ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ವಿರೋಧ ಬೇಡ: ಪ್ರತಾಪ್‌ಸಿಂಹ

ಗೋಣಿಕೊಪ್ಪದಲ್ಲಿ ಬಿಜೆಪಿ ಅಭಿನಂದನೆ ಸಮಾರಂಭ

Team Udayavani, Jun 11, 2019, 5:35 AM IST

ಮಡಿಕೇರಿ:ಜಿಲ್ಲೆಯಲ್ಲಿ ಕೈಗೊಳ್ಳುವ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸದೆ ಸಹಕಾರ ನೀಡಬೇಕೆಂದು ಸಂಸದ ಪ್ರತಾಪ್‌ಸಿಂಹ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗು ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಕೊಡಗಿನಲ್ಲಿ ರಸ್ತೆಗಳು ಕೂಡ ಸಂಪರ್ಕ ದೃಷ್ಟಿಯಿಂದ ಅಭಿವೃದ್ಧಿ ಕಾಣಬೇಕಿದೆ. ಕೇಂದ್ರದಿಂದ ಕೊಡಗಿಗೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಅನುಷ್ಠಾನಗೊಳಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಪ್ರತೀ ವರ್ಷ ಕೇಂದ್ರ ಸರ್ಕಾರವೇ ನಿರ್ವಹಣೆ ಮಾಡುವುದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಿದೆ ಎಂಬುದನ್ನು ಮನಗಾಣಬೇಕಿದೆ. ರಸ್ತೆ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಬೆರಳೆಣಿಕೆಯಷ್ಟು ಮಂದಿ ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸುವುದರಿಂದ ಗೊಂದಲ ಸೃಷ್ಟಿಯಾಗುತ್ತಿದೆ, ಆದರೆ ರಸ್ತೆ ನಿರ್ಮಾಣ ನಿಶ್ಚಿತವೆಂದು ಪ್ರತಾಪ್‌ಸಿಂಹ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಮಾತನಾಡಿ, ಮೋದಿ ಅವರು ಭಯ, ಭಕ್ತಿಯಿಂದ ನಡೆದುಕೊಂಡ ರೀತಿ ಇಷ್ಟು ಮಟ್ಟದ ಗೆಲುವು ತಂದು ಕೊಡಲು ಸಾಧ್ಯವಾಗಿದೆ. ಕಾರ್ಯಕರ್ತರ ಶ್ರಮ ಮೆಚ್ಚುವಂತಹದ್ದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್‌ ವೀರಾಜಪೇಟೆ ಮಂಡಲ ಅಧ್ಯಕ್ಷ ಅರುಣ್‌ ಭೀಮಯ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್‌, ಮಾಜಿ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಮುಖಂಡರುಗಳಾದ ರಘುನಾಣಯ್ಯ, ಬೊಟ್ಟಂಗಡ ರಾಜು, ರೀನಾ ಪ್ರಕಾಶ್‌, ತಾ. ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್‌, ಉಪಾಧ್ಯಕ್ಷೆ ನೆಲ್ಲೀರ ಚಲನ್‌, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್‌ ಕರುಂಬಯ್ಯ, ಆರ್‌ಎಂಸಿ ಅಧ್ಯಕ್ಷ ವಿನು ಚೆಂಗಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ಮಂಡಲ ಮಟ್ಟದ ಬೂತ್‌ ಮಟ್ಟದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಂಸದರನ್ನು ಉಮಾಮಹೇಶ್ವರಿ ದೇಗುಲ ಆವರಣದಿಂದ ಆರ್‌ಎಂಸಿ ವರೆಗೆ ಮೆರವಣಿಗೆ ಮೂಲಕ ತೆರಳಲಾಯಿತು. ಬಸ್‌ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ಸಂದರ್ಭ ಎಡಬಿಡಂಗಿ ಸರ್ಕಾರ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇಂದ್ರದಿಂದ ರೈತಪರ ಹಾಗೂ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಹ ಮತ್ತಷ್ಟು ಯೋಜನೆಗಳು ಬಜೆಟ್‌ನಲ್ಲಿ ಘೋಷಣೆಯಾಗಲಿವೆ. ಇದನ್ನು ಜನತೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಎಡಬಿಡಂಗಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಇದರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಮುಂದಿನ ದಿನಗಳಲ್ಲಿ ಬರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಪಡೆದು ಹೆಚ್ಚು ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದವರು ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ