ಕೇರಳ ತಲುಪಿತು ವಾಡಿ ಪರಿಹಾರ

Team Udayavani, Aug 27, 2018, 1:10 PM IST

ವಾಡಿ: ಉಕ್ಕಿ ಹರಿದ ಪ್ರವಾಹದಿಂದ ಬದುಕು ಮೂರಾಬಟ್ಟೆಯಾಗಿ ಅಕ್ಷರಶಃ ಬೀದಿಗೆ ನಿಂತಿರುವ ಕೇರಳ ನೆರೆ ಸಂತ್ರಸ್ತರ ಕಣ್ಣೀರಿಗೆ ಕರಗಿದ ಟೀಂ ಪ್ರಿಯಾಂಕ್‌ ಖರ್ಗೆ ಸದಸ್ಯರು, ಹಗಲು ರಾತ್ರಿ ಎನ್ನದೆ ಜನರಿಗೆ ಆಹಾರ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಚಿತ್ತಾಪುರ ತಾಲೂಕು ವಾಡಿ ಪಟ್ಟಣದಿಂದ ಆ. 21ರಂದು ಲಾರಿಯಲ್ಲಿ ದವಸ ಧಾನ್ಯಗಳನ್ನು ಹೊತ್ತು ಕೇರಳದ ಪ್ರವಾಹ
ಪೀಡಿತ ಪ್ರದೇಶಗಳತ್ತ ತೆರಳಿದ ಟೀಂ ಪ್ರಿಯಾಂಕ್‌ ಖರ್ಗೆ ಹಾಗೂ ಭಾಯ್‌ ಭಾಯ್‌ ಗ್ರೂಪ್‌ನ ಒಟ್ಟು 27 ಜನ ಕಾರ್ಯಕರ್ತರು, ಕಳೆದ ಐದಾರು ದಿನಗಳಿಂದ ಸಂಕಷ್ಟಕ್ಕೀಡಾದ ಜನರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಅತಿ ಹೆಚ್ಚು ಹಾನಿಗೀಡಾದ ವಿವಿಧ ಪ್ರದೇಶಗಳ ಕಾಡು ದಾರಿಗಳಲ್ಲಿ ಸಂಚರಿಸಿ ಹಸಿವೆಯಿಂದ ತತ್ತರಿಸಿರುವ ನಿರಾಶ್ರಿತರ ಒಡಲಿಗೆ ಅನ್ನ ಒದಗಿಸುವಲ್ಲಿ ಶ್ರಮಿಸುತ್ತಿದ್ದಾರೆ.
 
ಈ ವೇಳೆ ದೂರವಾಣಿ ಮೂಲಕ ಉದಯವಾಣಿಯೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ ಟೀಂ ಅಧ್ಯಕ್ಷ ಶಮಶೀರ್‌
ಅಹ್ಮದ್‌, ಕೇರಳ ರಾಜ್ಯದ ಜನರ ಜೀವನ ಭಯಾನಕ ಸ್ಥಿತಿಯಲ್ಲಿ ತಲುಪಿದೆ. ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾಕಷ್ಟು ಜನರು ಒಂದೆಡೆ ನೆಲೆನಿಂತಿದ್ದಾರೆ.

ಆದರೆ, ನಿರಾಶ್ರಿತ ಕೇಂದ್ರಗಳಿಗೆ ತೆರಳಲು ದಿಕ್ಕು ತೋಚದೆ ಬಹುತೇಕ ಜನರು ಸಂಕಷ್ಟದಲ್ಲಿದ್ದಾರೆ. ಅಂತಹ ತಾಣಗಳಿಗೆ
ತೆರಳಲು ರಸ್ತೆಗಳಿಲ್ಲ. ನಡೆದುಕೊಂಡು ಹೋಗಿ ಅಲ್ಲಿನ ಜನರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದೇವೆ. ಮಳೆಯಿಂದ ಕುಸಿದು ಬಿದ್ದ ಮನೆಗಳ ದುರಸ್ತಿ ಕಾರ್ಯದಲ್ಲೂ ನಾವು ತೊಡಗಿಕೊಂಡಿದ್ದೇವೆ. ಇಲ್ಲಿನ ಜನರ ಬದುಕು ಕಟ್ಟಿಕೊಡಲು ಸಹಾಯಕ್ಕೆ ನಿಲ್ಲುವವರ ಕೊರತೆ ಕಾಡುತ್ತಿದೆ ಎಂದು ಅಲ್ಲಿನ ಚಿತ್ರಣ ಬಿಡಿಸಿಟ್ಟರು.

ಆಹಾರದ ಪೊಟ್ಟಣ ಮಾಡಿ ನಿರಾಶ್ರಿತ ಪ್ರದೇಶಗಳತ್ತ ರವಾನಿಸುತ್ತಿದ್ದೇವೆ. ದಿನ ದಿನಕ್ಕೂ ಒಂದೊಂದು ಸ್ಥಳಗಳಿಗೆ ಭೇಟಿ ನೀಡಿ ಆಹಾರ ಧಾನ್ಯ ವಿತರಿಸುತ್ತಿದ್ದೇವೆ. ಇಲ್ಲಿನ ಕಾಂಗ್ರೆಸ್‌ ಶಾಸಕ ಮೋನ್ಸ್‌ ಜೋಸೆಫ್‌, ಸಮಾಜ ಸೇವಕಿ ಮೇರಿ ಸೇಬಸ್ಟೀನ್‌, ಮನಿಯಾರ ಗ್ರಾಮದ ಗ್ರಾಪಂ ಸದಸ್ಯ ಬೆನೊಯ್‌ ಇಮಾನ್ವೆಲ್‌ ಅವರು ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ದಿನ ಇದ್ದು ಜನರ ಕಷ್ಟಗಳಿಗೆ ಸ್ಪಂದಿಸುವ ಇಚ್ಛೆ ಹೊಂದಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಭಾಯ್‌ ಭಾಯ್‌ ಗ್ರೂಪ್‌ ಅಧ್ಯಕ್ಷ ಮಹ್ಮದ್‌ ಇರ್ಫಾನ್‌, ಸದಸ್ಯರಾದ ಅಸ್ಸಾಂ ರಹೆಮಾನ್‌ ಇನಾಮಾರ್‌, ದೊಡ್ಡಯ್ಯಸ್ವಾಮಿ, ಸಲ್ಮಾನ್‌ ಪಟೇಲ್‌, ತರಬೇಜ್‌ ಅಹ್ಮದ್‌, ಅಬೀದ್‌, ಸರ್ಫರಾಜ್‌, ಇಮ್ರಾನ್‌ ಸೇರಿದಂತೆ ಇತರರು ಸಂತ್ರಸ‚ರಿಗೆ ಆಹಾರ ಸರಬರಾಜು ಮಾಡುವಲ್ಲಿ ಕೈಜೋಡಿಸಿದ್ದಾರೆ.

ಪತ್ರಕರ್ತರ ಸಹಾಯದಿಂದ ನಿರಾಶ್ರಿತ ತಾಣಗಳ ಪತ್ತೆ ಪ್ರವಾಹ ಪೀಡಿತ ಕೇರಳ ರಾಜ್ಯದ ಕೊಟ್ಟಾಯಂ, ಅಲಾಬಿ, ಚಗ್ನಾಚಿ, ಮಾನ್ತಾನಂ, ಕೊಚ್ಚಿ ಹಾಗೂ ಪಲಕಾರ ಎಂಬ ಆರು ಜಿಲ್ಲೆಗಳಲ್ಲಿ ನಮ್ಮ ತಂಡ ಎರಡು ಭಾಗವಾಗಿ ಸಂತ್ರಸ್ತರ ಸೇವೆಯಲ್ಲಿ ತೊಡಗಿದೆ. ಒಂದು ತಂಡ ಆಹಾರ ಸಿದ್ಧತೆಯಲ್ಲಿ ತೊಡಗಿದರೆ, ಮತ್ತೂಂದು ತಂಡ ಆಹಾರ ಪದಾರ್ಥಗಳನ್ನು ಪ್ಯಾಕೆಟ್‌ ಮಾಡಿ ನಿರಾಶ್ರಿತರ ವಾಸಸ್ಥಳಗಳಿಗೆ ತಲುಪಿಸಲು ಶ್ರಮಿಸುತ್ತಿದೆ. ಒಂದು ಲಾರಿ, ಎರಡು ಕಾರು, ಒಂದು ಕ್ರೂಸರ್‌ ವಾಹನದೊಂದಿಗೆ ಆ.21 ರಂದು ವಾಡಿ ಪಟ್ಟಣದಿಂದ ಹೊರಟು 23ರಂದು ಮಧ್ಯಾಹ್ನ ಕೇರಳ ತಲುಪಿದ್ದೇವೆ. 18 ಟನ್‌ ಅಕ್ಕಿ, 2 ಟನ್‌ ತೊಗರಿ ಬೇಳೆ, 2 ಟನ್‌ ಉಪ್ಪು, 500
ಬ್ಲಾಂಕೆಟ್‌, ರಗ್ಗುಗಳು, ಅಡುಗೆ ಎಣ್ಣೆ, ಬಟ್ಟೆ, ಬಿಸ್ಕತ್‌, ಪಿನಾಯಿಲ್‌, ಮಕ್ಕಳಿಗಾಗಿ ಡೈಫರ್‌ ಸಾಮಾಗ್ರಿಗಳನ್ನು ತಂದಿದ್ದೇವೆ.

ಗಂಜಿ ಕೇಂದ್ರಗಳಿಗೆ ಬರುವವರಿಗೆ ಸರಕಾರ ಊಟ ಮತ್ತು ವಸತಿ ಸೌಲಭ್ಯ ಮಾಡುತ್ತಿದೆ. ಗಂಜಿ ಕೇಂದ್ರಗಳಿಗೆ ಬಾರದೆ
ಮನೆಯಲ್ಲಿ ಉಳಿದವರನ್ನು ಗುರುತಿಸಿ ನಮ್ಮ ತಂಡ ಆಹಾರ ತಲುಪಿಸುತ್ತಿದೆ. ನಿರಾಶ್ರಿತರ ಸ್ಥಳಗಳಿಗೆ ತಲುಪಲು ಇಲ್ಲಿನ ಇಬ್ಬರು ಪತ್ರಕರ್ತರು ನಮಗೆ ಸಹಾಯ ಮಾಡುತ್ತಿದ್ದಾರೆ. ನಾವು ಬುಧವಾರ ಕರ್ನಾಟಕಕ್ಕೆ ಮರಳುವ ಸಾಧ್ಯತೆಯಿದೆ ಎಂದುವಾಡಿ ಟೀಂ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷ ಶಮಶೀರ್‌ ಅಹ್ಮದ್‌ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ