕು ಎಂದು ಅವರು ಸೂಚಿಸಿದರು.

ಒಬ್ಬ ವಿದ್ಯಾರ್ಥಿ ಬದಲಾಗಿ ಬೇರೆ ಅಭ್ಯರ್ಥಿ ಪರೀಕ್ಷೆ ಬರೆಯುವುದು ಕಾನೂನು ಅಪರಾಧವಾಗಿದ್ದು, ಇದಕ್ಕೆ ಅವಕಾಶ ನೀಡಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಪರೀಕ್ಷೆಗೆ ನಿಯೋಜನೆಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿಶೇಷವಾಗಿ ಕೊಠಡಿ ಮೇಲ್ವಿಚಾರಕರು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ತಡೆಯಲು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ತಪಾಸಣೆಗೆ ಸಿಬ್ಬಂದಿ ನಿಯೋಜಿಸಬೇಕು. ಅಗತ್ಯ ಬಂದೋಬಸ್ತ್ಗಾಗಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು. ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ಮತ್ತು ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಅಕ್ರಮ ಘಟನೆಗಳು ನಡೆಯದಂತೆ ಅಧೀಕ್ಷಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ್‌ ವ್ಯಾಪ್ತಿಯ ಪ್ರದೇಶದಲ್ಲಿ ಝೆರಾಕ್ಸ್‌, ಪುಸ್ತಕ ಅಂಗಡಿ ಮುಚ್ಚುವಂತೆ ಹಾಗೂ ಸಿಆರ್‌ಪಿಸಿ 144 ಕಲಂ ಅನ್ವಯ ನಿಷೇಧಿತ ಪ್ರವೇಶ ಎಂದು ಆದೇಶ ಹೊರಡಿಸಲಾಗುವುದು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್‌, ಪೇಜರ್‌, ಬ್ಲ್ಯೂಟೂತ್‌, ವೈರಲೆಸ್‌ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್‌, ವಾಚ್ ಕ್ಯಾಲ್ಕುಲೇಟರ್‌, ಪಠ್ಯ ಪುಸ್ತಕ ಸೇರಿದಂತೆ ಇನ್ನಿತರ ಇಲೆಕ್ಟ್ರಾನಿಕ್ಸ್‌ ಉಪಕರಣ ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಸೇರಿದಂತೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅಧೀಕ್ಷಕರು, ವೀಕ್ಷಕರು, ರೂಟ್ ಅಧಿಕಾರಿಗಳು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ