ಮುಲ್ಲಾಮಾರಿ ಜಲಾಶಯದಿಂದ ನೀರು ಹರಿವು
Team Udayavani, Jul 4, 2022, 10:27 AM IST
ಚಿಂಚೋಳಿ: ಮಳೆಗಾಲ ಪ್ರಾರಂಭ ಆಗಿರುವುದರಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವ ನಿರೀಕ್ಷೆಯಿದ್ದು, ಈ ಹಿನ್ನೆಲೆ ಜಲಾಶಯದಿಂದ ಪರೀಕ್ಷಾರ್ಥ ಐದು ಗೇಟ್‌ಗಳಿಂದ ನೀರು ಹರಿ ಬಿಡಲಾಗಿದೆ ಎಂದು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಎಇಇ ಹಣಮಂತರಾವ್ ಪೂಜಾರಿ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವುದರಿಂದ ಶುಕ್ರವಾರ, ಶನಿವಾರ ಮತ್ತು ರವಿವಾರ ಮೂರು ದಿನಗಳಿಂದ ಎಲ್ಲ ಗೇಟ್ ಗಳನ್ನು ಸ್ವಲ್ಪಮಟ್ಟಿಗೆ ಮೇಲಕ್ಕೆ ಎತ್ತಿ ಮುಲ್ಲಾಮಾರಿ ನದಿಗೆ 75 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ ಎಂದು ತಿಳಿಸಿದರು.
ಚಿಮ್ಮನಚೊಡ, ತಾಜಲಾಪೂರ, ಕನಕಪೂರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಪೋಲಕಪಳ್ಳಿ, ಗಂಗನಪಳ್ಳಿ, ಗರಗಪಳ್ಳಿ, ಕರ್ಚಖೇಡ, ಪರದಾರಮೋತಕಪಳ್ಳಿ, ಜಟ್ಟೂರ ಗ್ರಾಮಸ್ಥರ ಮನವಿ ಮೇರೆಗೆ ನದಿಗೆ ನೀರು ಹರಿದು ಬಿಡಲಾಗಿದೆ ಎಂದು ಎಇಇ ಹಣಮಂತರಾವ ಪೂಜಾರಿ ತಿಳಿಸಿದ್ದಾರೆ.