ಕಲಬುರಗಿಗೆ ಕೆಟ್ಟ ಹೆಸರು ತರಲ್ಲ

Team Udayavani, Apr 2, 2019, 12:49 PM IST

ಕಲಬುರಗಿ: ಹೊರಗಡೆ ಗಂಟೆಗಟ್ಟಲೇ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಕಳೆದ 5 ವರ್ಷಗಳಲ್ಲಿ ಸಂಸತ್ತಿನೊಳಗೆ ಕೇವಲ 25 ಗಂಟೆ ಮಾತನಾಡಿದ್ದಾರೆ. ಇದು ದೇಶದ ಬಗ್ಗೆ ಮೋದಿ ಎಷ್ಟು ಚಿಂತೆ ಮಾಡುತ್ತಾರೆ ಎಂಬುದು ಎತ್ತಿ ತೋರಿಸುತ್ತದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಮಾಜಿ ಸಚಿವ ಕೆ.ಬಿ. ಶಾಣಪ್ಪ ಪಕ್ಷ ಸೇರ್ಪಡೆ ಹಾಗೂ ಕಲಬುರಗಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಏನೆಲ್ಲ ಹೇಳುತ್ತಾರೆ. ಆದರೆ ಸದನದೊಳಗೆ ಏನು ಹೇಳಲ್ಲ. ಅದು ಅಲ್ಲದೇ ತಾವು ಕೇಳಿದ ಪ್ರಶ್ನೆ ಹಾಗೂ ಆರೋಪಕ್ಕೆ ನೇರವಾಗಿ ಉತ್ತರ ಸಹ ನೀಡಲಿಲ್ಲ. ಆದರೆ ಕಲಬುರಗಿ ಜನರು ಆಯ್ಕೆಗೊಳಿಸಿದ ಆಶೀರ್ವಾದಿಂದ ತಾವಂತು ಸದನದೊಳಗೆ ತಲೆ ಎತ್ತಿ ಮಾತನಾಡಿದ್ದೇನೆ ಎಂದು ತಿರುಗೇಟು ನೀಡಿದರು.
48 ವರ್ಷಗಳ ರಾಜಕೀಯದಲ್ಲಿ ಶಾಸಕನಾಗಿ, ಸಚಿವನಾಗಿ, ಕೆಪಿಸಿಸಿ ಅಧ್ಯಕ್ಷನಾಗಿ, ವಿಪಕ್ಷ ನಾಯಕನಾಗಿ ಸಮಪರ್ಕಕ ಕೆಲಸ ಮಾಡಿ ಕಲಬುರಗಿಗೆ ಹೆಸರು ತಂದಿದ್ದೇನೆ. ಕಲಬುರಗಿ ಜನತೆಗೆ ಎಂದಿಗೂ ಕೆಟ್ಟ ಹೆಸರು ತಂದಿಲ್ಲ.
ಕಲಬುರಗಿ ಜನತೆ ತಲೆ ಬಾಗಿಸುವ ಕೆಲಸ ಮಾಡಿಲ್ಲ. ಒಳ್ಳೆಯಕೆಲಸ ಮಾಡಿದ್ದರೆ ಬೆಂಬಲಿಸುತ್ತಾರೆ ಎನ್ನುವುದಕ್ಕೆ ಕಲಬುರಗಿ ಜನ ಉದಾಹರಣೆಯಾಗಿದ್ದಾರೆ ಎಂದು ಖರ್ಗೆ ಹೇಳಿದರು.
ಸಂವಿಧಾನ ಬದಲಾವಣೆ ಹಾಕುತ್ತೇನೆಂದು ಹೇಳಿದ ಸಚಿವರನ್ನು ಮೋದಿ ತಮ್ಮ ಮಂತ್ರಿ ಮಂಡಲದಿಂದ ತೆಗೆದು ಹಾಕಲಿಲ್ಲ. ಒಂದು ಕಡೆ ಚೂಟುವುದು ಮಾಡ್ತಾರೆ, ಮಗದೊಂದು ಕಡೆ ರಮಿಸುವುದು ಮಾಡುತ್ತಾರೆ. ಕಾಂಗ್ರೆಸ್‌ ದೇಶಭಕ್ತ ಪಕ್ಷ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ವೈಯಕ್ತಿಕವಾಗಿ ಮೋದಿ ವಿರುದ್ಧ ಹೋರಾಟವಲ್ಲ. ಅವರ ತತ್ವದ ವಿರುದ್ಧ ತಮ್ಮ ಹೋರಾಟವಿದೆ ಎಂದು ಅವರು ಹೇಳಿದರು.
ಕೆ.ಬಿ. ಶಾಣಪ್ಪ ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. 82 ವರ್ಷ ವಯಸ್ಸಾಗಿದ್ದರೂ ಇನ್ನೂ ಗಟ್ಟಿ ಮುಟ್ಟಿ ಆರೋಗ್ಯ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಒಂದು ತತ್ವದ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಬಂದಿದ್ದಾರೆ.
1972ರಲ್ಲಿ ಪ್ರಥಮ ಬಾರಿಗೆ ಹಾಗೂ 1978ರಲ್ಲಿ ಚುನಾವಣೆ ನಿಂತಾಗ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿದ್ದರು. ಈಗ 2019ರಲ್ಲಿ ತಮಗೆ ಮತ ಹಾಕಲು ಬಂದಿದ್ದಾರೆ. 1974-75ರಲ್ಲಿ ನೂತನ ವಿದ್ಯಾಲಯ ಶಾಲೆಯಲ್ಲಿ ತಾವು ಕಡಿಮೆ ಸಂಖ್ಯೆಯಲ್ಲಿದ್ದರೂ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದನ್ನು ಈ ಸಂದರ್ಭದಲ್ಲಿ ಸಂಸದ ಖರ್ಗೆ ಸ್ಮರಿಸಿಕೊಂಡರು.
ಮಾಜಿ ಸಚಿವ ಕೆ.ಬಿ. ಶಾಣಪ್ಪ ಮಾತನಾಡಿ, ಆಡು ಮುಟ್ಟದ ಗಿಡವಿಲ್ಲ, ಕೆ.ಬಿ. ಹೋಗದ ಪಾರ್ಟಿ ಇಲ್ಲ ಎಂದು ಕೆಲವರು ಹೇಳ್ತಾರ್‌. ಆದ್ರ ಆದರೆ ಸ್ವಾಭಿಮಾನ ಎಂದಿಗೂ ಬಿಟ್ಟಿಲ್ಲ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಪಕ್ಷದಲ್ಲಿ ಇರಬಾರದೆಂದು ತಿಳಿದು ಪಕ್ಷ ತ್ಯಜಿಸಲಾಗಿದೆ. ಈ ಹಿಂದೆ ರೇವು ನಾಯಕ ಬೆಳಮಗಿ ಅವರಿಗೆ ಎರಡು ಸಲ ಟಿಕೆಟ್‌ ನೀಡಿದ್ದಾಗ ಬೆಂಬಲಿಸಿದ್ದೇ, ಬಿಜೆಪಿನಲ್ಲಿದ್ದರೂ ಮನಸ್ಸು ಕಾಂಗ್ರೆಸ್‌ ಕಡೆ ಇತ್ತು ಎಂದು ಹೇಳಿದರು.
ಕಲಬುರಗಿ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿನಾಥ ಪಾಟೀಲ್‌ ಸೊಂತ, ಯುವ ಮುಖಂಡ ವಿಜಯಕುಮಾರ ರಾಮಕೃಷ್ಣನ್‌, ಶಹಾಬಾದ್‌ ಬ್ಲಾಕ್‌ ಕಾಂಗ್ರೆಸ್‌ ಅಧಶ್ಯಕ್ಷ ಡಾ| ರಸೀದ್‌ಸಾಬ್‌, ಇತ್ತೀಚೆಗೆ ಕಾಂಗ್ರೆಸ್‌ ಸೇರಿರುವ ಜಿಡಿಎ ಮಾಜಿ ಅಧ್ಯಕ್ಷ ಶಾಮರಾವ ಪ್ಯಾಟಿ ಮುಂತಾದವರು ಮಾತನಾಡಿದರು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಎಂ.ವೈ. ಪಾಟೀಲ್‌, ಖನೀಜಾ ಫಾತೀಮಾ, ಶರಣಪ್ಪ ಮಟ್ಟೂರ, ಇಕ್ಬಾಲ್‌ ಅಹ್ಮದ ಸರಡಗಿ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್‌ ನೆಲೋಗಿ, ಮಾರುತಿ ಮಾಲೆ, ಕಲಬುರಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠ ಮೂಲಗೆ, ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಸುಭಾಷ ರಾಠೊಡ, ಜಗನ್ನಾಥ ಗೋದಿ, ಬಾಬುರಾವ ಜಹಾಗೀರದಾರ್‌, ಲತಾ ರವಿ ರಾಠೊಡ, ರೇಣುಕಾ ಚವ್ಹಾಣ ಇದ್ದರು.
ಕೆ.ಬಿ. ಶಾಣಪ್ಪ ಕಾಂಗ್ರೆಸ್‌ ಸೇರ್ಪಡೆ
ಕಲಬುರಗಿ: ವಾರದ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ, ಮಾಜಿ ಸಂಸದ ಕೆ.ಬಿ. ಶಾಣಪ್ಪ ಸೋಮವಾರ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಪಕ್ಷದ ಜಿಲ್ಲಾ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿ, ಲೋಕಸಭೆಯಲ್ಲಿನ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶಾಣಪ್ಪ ಅವರಿಗೆ
ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಇವರ ಜತೆಗೆ ಶಾಣಪ್ಪ ಅವರ ಪುತ್ರ ಕೆ.ಬಿ. ವಿನೋದ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತನಾಡಿದ ಶಾಣಪ್ಪ ಅವರು, ಸಾಮಾಜಿಕ ಜೀವನದಲ್ಲಿ ಬಹಳ ಪಕ್ಷ ಸೇರಿದ್ದೇನೆ. ಆದರೆ ಸ್ವಾಭಿಮಾನ ಎಂದಿಗೂ ಬಿಟ್ಟಿಲ್ಲ. ಅಡ್ವಾಣಿ, ವಾಜಪೇಯಿ ಅವರನ್ನು ನೋಡಿ ಬಿಜೆಪಿ ಸೇರಿದ್ದೇ. ಆದರೆ ಬಿಜೆಪಿಯವರು ಸಂವಿಧಾನ
ಬದಲಾವಣೆಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಬಹು ಮುಖ್ಯವಾಗಿ ಬಿಜೆಪಿಯಲ್ಲಿಂದು ಮುಖಂಡರ ಹಾಗೂ ಕಾರ್ಯಕರ್ತರ ಮಾತಿಗೆ ಬೆಲೆಯೇ ಇಲ್ಲದಂತಾಗಿರುವುದರಿಂದ ಜತೆಗೆ ಪ್ರಜಾಪ್ರಭುತ್ವದಲ್ಲಿ ಮಾರಕವಾಗಿರುವ ಪಕ್ಷದಲ್ಲಿ ಎಂದಿಗೂ ಇರಬಾರದೆಂದು ತಿಳಿಸು ಪಕ್ಷ ತ್ಯಜಿಸಲಾಗಿದೆ ಎಂದು ವಿವರಣೆ ನೀಡಿದರು.
ಪಕ್ಷಕ್ಕೆ ಸ್ವಾಗತಿಸಿಕೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಹಿರಿಯ ನಾಯಕರಾದ ಕೆ.ಬಿ. ಶಾಣಪ್ಪ ಅವರ
ಸೇರ್ಪಡೆಯಿಂದ ಆನೆಬಲ ಬಂದಂತಾಗಿದೆ. ಅವರು ಬೇರೆ ಪಕ್ಷದಲ್ಲಿದ್ದರೂ ಅವರ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ಯಾರಿಗೂ ಧೈರ್ಯ ಇರಲಿಲ್ಲ.  ತತ್ವ-ಸಿದ್ಧಾಂತಗಳಿಗೆ ಅಂಟಿಕೊಂಡಿರುವ ವ್ಯಕ್ತಿ ಇವರಾಗಿದ್ದಾರೆ ಎಂದು ಹೇಳಿದರು.
ತದನಂತರ ಅಫಜಲಪುರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಳೆದ ಸಲ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖಂಡ ರಾಜೇಂದ್ರ ಪಾಟೀಲ್‌ ರೇವೂರ ಜೆಡಿಎಸ್‌ ಪಕ್ಷ ತ್ಯಜಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು  ಸಂವಿಧಾನ ಜೀವಂತವಾಗಿಡಬೇಕು ಎನ್ನುವುದೇ ತಮ್ಮ ಗುರಿಯಾಗಿದೆ. ಪ್ರಜಾಪ್ರಭುತ್ವ ಇಲ್ಲ ಅಂದರೆ ಮೂಲಭೂತ ಹಕ್ಕುಗಳೇ ಇರಲ್ಲ. ನನ್ನಂತರ ಎಷ್ಟೋ ಜನ ಎಂಪಿಗಳು ಬರ್ತಾರೆ-ಹೋಗ್ತಾರೆ. ಆದ್ರೆ ದೇಶದ ಸಂವಿಧಾನ ಇದ್ರೆ ತಮ್ಮಂತವರು ನೂರಾರು ಜನ ಹುಟ್ಟುತ್ತಾರೆ. ಒಳ್ಳೆಯ ಕೆಲಸ ಮಾಡಿದ್ದರಿಂದ ಹಾಗೂ ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಕಳೆದ ಸಲಕ್ಕಿಂತ ಎರಡು ಪಟ್ಟು ಅತ್ಯಧಿಕ ಮತಗಳಿಂದ ಪುನರಾಯ್ಕೆಯಾಗುವ ವಿಶ್ವಾಸವಿದೆ.
 ಮಲ್ಲಿಕಾರ್ಜುನ ಖರ್ಗೆ, ಸಂಸದ
ಸಂವಿಧಾನ ಬದಲಾವಣೆ ಮಾಡಲು ಅವರಪ್ಪಂದಾ? ಬಿಜೆಪಿ ತೊರೆಯಲು ನನಗೆ ಮಜಬೂರ ಮಾಡಿದ್ರು, ಆದರೆ ಮೋದಿ ಬಂದು ಏನೇನೋ ಭಾಷಣ ಮಾಡ್ತಾರೆ, ಇವರು ಮಾಡಿದ ಕಾರ್ಯವಾದರೂ ಏನು?
 ಕೆ.ಬಿ.ಶಾಣಪ್ಪ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ