‘ಕಾಫಿ ತೋಟಗಳಲ್ಲಿ ಬೆಣ್ಣೆಹಣ್ಣು ಮಿಶ್ರ ಬೆಳೆಯಾಗಿ ಬೆಳೆಯಿರಿ’

Team Udayavani, Jun 19, 2019, 6:10 AM IST

ಮಡಿಕೇರಿ : ಭಾರತೀಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಸಂಸ್ಥೆ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ರಾಜ್ಯ ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಬೆಣ್ಣೆಹಣ್ಣು ಮತ್ತು ಮಡಹಾಗಲದ ವೈವಿಧ್ಯತಾ ಮೇಳ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ಸಂಸ್ಥೆಯು ಆಯೋಜಿಸಿರುವ ಬೆಣ್ಣೆಹಣ್ಣು ಮತ್ತು ಮಡಹಾಗಲದ ಮೇಳದಲ್ಲಿ ವಿವಿಧ ತಳಿಗಳನ್ನು ಪರಿಚಯಿಸುತ್ತಿದ್ದು, ಇದರ ಅನುಕೂಲವನ್ನು ಈ ಜಿಲ್ಲೆಯ ರೈತರು ಪಡೆಯುವಂತಾಗಬೇಕು. ಕಾಫಿ ತೋಟ ಗಳಲ್ಲಿ ಕಿತ್ತಳೆಯೊಂದಿಗೆ ಬೆಣ್ಣೆಹಣ್ಣು ಮಿಶ್ರ ಬೆಳೆಯಾಗಿ ಬೆಳೆದು ಹೆಚ್ಚಿನ ಆದಾಯ ಗಳಿಸುವಂತೆ ಅವರು ತಿಳಿಸಿದರು.

ಸಂಶೋಧನಾ ಕೇಂದ್ರವು ನಶಿಸಿ ಹೋಗುತ್ತಿರುವ ಕೊಡಗಿನ ಕಿತ್ತಳೆಯ ಪುನಃಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಿ ಕೊಡಗಿನ ಎಲ್ಲ ವಿಧದ ತೊಟಗಾರಿಕಾ ಬೆಳೆಗಳನ್ನು ಸಂರಕ್ಷಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಕಾಫಿ ಬೋರ್ಡ್‌ನ ಮಾಜಿ ಅಧ್ಯಕ್ಷರು ಹಾಗೂ ಕಾಫಿ ಬೆಳೆಗಾರರಾದ ಬೋಸ್‌ ಮಂದಣ್ಣ ಅವರು ಮಾತನಾಡಿ ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನ ಕೇಂದ್ರವು ಬೆಣ್ಣೆಹಣ್ಣಿನ ವಿವಿಧ ತಳಿಗಳನ್ನು ಸಂಶೋಧಿಸಿದ್ದು ಕಾಫಿ ತೋಟಗಳಲ್ಲಿ ಉತ್ತಮ ಮಿಶ್ರ ಬೆಳೆಯಾಗಿ ಬೆಳೆಸಿ ಉತ್ತಮ ಆದಾಯ ಪಡೆಯಬಹುದು. ಬೆಣ್ಣೆಹಣ್ಣಿನಿಂದ ವಿವಿಧ ಮೌಲ್ಯಾಧಾರಿತ ಪದಾರ್ಥಗಳನ್ನು ಉತ್ಪಾದಿಸಿ ದೀರ್ಘ‌ಕಾಲಿಕ ಆದಾಯ ಗಳಿಸಬಹುದು. ಕಾಫಿ ತೋಟದಲ್ಲಿ ಯಾವ ರೀತಿ ಬೆಣ್ಣೆಹಣ್ಣಿನ ಮರಗಳನ್ನು ಬೆಳೆಯಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರಿನ ಮಡಹಾಗಲದ ಬೆಳೆಗಾ ರರಾದ ಜಿ.ಪಿ.ಶೆಣೈಯವರು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಮಡಹಾಗಲದ ಕೃಷಿಯನ್ನು ಹನ್ನೆರಡು ವರ್ಷಗಳಿಂದ ನಡೆಸುತ್ತಾ ಬಂದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಭಾರತೀಯ ಕೃಷಿ ಸಂಶೋಧನೆ ಸಂಸ್ಥೆಯು ಕಳೆದ ವರ್ಷ 13,224 ಕೋಟಿ ರೂ.ಆದಾಯ ಗಳಿಸಿದ್ದು ಆರ್ಥಿಕತೆಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಸಂಸ್ಥೆಯು ಹವಾಮಾನ ಬದಲಾವಣೆಗೆ ಅನು ಗುಣವಾಗಿ ವಿಶೇಷ ತಳಿಗಳ ಸಂಶೋಧನೆ ನಡೆಸಿ ರೋಗ ನಿರೋಧಕ ತಳಿಯ ವಿವಿಧ ತರಕಾರಿ ಬೆಳೆಗಳನ್ನು ರೈತರಿಗೆ ಪರಿಚಯಿಸಿದ್ದು ಇದರಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನ ಕೇಂದ್ರದ ಮುಖ್ಯಸ್ಥರಾದ ಡಾ| ಭಾರತಿ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವೀರೇಂದ್ರ ಕುಮಾರ್‌ ಉಪಸ್ಥಿತದ್ದರು. ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನ ಕೇಂದ್ರದ ಸಂಜು ಜಾರ್ಜ್‌ ವಂದಿಸಿದರು.

ರೈತ ವಿಜ್ಞಾನಿ ಇದ್ದಂತೆ

ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯ ನಿರ್ದೇಶಕರಾದ ಡಾ| ಎಂ.ಆರ್‌ .ದಿನೇಶ್‌ ಅವರು ಮಾತನಾಡಿ ಭಾರತೀಯ ರೈತ ಒಬ್ಬ ವಿಜ್ಞಾನಿ ಇದ್ದಂತೆ ಇವರಲ್ಲಿ ಪಾರಂಪರಿಕ ಕೃಷಿ ಜ್ಞಾನವು ಅತ್ಯುನ್ನತ ಮಟ್ಟದಲ್ಲಿದ್ದು ಇದನ್ನು ಬಳಸಿಕೊಂಡು ಕೆಲವು ರೈತರು ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿದ್ದಾರೆ ಎಂದು ಅವರು ನುಡಿದರು. ಭಾರತ ಸರಕಾರವು 2022 ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗೊಳ್ಳಲಿದೆ ಎಂದು ತಿಳಿಸಿದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ