‘ದೇವಯ್ಯ ಸಾಹಸ ಕಾರ್ಯದಿಂದ ದೇಶ ರಕ್ಷಣೆೆಗೆ ತೊಡಗಿದ್ದರು’

Team Udayavani, Sep 9, 2019, 5:32 AM IST

ಮಡಿಕೇರಿ : ಭಾರತ-ಪಾಕ್‌ ನಡುವೆ ಐದೂವರೆ ದಶಕಗಳ ಹಿಂದೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನ ಗೈದ ಕೊಡಗಿನ ಸ್ಕ್ವಾಡ್ರ‌ನ್‌ ಲೀಡರ್‌ ಅಜ್ಜಮಾಡ ದೇವಯ್ಯರ 54ನೇ ಪುಣ್ಯಸ್ಮರಣಾ ಕಾರ್ಯಕ್ರಮ, ನಗರದ ಖಾಸಗಿ ಬಸ್‌ ನಿಲ್ದಾಣದ ವೀರಯೋಧನ ವೃತ್ತದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಭಾವಪೂರ್ಣವಾಗಿ ನಡೆಯಿತು.

ಕೊಡವ ಮಕ್ಕಡ ಕೂಟ ಮತ್ತು ಅಜ್ಜಮಾಡ ದೇವಯ್ಯ ಕುಟುಂಬಸ್ಥರ ಸಹಯೋಗದಲ್ಲಿ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿಯ ದೇವಯ್ಯ ವೃತ್ತದಲ್ಲಿ ನಡೆದ‌ ಕಾರ್ಯಕ್ರಮದಲ್ಲಿ ವೀರ ಯೋಧನ ಭಾವಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು, ಮಾಜಿ ಸೈನ್ಯಾಧಿಕಾರಿಗಳು, ಮಾಜಿ ಯೋಧರು, ಜನಪ್ರತಿನಿಧಿಗಳು ಹಾಗೂ ಹಲವು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭ ನಿವೃತ್ತ ಏರ್‌ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ವಿಧಾನ ಪರಿಷತ್‌ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಸುನಿಲ್ ಸುಬ್ರಮಣಿ ಮಾತನಾಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ನಿವೃತ್ತ ಮೇಜರ್‌ ಬಿ.ಎ. ನಂಜಪ್ಪ ಅವರು ಮಾತನಾಡಿ, ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ತಮ್ಮ ಹಳೆಯ ವಿಮಾನದ ಮೂಲಕ ಕೆಡಹುವ ಮೂಲಕ ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ಅವರು ಆ ಸಂದರ್ಭ ವೀರಮರಣವನ್ನಪ್ಪಿದರು. ಈ ವಿಚಾರವನ್ನು ಆ ಸಂದರ್ಭ ಪಾಕ್‌ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದ ಅಮ್ಜದ್‌ ಹುಸೇನ್‌ ಅವರು ಅನಂತರದ ದಿನಗಳಲ್ಲಿ ತಿಳಿಸಿದ್ದಲ್ಲದೆ, ವಿಮಾನದ ಎರಡೂ ರೆಕ್ಕೆಗಳಿಗೆ ಬೆಂಕಿ ತಗುಲಿದ್ದರೂ ಅದರ ಮೂಲಕವೇ ಯುದ್ಧ ಮಾಡಿದ ಸ್ಕ್ವಾ.ಲೀ. ದೇವಯ್ಯ ಅವರ ಸಾಹಸವನ್ನು ಸ್ಮರಿಸಿಕೊಂಡು, ವಿಂಗ್ಸ್‌ ಆಫ್ ಫ‌ಯರ್‌ ಎಂದು ಉದ್ಗರಿಸಿದ್ದರೆಂದು ಸ್ಮರಿಸಿಕೊಂಡರು. ಎ.ಪಿ.ಕುಶಾಲಪ್ಪ, ಎ.ಎಸ್‌.ನಂಜಪ್ಪ, ಎ.ಎನ್‌. ಬೆಳ್ಯಪ್ಪ, ಎ.ಎಂ.ರಮೇಶ್‌ ಉಪಸ್ಥಿರಿದ್ದರು.

ಯೋಧನ ವಿಗ್ರಹ ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ಅವರ ಸ್ಮಾರಕ ಟ್ರಸ್ಟ್‌ ನ ಪ್ರಮುಖರಾದ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಈಗಾಗಲೆ ಮಹಾನ್‌ ಯೋಧನ ವಿಗ್ರಹವನ್ನು ನಿರ್ಮಿಸಲಾಗಿದ್ದು, ಮಳೆಗಾಲದ ಬಳಿಕ ಅದನ್ನು ಈ ವೃತ್ತದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆಗಳನ್ನು ನಡೆಸಲಾಗಿದೆಯೆಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಮಳೆ ಕಡಿಮೆಯಾದ‌ ತಕ್ಷಣ ಸ್ವ್ಕಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ಅವರ ವಿಗ್ರಹ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸಿ, ಇದೇ ಡಿ.24 ರಂದು ವಿಗ್ರಹವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ