ತೊಗರಿ ಖಣಜದಲ್ಲಿ ಮತ ರಾಶಿಗೆ ಕಸರತ್ತು

Team Udayavani, Apr 3, 2018, 11:35 AM IST

ಕಲಬುರಗಿ: ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕು ಎಂದೇ ಖ್ಯಾತಿ ಪಡೆದಿದ್ದ ಹಾಗೂ ಇತ್ತೀಚೆಗೆ ತಾಲೂಕಿನಿಂದ ಎರಡು ಹೊಸ ತಾಲೂಕಾಗಿದ್ದರೂ ರಾಜ್ಯದಲ್ಲಿಯೇ ತನ್ನದೇಯಾದ ಗಮನ ಸೆಳೆದಿರುವ ಜಿಲ್ಲೆಯ ಚಿತ್ತಾಪುರ ಮೀಸಲು ವಿಧಾನಸಭಾ ಕ್ಷೇತ್ರ ವಿಶಿಷ್ಟ ಹಾಗೂ ವಿಭಿನ್ನತೆಯಿಂದ ಕೂಡಿದೆ. ಕಲ್ಲು ಗಣಿ ಹಾಗೂ ತೊಗರಿ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಚಿತ್ತಾಪುರ ರಾಜಕೀಯದಲ್ಲಂತೂ ಖ್ಯಾತಿ ಪಡೆದಿದೆ.

ಪ್ರವಾಸೋದ್ಯಮ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಥಮ ಸಲ ಶಾಸಕರಾಗಿ ಸಚಿವರಾಗಿ ಈಗ ಮತ್ತೂಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧರಾಗಿರುವುದರಿಂದ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ಎದುರಾಳಿಯಾಗಿ ಬಿಜೆಪಿಯಿಂದ ಮಾಜಿ ಶಾಸಕ ವಾಲ್ಮೀಕಿ ನಾಯಕ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಶಾಸಕ ವಿಶ್ವನಾಥ ಪಾಟೀಲ ಹಾಗೂ ಇತರ ಮುಖಂಡರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಚುನಾವಣೆಯಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬ ಕೂತುಹಲ ಮೂಡಿದೆ. ಸಚಿವ ಖರ್ಗೆ ಅವರು ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಕಾರ್ಯಕರ್ತರು ಹಾಗೂ ಮತದಾರರೊಂದಿಗೆ ಸ್ನೇಹ ಜತೆಗೆ ನೇರ ಸಂಪರ್ಕ ಹೊಂದದಿರುವುದು ಪ್ರಸ್ತುತ ಪ್ರಮುಖ ವಿಷಯವಾಗಿದೆ.

ಚಿತ್ತಾಪುರದಲ್ಲಿ ಚುನಾವಣೆ ಮುಂಚೆ ಇಂತಹವರೇ ಗೆಲ್ಲುತ್ತಾರೆ ಎಂದವರು ವಿರಳ. ಹೀಗಾಗಿ ಚಿತ್ತಾಪುರ ಕ್ಷೇತ್ರದ ಮತದಾರರ
ಒಲವು ಬಹಳ ವಿಚಿತ್ರ ಎನ್ನಲಾಗುತ್ತದೆ. ಕ್ಷೇತ್ರದಲ್ಲಿ ಲಿಂಗಾಯತರು ಹಾಗೂ ಹಿಂದುಳಿದ ವರ್ಗದವರೇ ಪ್ರಾಬಲ್ಯ ಹೊಂದಿದ್ದಾರೆ.
ಚಿತ್ತಾಪುರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ ಹಾಗೂ ಜೆಎನ್‌ಪಿ ಹಾಗೂ ಜೆಡಿಎಸ್‌ ಗೆಲ್ಲುತ್ತಾ ಬಂದಿದ್ದರೆ 2008ರ ಉಪಚುನಾವಣೆಯಲ್ಲಿ ಮಾತ್ರ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತು. ಬಿಜೆಪಿಯ ವಾಲ್ಮೀಕಿ ನಾಯಕ ಕಾಂಗ್ರೆಸ್‌ನ ಪ್ರಿಯಾಂಕ್‌ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರಾಭವಗೊಳಿಸಿ ಚುನಾಯಿತರಾದರು. ಆದರೆ 2013ರ ವಿಧಾನಸಭೆ ಚುನಾವಣೆಯಲ್ಲಿ 31191 ಮತಗಳ ಅಂತರದಿಂದ ಪ್ರಿಯಾಂಕ್‌ ಖರ್ಗೆ ವಾಲ್ಮೀಕಿ ನಾಯಕ ಅವರನ್ನು ಪರಾಭವಗೊಳಿಸಿ ಚುನಾಯಿತರಾದರು. ಮಗದೊಮ್ಮೆ ಪ್ರಿಯಾಂಕ್‌
ಖರ್ಗೆ ಸ್ಪರ್ಧಿಸುತ್ತಿರುವುದರಿಂದ ಎಲ್ಲರ ಚಿತ್ತ ಚಿತ್ತಾಪುರದತ್ತ ಎನ್ನುವಂತಾಗಿದೆ.

ಚಿತ್ತಾಪುರ ಕ್ಷೇತ್ರದಲ್ಲಿ ಒಟ್ಟು 228618 ಮತದಾರರಿದ್ದು, ಇದರಲ್ಲಿ 114714 ಪುರುಷರು, 113872 ಮಹಿಳೆಯರಿದ್ದಾರೆ. ನಾಲವಾರ,
ವಾಡಿ, ಗುಂಡಗುರ್ತಿ, ಭಂಕೂರ, ಹೊನಗುಂಟಾ, ದಂಡೋತಿ ಮುಂತಾದವು ಕ್ಷೇತ್ರದ ಪ್ರಮುಖ ಗ್ರಾಮಗಳಾಗಿವೆ.

ಕ್ಷೇತ್ರದ ಬೆಸ್ಟ್‌ ಏನು?
ಮಹತ್ವಕಾಂಕ್ಷಿ ಬೆಣ್ಣೆತೋರಾ ನೀರಾವರಿ ಯೋಜನೆ ಕಾಲುವೆಗಳ ಆಧುನೀಕರಣ ಕಾರ್ಯ 175 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ರೈತರ ಹೊಲಗಳತ್ತ ನೀರು ಹರಿಯುವ ಹಾಗೆ ಮಾಡಿರುವುದು ಹಾಗೂ ತಾಲೂಕು ಕೇಂದ್ರಕ್ಕೆ ಹೋಗುವ ಜತೆಗೆ ಕಲಬುರಗಿಯಿಂದ ವಾಡಿ, ಸನ್ನತಿ ಮುಂತಾದ ಗ್ರಾಮಗಳಿಗೆ ರಾಷ್ಟ್ರೀಯ ಹೆದ್ದಾರಿ ಮಾದರಿ ರಸ್ತೆ ನಿರ್ಮಿಸಿರುವುದು, ಶೈಕ್ಷಣಿಕ ಅಭಿವೃದ್ಧಿಗೆ ಕೈ ಜೋಡಿಸಿರುವುದು ಕ್ಷೇತ್ರದ ಬೆಸ್ಟ್‌ ಕಾರ್ಯಗಳಾಗಿವೆ

ಕ್ಷೇತ್ರದ ದೊಡ್ಡ ಸಮಸ್ಯೆ?
ಸಿಮೆಂಟ್‌ ಕಾರ್ಖಾನೆಗಳಿಗೆ ಭೂಮಿ ನೀಡಿರುವ ರೈತರಿಗೆ ಸಮರ್ಪಕ ಪರಿಹಾರ ದೊರಕದಿರುವುದು ಹಾಗೂ ಕಾರ್ಖಾನೆಗಳಲ್ಲಿ ಸ್ಥಳೀಯರನ್ನು ನೌಕರಿಗೆ ತೆಗೆದುಕೊಳ್ಳದಿರುವುದು ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದೆ. ಅದೇ ರೀತಿ ಕೆಲವು ಗ್ರಾಮಗಳಿಗೆ ಉತ್ತಮ ರಸ್ತೆಗಳಿಲ್ಲದಿರುವುದು ಮಗದೊಂದು ಸಮಸ್ಯೆಯಾಗಿದೆ.

ಶಾಸಕರು ಏನಂತಾರೆ?
ನೀರಾವರಿಗೆ ಆದ್ಯತೆ ನೀಡಿ ಬೆಣ್ಣೆತೋರಾ ಕಾಲುವೆಗಳ ಆಧುನೀಕರಣಗೊಳಿಸಿರುವುದು, ಕ್ಷೇತ್ರದಾದ್ಯಂತ 35 ಬ್ರಿಜ್‌ ಕಂ ಬ್ಯಾರೇಜ್‌ಗಳ ನಿರ್ಮಾಣ, ತಾಲೂಕು ಕೇಂದ್ರ ಸೇರಿ ಪ್ರಮುಖ ಪಟ್ಟಣಗಳಿಗೆ ಹೆದ್ದಾರಿ ಮಾದರಿ ರಸ್ತೆಗಳ ನಿರ್ಮಾಣ, ಸನ್ನತಿ ಕ್ಷೇತ್ರ ಅಭಿವೃದ್ಧಿ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿಗೆ
2500 ಕೋಟಿ ರೂ. ತರಲಾಗಿದೆ.
ಪ್ರಿಯಾಂಕ್‌ ಖರ್ಗೆ

ಕ್ಷೇತ್ರ ಮಹಿಮೆ
ಸನ್ನತಿ ಚಂದ್ರಲಾ ಪರಮೇಶ್ವರಿ, ನಾಲವಾರ ಕೋರಿಸಿದ್ದೇಶ್ವರ, ಕೋರವಾರ ಅಣವೀರಭದ್ರೇಶ್ವರ, ದಂಡಗುಂಡ ಬಸವಣ್ಣ,
ಸುಗೂರು (ಕೆ) ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿವೆ. ನಿತ್ಯ
ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ದರ್ಶನಕ್ಕೆ ಬರುತ್ತಾರೆ.

ಚಿತ್ತಾಪುರ ತಾಲೂಕಿನ ಎಲ್ಲ ಹಳ್ಳಿಗಳಿಗೆ ಬಹುತೇಕ ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗಿದೆ. ಈಗ ಮುಕ್ಕಾಲು ಗಂಟೆಯೊಳಗೆ ಎಲ್ಲ ಹಳ್ಳಿಗಳಿಂದ ತಾಲೂಕಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿಯಾಗಿದೆ.
●ನಿಂಗಣ್ಣ ಹೇಗಲೇರಿ, ಡೋಣಗಾಂವ ನಿವಾಸಿ

ಚಿತ್ತಾಪುರದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಅಧಿಕಾರಿಗಳು ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.
ಕಾಗಿಣಾ ನದಿಯಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ಶರಣು ಜ್ಯೋತಿ, ರಾವೂರ ನಿವಾಸಿ

ಅಭಿವೃದ್ಧಿ ವಿಷಯದಲ್ಲಿ ಹಿಂದಿನ ಶಾಸಕರಿಗೆ ಹೋಲಿಸಿದ್ದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪರವಾಗಿಲ್ಲ. 5 ವರ್ಷದಲ್ಲಿ ತಾಲೂಕಿನಲ್ಲಿ ಹಲವು ಸುಧಾರಣೆಯಾಗಿವೆ. ಅದರಲ್ಲಿ ನಾಗಾವಿ ಶಿಕ್ಷಣ ಹಬ್‌, ಬೆಣ್ಣೆತೋರಾ ಕಾಲುವೆಗಳ ಸುಧಾರಣೆ, ಸನ್ನತಿ ಬ್ರಿಡ್ಜ್
ಕಂ ಬ್ಯಾರೇಜ್‌ ಕಾಮಗಾರಿಗಳು ಗುಣಮಟ್ಟದಿಂದ ಸಾಗುತ್ತಿವೆ. ಅದರ ಜತೆಗೆ ಜನರ ಆರ್ಥಿಕ ಮಟ್ಟ ಸುಧಾರಿಸುವ ಕೆಲಸಗಳು ಮತ್ತಷ್ಟು ನಿರೀಕ್ಷೆ ಇದೆ.
ಮಹೇಶ ಕಾಶಿ, ಕರವೇ ತಾಲೂಕಾಧ್ಯಕ್ಷ

ಹಣಮಂತರಾವ ಭೈರಾಮಡಗಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ